ಮೈಸೂರು

ಬುಲೆಟ್ ಮೋಟರ್ ಸೈಕಲ್‍ಗೆ ನಕಲಿ ನೊಂದಣಿ ಸಂಖ್ಯೆ ಹಾಕಿಕೊಂಡು  ಚಾಲನೆ  :  ಬುಲೆಟ್ ಬೈಕ್ ವಶ

ಮೈಸೂರು,ಡಿ.9:-  06-12-2019 ರಂದು  ಡಿ.ಚಂದ್ರು, ಕುವೆಂಪುನಗರ , ಮೈಸೂರು ಅವರು ತಮ್ಮ ಬಾಬ್ತು ಡಿಯೋ ಸ್ಕೂಟರ್ ನಂ. ಕೆಎ-09, ಹೆಚ್‍ಜೆ-0597 ವಿರುದ್ಧ  ಸಂಚಾರ ನಿಯಮ ಉಲ್ಲಂಘನೆಗಳ ಸಂಬಂಧ 39  ನೋಟಿಸ್ ಬಂದಿದ್ದು, ಈ ಸಂಬಂಧ ಪೊಲೀಸ್ ಆಯುಕ್ತರವರ ಕಛೇರಿಯ ಟ್ರಾಫಿಕ್ ಮೇನೆಜ್‍ಮೆಂಟ್ ವಿಭಾಗದಲ್ಲಿ ಫೋಟೊ ಪರಿಶೀಲಿಸಲಾಗಿ,  ಬುಲೆಟ್ ಮೋಟಾರ್ ಸೈಕಲ್ ಸವಾರನೊಬ್ಬ  ಡಿಯೋ ಸ್ಕೂಟರ್‍ನ ನೊಂದಣಿ ಸಂಖ್ಯೆ ಕೆಎ-09, ಹೆಚ್‍ಜೆ-0597 ಯನ್ನು ತನ್ನ ಬುಲೆಟ್ ಬೈಕ್‍ನಲ್ಲಿ ಬಳಕೆ ಮಾಡುತ್ತಿರುವುದು ತಿಳಿದು ಬಂದಿದ್ದು, ಈ ಬುಲೆಟ್ ಬೈಕ್ ಹೆಚ್ಚಾಗಿ ಪಡುವಾರಹಳ್ಳಿ ಸರ್ಕಲ್ ಬಳಿ ಓಡಾಡುತ್ತಿರುವುದು ತಿಳಿದು ಬಂದ ಮೇರೆಗೆ ಬುಲೆಟ್ ಸವಾರನ ಮೇಲೆ ಕ್ರಮ ಕೈಗೊಳ್ಳುವಂತೆ   ಚಂದ್ರು ಅವರು ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ದೂರಿನ ಮೇರೆಗೆ  ಈ ಬುಲೆಟ್ ವಾಹನವನ್ನು ಪತ್ತೆ ಮಾಡುವ ಬಗ್ಗೆ  ಸಂಚಾರ ವಿಭಾಗದ ಎ.ಸಿ.ಪಿ. ಅವರು  ನಿಸ್ತಂತು ಮುಖಾಂತರ ಎಲ್ಲಾ ಸಂಚಾರ ಪೊಲೀಸರಿಗೆ ತಿಳಿಸಿದ್ದು, ಮಾಹಿತಿ ತಿಳಿಸಿದ  2 ಗಂಟೆಯಲ್ಲೇ  ಎನ್.ಆರ್. ಸಂಚಾರ ಠಾಣಾ ಆರಕ್ಷಕ ನಿರೀಕ್ಷಕರು ತಮ್ಮ ಸಿಬ್ಬಂದಿಯವರ ಜೊತೆ  ಇರ್ವಿನ್ ರಸ್ತೆಯಲ್ಲಿ   ಬುಲೆಟ್ ಮೋಟಾರ್ ಸೈಕಲನ್ನು  ಪತ್ತೆ ಮಾಡಿದ್ದಾರೆ,  ಈ ವಾಹನದ ಆರ್.ಸಿ. ಪುಸ್ತಕವನ್ನು ಪರೀಶೀಲಿಸಿದಾಗ ಬುಲೆಟ್ ಮೋಟಾರ್ ಸೈಕಲ್‍ನ ಅಸಲಿ ವಾಹನ ಸಂಖ್ಯೆ ಕೆಎ09-ಹೆಚ್‍ಜೆ 3597 ಆಗಿದ್ದು,  ವಾಹನ ಸವಾರ  ಮೋಟಾರ್ ಸೈಕಲ್ ಮುಂಭಾಗ ಮತ್ತು ಹಿಂಭಾಗ ಹೊಂಡಾ ಡಿಯೋ ಸ್ಕೂಟರ್ ಸಂಖ್ಯೆ ಕೆಎ09-ಹೆಚ್‍ಜೆ 0597 ರ ನೋಂದಣಿ ಸಂಖ್ಯೆ ಅಳವಡಿಸಿಕೊಂಡಿರುವುದು ಕಂಡು ಬಂದಿದೆ.  ಈ ಸಂಬಂಧ ಬುಲೆಟ್ ಮೋಟರ್ ಸೈಕಲ್  ಮತ್ತು ವಾಹನ ಮಾಲೀಕ ರವಿ ಬಿನ್ ನಾಗೇಂದ್ರ, ಮನೆ ನಂ: 2569, ಕೆ.ಜಿ. ಕೊಪ್ಪಲು, ಮೈಸೂರು ಎಂಬಾತನನ್ನು ಮುಂದಿನ ಕ್ರಮಕ್ಕಾಗಿ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ನೀಡಿರುತ್ತಾರೆ.

ಸಂಚಾರ ನಿಯಮ ಉಲ್ಲಂಘನೆಗಳ ದಂಡವನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಈ ರೀತಿಯಾಗಿ ವಾಹನ ಸಂಖ್ಯೆ ಬದಲಾವಣೆ ಮಾಡಿಕೊಂಡಿರುವುದಾಗಿ ಆರೋಪಿ ರವಿ ತಿಳಿಸಿದ್ದಾನೆ.

ವಾಹನಗಳ  ನೋಂದಣಿ ಸಂಖ್ಯೆಯನ್ನು ನಕಲಿಯಾಗಿ ಉಪಯೋಗಿಸುವುದು  ಕಾನೂನು ಬಾಹಿರವಾಗಿದ್ದು, ಕ್ರಿಮಿನಲ್ ಸ್ವರೂಪದ ಅಪರಾಧವಾಗಿರುತ್ತದೆ. ಈ ರೀತಿಯಾಗಿ ನಕಲಿ ನೋಂದಣಿ ಸಂಖ್ಯೆಯನ್ನು ಉಪಯೋಗಿಸುತ್ತಿರುವುದು ಕಂಡು ಬಂದಲ್ಲಿ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು.  ನಕಲಿ ನಂಬರ್ ಉಪಯೋಗಿಸುತ್ತಿರುವುದು ಕಂಡಬಂದಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.

ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತ   ಕೆ.ಟಿ. ಬಾಲಕೃಷ್ಣ,   ಮಾರ್ಗದರ್ಶನದಲ್ಲಿ  ಡಿ.ಸಿ.ಪಿ.   ಬಿ.ಟಿ. ಕವಿತ   ಉಸ್ತುವಾರಿಯಲ್ಲಿ ಸಂಚಾರ ವಿಭಾಗದ ಎ.ಸಿ.ಪಿ.    ಸಂದೇಶ್ ಕುಮಾರ್   ನೇತೃತ್ವದಲ್ಲಿ ಎನ್.ಆರ್. ಸಂಚಾರ ಠಾಣೆಯ ಪಿ.ಐ. .ಆರ್. ದಿವಾಕರ್ ಸಿಬ್ಬಂದಿಗಳಾದ .ಕಲೀಂ ಪಾಷ ಮತ್ತು ನಾಗೇಶ್   ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: