ಪ್ರಮುಖ ಸುದ್ದಿ

ಉಪಚುನಾವಣೆಯಲ್ಲಿ ಸೋಲು : ನೈತಿಕ ಹೊಣೆ ಹೊತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ

ರಾಜ್ಯ(ಬೆಂಗಳೂರು) ಡಿ.9:- ಪಕ್ಷ ಬಿಟ್ಟು ಹೋಗುವವರಿಗೆ ಜನತಾ ನ್ಯಾಯಾಲಯ ಒಳ್ಳೆಯ ತೀರ್ಪು ಕೊಡಬಹುದು ಎಂದು ತಿಳಿದುಕೊಂಡಿದ್ದೆವು. ಬಿರುಸಿನ ಪ್ರಚಾರ ಕೂಡ ನಡೆಸಿದ್ದೆವು. ಹಗಲು ರಾತ್ರಿ ಕಾರ್ಯಕರ್ತರು ಶ್ರಮಿಸಿದರು. ಸರ್ಕಾರ ಬೀಳಿಸಲು ಕಾರಣಕರ್ತರಾದವರಿಗೆ ಒಳ್ಳೆಯ ಪಾಠ ಕಲಿಸಬೇಕೆಂದು ತೀರ್ಮಾನಿಸಿ ಶ್ರಮಿಸಿದ್ದೆವು. ಜನತಾ ನ್ಯಾಯಾಲಯದ ತೀರ್ಪು ಪ್ರಜಾಪ್ರಭುತ್ವವ್ಯವಸ್ಥೆಯಲ್ಲಿ ಅಂತಿಮ. ಅದನ್ನು ಗೌರವಿಸುತ್ತೇವೆ. ಅದನ್ನು ತಪ್ಪಾಗಿ ಗ್ರಹಿಸಲು ಹೋಗಲ್ಲ ಎಂದು ಕೆಪಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.

ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹುಣಸೂರು ಕಾಂಗ್ರೆಸ್ ಅಭ್ಯರ್ಥಿ ಹೆಚ್,ಪಿ.ಮಂಜುನಾಥ್, ಶಿವರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್, ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ, ಗೆದ್ದ ಬಿಜೆಪಿ ಅಭ್ಯರ್ಥಿಗಳನ್ನು ಅಭಿನಂದಿಸಿದರು. ಅಭ್ಯರ್ಥಿಗಳ   ಆಯ್ಕೆ ಸೇರಿದಂತೆ ಎಲ್ಲವನ್ನೂ ಎಐಸಿಸಿಯವರು ಮುಕ್ತ ಅವಕಾಶ ಮಾಡಿಕೊಟ್ಟಿದ್ದರು. ಅವರು ಯಾರೂ ಮಧ್ಯಪ್ರವೇಶಿಸಿರಲಿಲ್ಲ. ಕಳೆದ ಚುನಾವಣೆಯ ಪೂರ್ವದಲ್ಲಿ ಜುಲೈ ನಲ್ಲಿ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ನನಗೆ ಜವಾಬ್ದಾರಿ ವಹಿಸಿದ್ದರು. ಅದರಂತೆ ಜವಾಬ್ದಾರಿ ನಿರ್ವಹಿಸಿಕೊಂಡು ಬಂದಿದ್ದೆ. ನಾನು ಅಧ್ಯಕ್ಷ ಸ್ಥಾನ ವಹಿಸಿದ ಬಳಿಕ ಒಂದು ದಿನ ಕೂಡ ಶಾಂತ ರೀತಿಯ ವಾತಾವರಣ ಇರಲಿಲ್ಲ. ಶಕ್ತಿಮೀರಿ ಕೆಲಸ ಮಾಡಲು, ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮತ್ತು ಪಕ್ಷವನ್ನು ಒಳ್ಳೆಯ ರೀತಿಯಲ್ಲಿ ಕೊಂಡೊಯ್ಯಬೇಕೆಂದು ಪ್ರಯತ್ನ ಮಾಡಿದೆ. ಈ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರಿಗೆ ಹಾಗೂ  ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದರು.  (ಎಸ್.ಎಚ್)

Leave a Reply

comments

Related Articles

error: