ಮೈಸೂರು

ಅಮಾಯಕ ಯುವಕರ ಮೇಲೆ ಮುಗಿಬಿದ್ದ ರೌಡಿಶೀಟರ್ : ಪ್ರಾಣರಕ್ಷಣೆಗಾಗಿ ರೌಡಿಗೆ ಚಾಕುವಿನಿಂದ ತಿವಿತ

ರೌಡಿಶೀಟರ್ ಓರ್ವ ಅಮಾಯಕ ಯುವಕರೀರ್ವರ  ಮೇಲೆ ಮುಗಿಬಿದ್ದು ತಾನೇ ಅವರಿಂದ ಚಾಕುವಿನಿಂದ ತಿವಿತಕ್ಕೊಳಪಟ್ಟು ಆಸ್ಪತ್ರೆ ಸೇರಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ರೌಡಿಶೀಟರ್ ಅಭಿ  ಅಲಿಯಾಸ್ ಸುಟ್ಟ ಎಂಬಾತನೇ ಇದೀಗ ಆಸ್ಪತ್ರೆ ಸೇರಿರುವ ವ್ಯಕ್ತಿ. ಮೈಸೂರಿನ ಬೋಗಾದಿಯಿಂದ ಅಗ್ರಹಾರದ ಕಡೆ ತನ್ನ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ  ವಾಹನದಲ್ಲಿ ಪೆಟ್ರೋಲ್ ಮುಗಿದ ಪರಿಣಾಮ ಅದೇ ರಸ್ತೆಯಿಂದ ಬರುತ್ತಿದ್ದ ಖಾಸಗೀ ಕಂಪನಿಯಲ್ಲಿ ಕಾರ್ಯ ನಿರ್ವಹಿಸುವ ಯುವಕರಾದ ಮೋಹಿತ್ ಮತ್ತು ತಮಿಳ್ ಅರಸನ್ ಬಳಿ ತನ್ನ ಗಾಡಿಯನ್ನು ನೂಕಲು ಹೇಳಿದ್ದಾನೆ ಎನ್ನಲಾಗಿದೆ. ಅವರು ಒಪ್ಪದಿದ್ದಾಗ ಅವರ ಕನ್ನಡಕವನ್ನು ಕಿತ್ತುಕೊಂಡಿದ್ದಲ್ಲದೇ ನಾನು ಯಾರೆಂದು ಗೊತ್ತಾ, ನಾನು ರೌಡಿ ಎಂದು ಅಲ್ಲಿರುವ ಕಲ್ಲುಗಳನ್ನೆತ್ತಿ ಅವರ ಮೇಲೆ ಬಿಸಾಡತೊಡಗಿದ್ದು, ಇದರಿಂದ ಭಯಭೀತರಾದ ಯುವಕರು ಅಲ್ಲೇ ಸಮೀಪದಲ್ಲಿ ಎಳನೀರನ್ನಿರಿಸಿಕೊಂಡಿದ್ದ ವ್ಯಕ್ತಿಯ ಬಳಿ ತೆರಳಿ ಅಲ್ಲಿಯೇ ಇದ್ದ ಚಾಕುವನ್ನೆತ್ತಿ ತಮ್ಮ ಪ್ರಾಣರಕ್ಷಣೆಗಾಗಿ ರೌಡಿಶೀಟರ್ ಅಭಿಯ ಕೈಕಾಲುಗಳ ಮೇಲೆ ತಿವಿದಿದ್ದಾರೆ ಎಂದು ತಿಳಿದು ಬಂದಿದೆ. ಅದೇ ಮಾರ್ಗದಲ್ಲಿ ಗಸ್ತು ತಿರುಗಲು ಬಂದ ಪಿಸಿಆರ್ ವಾಹನದಲ್ಲಿರುವ ಪೊಲೀಸ್ ಸಿಬ್ಬಂದಿಗಳಿಗೆ ಹಲ್ಲೆಗೊಳಗಾದ ಅಭಿ ಕಾಣ ಸಿಕ್ಕಿದ್ದು, ಅವನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರು ಯುವಕರನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಸರಸ್ವತಿಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೆಲವು ದಿನಗಳ ಹಿಂದಷ್ಟೇ ನಗರ ಪೊಲೀಸ್ ಆಯುಕ್ತ  ಡಾ.ಸುಬ್ರಹ್ಮಣ್ಯೇಶ್ವರರಾವ್ ರೌಡಿಶೀಟರ್ ಗಳನ್ನು ಕರೆಸಿ ಅವರಿಗೆ ನೀತಿಪಾಠ, ಬುದ್ಧಿವಾದಗಳನ್ನು  ಹೇಳಿ ಕಳುಹಿಸಿದ್ದರಲ್ಲದೇ, ರೌಡಿಸಂ ಕಂಡುಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡಿದ್ದರು. ಎಷ್ಟೇ ಎಚ್ಚರಿಕೆ ನೀಡಿದರೂ ಮತ್ತೆ ಮತ್ತೆ ರೌಡಿಶೀಟರ್ ಗಳು  ನಗರದಲ್ಲಿ ಬಾಲಬಿಚ್ಚುತ್ತಲೇ ಇದ್ದು, ಆಯುಕ್ತರು ಇದರತ್ತ ಹೆಚ್ಚಿನ ಗಮನ ಹರಿಸಬೇಕು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.

Leave a Reply

comments

Related Articles

error: