ಪ್ರಮುಖ ಸುದ್ದಿ

ಜಿ.ಪಂ ಕೆಡಿಪಿ ಸಭೆ : ಕಾಡಾನೆ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಿ : ಅಧ್ಯಕ್ಷ ಬಿ.ಎ.ಹರೀಶ್ ಸೂಚನೆ

ರಾಜ್ಯ( ಮಡಿಕೇರಿ) ಡಿ.11 :- ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ವಿಪರೀತವಾಗಿದ್ದು, ಕಾಡಾನೆ ಹಾವಳಿಯಿಂದಾಗಿ ಮಾನವ ಪ್ರಾಣ ಹಾನಿ, ಬೆಳೆ ಹಾನಿ ಉಂಟಾಗುತ್ತಿದ್ದು, ಜನರು ಭಯ ಭೀತಿಯಿಂದ ಬದುಕು ಸಾಗಿಸುವಂತಾಗಿದೆ. ಆದ್ದರಿಂದ ಕೂಡಲೇ ಕಾಡಾನೆಗಳನ್ನು ಸ್ಥಳಾಂತರಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯಿತಿ ನೂತನ ಭವನದಲ್ಲಿ ನಡೆದ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಸಂಬಂಧ ಮಾಹಿತಿ ನೀಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ದಯಾನಂದ, ಮತ್ತಿತರರು ಈಗಾಗಲೇ 5 ಕಾಡಾನೆಗಳನ್ನು ಸ್ಥಳಾಂತರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲೆಯ ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ ರಸ್ತೆಗಳ ಗುಂಡಿಯನ್ನು ಶೀಘ್ರ ಮುಚ್ಚುವಂತೆ ಸಂಬಂಧಪಟ್ಟ ಎಂಜಿನಿಯರ್‍ಗಳಿಗೆ ಜಿ.ಪಂ. ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ನಿರ್ದೇಶನ ನೀಡಿದರು.
ಈಗಾಗಲೇ ಮಳೆಗಾಲ ಮುಗಿದಿರುವುದರಿಂದ ಜಿಲ್ಲೆಯ ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಗಳ ರಸ್ತೆ ಸರಿಪಡಿಸಬೇಕು. ಆ ನಿಟ್ಟಿನಲ್ಲಿ ತುರ್ತು ಕ್ರಮವಹಿಸುವಂತೆ ಜಿ.ಪಂ.ಅಧ್ಯಕ್ಷರು ನಿರ್ದೇಶನ ನೀಡಿದರು.
ಅಂಬೇಡ್ಕರ್, ಬಸವ, ಇಂದಿರಾ ಆವಾಸ್ ಯೋಜನೆಯಡಿ ಮನೆಗಳನ್ನು ನಿರ್ಮಿಸಬೇಕಿದೆ. ಆ ನಿಟ್ಟಿನಲ್ಲಿ ಮರಳು ತೆಗೆಯಲು ಅವಕಾಶ ನೀಡಬೇಕು. ಮರಳು ದೊರೆಯುವಂತೆ ನೋಡಿಕೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗೆ ಜಿ.ಪಂ. ಅಧ್ಯಕ್ಷರು ನಿರ್ದೇಶನ ನೀಡಿದರು.
ಬಡವರು ಮನೆ ನಿರ್ಮಿಸಿಕೊಳ್ಳಲು ಹತ್ತಿರದ ಹೊಳೆ ಬದಿ ಮರಳು ತೆಗೆದರೆ ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಇದು ಸರಿಯೇ, ಬಡವರು ಮನೆ ನಿರ್ಮಿಸಿಕೊಳ್ಳುವುದಾದರೂ ಹೇಗೆ ಎಂದು ಜಿ.ಪಂ. ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ಪ್ರಶ್ನಿಸಿದರು.
ಈ ಕುರಿತು ವಿಚಾರ ಪ್ರಸ್ತಾಪಿಸಿದ ಜಿ.ಪಂ.ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಅವರು ಬಡವರು ಹೊಳೆ ಬದಿ ಮರಳು ಸಂಗ್ರಹಣೆ ಮಾಡಿಕೊಂಡಿದ್ದರೆ, ಅಂತವರ ವಿರುದ್ದ ಪ್ರಕರಣ ದಾಖಲಿಸಲಾಗುತ್ತದೆ. ಇಂತಹ ಪ್ರಕರಣಗಳನ್ನು ವಾಪಸ್ಸು ಪಡೆಯುವಂತೆ ಅವರು ಅಧಿಕಾರಿಗೆ ಸೂಚಿಸಿದರು.
ಜಿಲ್ಲೆಯ 17 ಕಡೆಗಳಲ್ಲಿ ಮರಳು ತೆಗೆಯಲು ಅನುಮತಿ ದೊರೆತಿದ್ದು, ಮರಳು ಪಡೆಯಲು ಅವಕಾಶ ಮಾಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ರೇಷ್ಮ ಅವರು ತಿಳಿಸಿದರು.
ಭತ್ತ ಕೊಯ್ಲು ಕಾರ್ಯ ನಡೆಯುತ್ತಿದ್ದು, ಭತ್ತ ಖರೀದಿ ಕೇಂದ್ರ ತೆರೆಯಬೇಕು ಎಂದು ಜಿ.ಪಂ.ಅಧ್ಯಕ್ಷರು ಸೂಚಿಸಿದರು. ಈ ಕುರಿತು ವಿಷಯ ಪ್ರಸ್ತಾಪಿಸಿದ ಜಿ.ಪಂ.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಿ.ಕೆ.ಬೋಪಣ್ಣ ಅವರು ಭತ್ತ ಕಟಾವು ಕಾರ್ಯ ನಡೆಯುತ್ತಿದ್ದು, ಕೂಡಲೇ ಭತ್ತ ಖರೀದಿ ಕೇಂದ್ರ ತೆರೆಯಬೇಕು ಎಂದು ಅವರು ಸಲಹೆ ಮಾಡಿದರು.
ಮಳೆಹಾನಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಬೆಳೆ ಹಾನಿ ಪರಿಹಾರ ರೈತರ ಖಾತೆಗೆ ಜಮೆಯಾಗಬೇಕು ಎಂದು ಜಿ.ಪಂ. ಅಧ್ಯಕ್ಷರು ನಿರ್ದೇಶನ ನೀಡಿದರು.
ಎಸ್‍ಎಸ್‍ಎಲ್‍ಸಿ ಫಲಿತಾಂಶ ಶೇಕಡವಾರು ಹೆಚ್ಚಳಕ್ಕೆ ಅಗತ್ಯ ತಯಾರಿ ಮಾಡಬೇಕು. ರಾಜ್ಯದ ರ್ಯಾಂಕ್‍ನಲ್ಲಿ 10 ರೊಳಗೆ ಕೊಡಗು ಜಿಲ್ಲೆ ಇರುವಂತೆ ಶ್ರಮಿಸುವಂತೆ ಜಿ.ಪಂ. ಅಧ್ಯಕ್ಷರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಿ.ಕೆ.ಬೋಪಣ್ಣ ಅವರು ವಿದ್ಯಾರ್ಥಿಗಳ ಕ್ರೀಯಾಶೀಲತೆ ಮತ್ತು ಚಲನಶೀಲತೆಗೆ ಒತ್ತು ನೀಡುವ ನಿಟ್ಟಿನಲ್ಲಿ ಬೆಳಗ್ಗಿನ ವೇಳೆಯಲ್ಲಿ ಯೋಗಕ್ಕೆ ಆದ್ಯತೆ ನೀಡಬೇಕು ಎಂದು ಅವರು ಸಲಹೆ ಮಾಡಿದರು.
ಹಾಗೆಯೇ ಸ್ಥಳೀಯ ಗ್ರಾ.ಪಂ., ತಾ.ಪಂ., ಜಿ.ಪಂ. ಸದಸ್ಯರನ್ನು ಆಹ್ವಾನಿಸಿ ಪೋಷಕರ ಸಭೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿ.ಕೆ.ಬೋಪಣ್ಣ ಅವರು ಸಲಹೆ ಮಾಡಿದರು.
ಈ ಬಗ್ಗೆ ಮಾಹಿತಿ ನೀಡಿದ ಶಿಕ್ಷಣಾಧಿಕಾರಿ ಕಾಶಿನಾಥ್ ಅವರು ಈ ಸಂಬಂಧ ಉಪ ನಿರ್ದೇಶಕರ ಗಮನಕ್ಕೆ ತಂದು ಪತ್ರ ಬರೆಯಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಜಿ.ಪಂ.ಉಪ ಕಾರ್ಯದರ್ಶಿ ಗುಡೂರು ಭೀಮಸೇನ ಅವರು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಸಿಇಟಿ ಮಾದರಿಯಲ್ಲಿ ತರಬೇತಿ ನೀಡಿ ಫಲಿತಾಂಶ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಲೋಕೇಶ್ ಸಾಗರ್ ಅವರು ಮಾತನಾಡಿ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಖಾಸಗಿ ಶಾಲೆಗಳು ಹೆಚ್ಚಾಗುತ್ತಿವೆ. ಖಾಸಗಿ ಶಾಲೆಗಳು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕುಶಾಲನಗರದಲ್ಲಿಯೇ 20 ಖಾಸಗಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರಿ ಶಾಲೆಗಳನ್ನು ಉಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕಿದೆ ಎಂದರು.

ಕುಶಾಲನಗರದ ಕಲಾಭವನ ಕಾಮಗಾರಿ ಆರಂಭಿಸಿ ಏಳು ವರ್ಷವಾಗಿದೆ. ಆದರೂ ಇನ್ನೂ ಸಹ ಉದ್ಘಾಟನೆಯಾಗಿಲ್ಲ. ಸದ್ಯ ಉದ್ಘಾಟನೆ ಮಾಡಿದ್ದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗಲಿದೆ ಎಂದು ಲೋಕೇಶ್ ಸಾಗರ್ ಅವರು ಒತ್ತಾಯಿಸಿದರು.
ವಿವಿಧ ಇಲಾಖೆಗಳ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ವ್ಯಾಪಕ ಪ್ರಚಾರ ಕಾರ್ಯಕ್ರಮಗಳನ್ನು ವಿವಿಧ ಇಲಾಖೆಗಳು ಗ್ರಾಮ ಮಟ್ಟದಲ್ಲಿ ಹಮ್ಮಿಕೊಳ್ಳಬೇಕು. ರೇಡಿಯೋದಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಬೇಕು ಎಂದು ಅವರು ಸಲಹೆ ಮಾಡಿದರು.
ಜಿಲ್ಲೆಯ ಎಲ್ಲಾ ಗ್ರಾ.ಪಂ.ವ್ಯಾಪ್ತಿಯಲ್ಲಿ ಕನ್ನಡ ನಾಮಫಲಕ ಅಳವಡಿಸುವ ನಿಟ್ಟಿನಲ್ಲಿ ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕು ಗ್ರಾ.,ಪಂ. ಮಟ್ಟದಲ್ಲಿ ಸುಧಾರಣೆಯಾಗುತ್ತಿದೆ. ಅದೇ ರೀತಿ ವಿರಾಜಪೇಟೆ ತಾಲ್ಲೂಕಿನಲ್ಲಿಯೂ ಸಹ ಕನ್ನಡ ನಾಮಫಲಕ ಕಡ್ಡಾಯವಾಗಿ ಅಳವಡಿಸುವಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಸಲಹೆ ಮಾಡಿದರು.
ಈ ಸಂಬಂಧ ಮಾತನಾಡಿದ ಲೋಕೋಪಯೋಗಿ ಇಇ ಇಬ್ರಾಹಿಂ ಅವರು ಕುಶಾಲನಗರದ ಕಲಾಭವನ ಕಾಮಗಾರಿ ಪೂರ್ಣಗೊಂಡಿದ್ದು, ಒಳ ವಿನ್ಯಾಸ ಮಾತ್ರ ಬಾಕಿ ಇದೆ. 15 ದಿನದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಯವರು ಮತ್ತು ಸಿಬ್ಬಂದಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಕ್ರೀಡಾ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆ ಕೈಗೊಳ್ಳಲು ಹೆಚ್ಚಿನ ಉತ್ತೇಜನ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿ.ಪಂ.ಅಧ್ಯಕ್ಷರು ಸೂಚಿಸಿದರು.
ಈ ಬಗ್ಗೆ ಮಧ್ಯ ಪ್ರವೇಶಿಸಿ ಮಾತನಾಡಿದ ಜಿ.ಪಂ.ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿರಣ್ ಕಾರ್ಯಪ್ಪ ಅವರು ಮಾತನಾಡಿ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸಲು ಕಡತಗಳನ್ನು ಶೀಘ್ರ ವಿಲೇವಾರಿ ಮಾಡಬೇಕು ಎಂದು ಅವರು ಹೇಳಿದರು.
ಜಿ.ಪಂ.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಿ.ಕೆ.ಬೋಪಣ್ಣ ಅವರು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರು ಸಾರ್ವಜನಿಕರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಆ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಅವರು ಸಲಹೆ ಮಾಡಿದರು.
ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಔಷಧಿ ತರಲು ಹೊರಗಡೆ ಚೀಟಿ ಬರೆಯುವುದು ಸರಿಯಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಔಷಧಿಗಳು ದೊರೆಯಬೇಕು. ಔಷಧಿಗಳನ್ನು ತರಿಸಿಕೊಳ್ಳುವಂತೆ ನಿರ್ದೇಶನ ನೀಡಿದರು.
ಭಾಗಮಂಡಲದಲ್ಲಿ ವಾಜಪೇಯಿ ವಸತಿ ಶಾಲೆ ಕಾಮಗಾರಿ ಯಾವ ಹಂತದಲ್ಲಿದೆ ಎಂದು ಜಿ.ಪಂ. ಅಧ್ಯಕ್ಷರು ಬಿಸಿಎಂ ಇಲಾಖೆ ಅಧಿಕಾರಿಗೆ ಪ್ರಶ್ನಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಪುಟ್ಟರಾಜು ಅವರು ಭಾಗಮಂಡಲದ ವಾಜಪೇಯಿ ವಸತಿ ಶಾಲೆ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಅವರು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತರಿಗೆ ಗೌರವಧನ ಸಕಾಲದಲ್ಲಿ ಪಾವತಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಅವರು ತಿಳಿಸಿದರು.
ಸೋಮವಾರಪೇಟೆ ತಾಲ್ಲೂಕಿನ ಪುಷ್ಪಗಿರಿ ಬೆಟ್ಟದಲ್ಲಿ ಕುಡಿಗಾಣ ಅಂಗನವಾಡಿ ಕೇಂದ್ರದ ಕಾಮಗಾರಿ ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂದು ಜಿ.ಪಂ. ಉಪಾಧ್ಯಕ್ಷರು ಅತೃಪ್ತಿ ವ್ಯಕ್ತಪಡಿಸಿದರು.
ವಿಕಲಚೇತನರಿಗೆ ದ್ವಿಚಕ್ರವಾಹನ ವಿತರಣೆ, ಮಾತೃ ಪೂರ್ಣ ಯೋಜನೆ, ಮಾತೃ ವಂದನಾ ಕಾರ್ಯಕ್ರಮ ಅನುಷ್ಠಾನ ಮತ್ತಿತರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಕೃತಿ ವಿಕೋಪದಿಂದ ನಷ್ಟವಾದ ಬೆಳೆಗೆ ಪರಿಹಾರ ವಿತರಣೆ, ಕೃಷಿ ಭಾಗ್ಯ, ಕೃಷಿ ತರಬೇತಿ ಕಾರ್ಯಕ್ರಮ, ಟಾರ್ಪಲ್ ವಿತರಣೆ, ಕೃಷಿ ಹೊಂಡ ನಿರ್ಮಾಣ, ಡೀಸೆಲ್ ಪಂಪ್‍ಸೆಟ್ ಒದಗಿಸುವುದು, ತೋಟಗಾರಿಕಾ ಇಲಾಖೆಯಿಂದ ಹನಿ ನೀರಾವರಿ ಕಾರ್ಯಕ್ರಮಕ್ಕೆ ಉತ್ತೇಜನ ನೀಡುವುದು, ಜೇನು ಸಾಕಾಣಿಕೆ, ಕೃಷಿ ಯಾಂತ್ರೀಕರಣ, ಮತ್ತಿತರ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.
ರಾಜಾಸೀಟಿನಲ್ಲಿ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಅವಕಾಶ ಮಾಡುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೆಶಕರಿಗೆ ಜಿ.ಪಂ.ಅಧ್ಯಕ್ಷರು ನಿರ್ದೇಶನ ನೀಡಿದರು.
ಪಶುಪಾಲನಾ ಇಲಾಖೆಯಿಂದ ಕಾರ್ಯಕ್ರಮಗಳನ್ನು ತಲುಪಿಸುವುದು, ಸಹಕಾರ ಇಲಾಖೆಯಿಂದ ಸಾಲ ಮನ್ನಾ, ಕಾರ್ಮಿಕ ಇಲಾಖೆಯಡಿ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ ತಲುಪಿಸುವುದು, ಉದ್ಯೋಗ ವಿನಿಮಯ ಇಲಾಖೆಯಿಂದ ಉದ್ಯೋಗ ಮೇಳ ಏರ್ಪಡಿಸುವುದು, ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸುವುದು ಮತ್ತಿತರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲೆಯ ಹಲವು ಕಡೆಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ತೆರೆದು ಹಾಲು ಸಂಗ್ರಹಣೆಗೆ ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ಕೃಷಿಕರಿಗೆ ಮಾಹಿತಿ ನೀಡಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ರಚಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಿ.ಕೆ.ಬೋಪಣ್ಣ ಅವರು ತಿಳಿಸಿದರು.
ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸರೋಜಮ್ಮ ಅವರು ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿದರು. ಜಿ.ಪಂ.ನೂತನ ಭವನಕ್ಕೆ ಕೆಎಸ್‍ಆರ್‍ಟಿಸಿಯಿಂದ ಬಸ್ ಸೌಲಭ್ಯವನ್ನು ಬೆಳಗ್ಗೆ 9 ಮತ್ತು 9.30 ಗಂಟೆಗೆ ಕಲ್ಪಿಸಬೇಕು. ಹಾಗೂ ಸಂಜೆ 6 ಗಂಟೆಯ ನಂತರ ಜಿ.ಪಂ. ನೂತನ ಭವನದಿಂದ ಬಸ್ ಹೊರಡುವಂತಾಗಬೇಕು ಎಂದು ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯ ಅವರು ತಿಳಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: