
ಕರ್ನಾಟಕಪ್ರಮುಖ ಸುದ್ದಿ
ಎಚ್ಡಿಕೆಗೆ ಅನಾರೋಗ್ಯ : ವಿಕ್ರಂ ಆಸ್ಪತ್ರೆಗೆ ದಾಖಲು
ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಕ್ಷದ ಕಾರ್ಯಕ್ರಮಗಳಿಗಾಗಿ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಚಿತ್ರದುರ್ಗ, ಮೈಸೂರು, ಕೊಡಗು ಸೇರಿದಂತೆ ಹಲವು ಜಿಲ್ಲೆಗಳ ಪ್ರವಾಸ ಮಾಡಿದ್ದರು. ಬಿಸಿಲಿನ ತಾಪ ಹಾಗೂ ನಿರಂತರ ಪ್ರಯಾಣ ಜೊತೆಗೆ ಹೋದಲ್ಲೆಲ್ಲಾ ಅಭಿಮಾನಿಗಳು ಪಟಾಕಿ ಸಿಡಿಸಿದ್ದರಿಂದ ಅದರ ಹೊಗೆಯಿಂದಾಗಿ ಕೆಮ್ಮು ಜ್ವರ ಬಂದಿದೆ ಎಂದು ಕುಮಾರಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೈದ್ಯರು 5 ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿರುವುದರಿಂದ ಈ ಮೊದಲೇ ನಿಗದಿಪಡಿಸಿದ್ದ ಎಲ್ಲ ಕಾರ್ಯಕ್ರಮಗಳನ್ನು ಕುಮಾರಸ್ವಾಮಿ ರದ್ದುಪಡಿಸಿದ್ದಾರೆ. ಕುಮಾರಸ್ವಾಮಿ ಅವರಿಗೆ ಅವಶ್ಯಕವಿರುವ ಎಲ್ಲ ಪರೀಕ್ಷೆಗಳನ್ನೂ ನಡೆಸಲಾಗಿದೆ. ಇನ್ನೆರಡು ದಿನಗಳಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ವಿಕ್ರಂ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.