ಮೈಸೂರು

ಜೀವನದ ನೋವಿನ ಕತ್ತಲೆಗೆ ಹಾಸ್ಯ ಬೆಳಕು ನೀಡಲಿದೆ : ಡಾ. ಮಳಲಿ ವಸಂತ್ ಕುಮಾರ್

ನವನೀತ ಪ್ರಕಾಶನ, ಕರ್ನಾಟಕ ವಿಚಾರ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಇಂಜಿನಿಯರುಗಳ ಸಭಾಂಗಣದಲ್ಲಿ ಗಮಕ ವಿದುಷಿ, ಕಲಾಶ್ರೀ ಡಾ.ವಿಜಯಮಾಲ ರಂಗನಾಥ್ ರವರ ‘ನಗೆ ನರ್ತನ’, ಮತ್ತು ‘ವಿ.ಕೃ.ಗೋಕಾಕ್’ ಕೃತಿಗಳ ಲೋಕಾರ್ಪಣೆ ಹಾಗೂ ಹಾಸ್ಯ ರಸಗೋಷ್ಠಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ, ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಪ್ರಸಿದ್ಧ ವಿದ್ವಾಂಸರಾದ ನಾಡಯೋಗಿ ಡಾ.ಮಳಲಿ ವಸಂತಕುಮಾರ್, ಇಂದಿನ ಸಾಹಿತಿಗಳ ಬದುಕು ನಿಜಕ್ಕೂ ಸಾರ್ಥಕ ಎನಿಸುತ್ತದೆ. ಏಕೆಂದರೆ ಕುವೆಂಪು, ದ.ರಾ.ಬೇಂದ್ರೆ, ಮಾಸ್ತಿಯಂತಹ ಮಹಾನ್ ಕವಿಗಳ ವಿಚಾರಧಾರೆಗಳು ಕೊನೆಯವರೆಗೂ ಅವರ ಜೊತೆ ಇರುತ್ತವೆ ಎಂದು ಅಭಿಪ್ರಾಯಪಟ್ಟರು.

ಮುಂದುವರೆದು ಮಾತನಾಡುತ್ತಾ, ಡಾ.ವಿಜಯಮಾಲ ರಂಗನಾಥ್ ಅವರು ಒಬ್ಬ ಉತ್ತಮ ಬರಹಗಾರ್ತಿ. ಕನ್ನಡ ಸಾಹಿತ್ಯಕ್ಕೆ ವೈವಿಧ್ಯಮಯವಾದ ಕೃತಿಗಳನ್ನು ನೀಡಿದ್ದಾರೆ. ಕವಿತೆ, ಪ್ರವಾಸ ಕಥನ, ಜೀವನ ಚರಿತ್ರೆ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಇವರ ಸಾಧನೆ ಮಹತ್ವದ್ದಾಗಿದೆ ಎಂದು ಶ್ಲಾಘಿಸಿದರು.

ಜೀವನದ ನೋವಿನ ಕತ್ತಲೆಯಲಿ ಹಾಸ್ಯ ರಂಜನೆಯ ಬೆಳಕು. ಅದು ತನ್ನ ಪರಿಮಿತ ವ್ಯಾಪ್ತಿಯಲ್ಲಿ ಸಂಜೀವಿನಿ ಎಂಬುದು ವೈಜ್ಞಾನಿಕ ಸತ್ಯ. ಪ್ರಸ್ತುತ ಅವರ ‘ನಗೆ ನರ್ತನ’ ಕೃತಿ ಜನರಿಗೆ ಸಂತಸದ ಜೀವಾಮೃತವನ್ನು ನೀಡಬಲ್ಲದು. ಅವರ ಹಾಸ್ಯ ಸಾಹಿತ್ಯ ಸಾಧನೆ ನಿಜಕ್ಕೂ ಅಪೂರ್ವವಾದುದು ಎಂದು ಹೇಳಿದರು.

ಕರ್ನಾಟಕದಲ್ಲಿ ಕನ್ನಡಿಗರಿಗಾಗಿ ಆಂದೋಲನ ನಡೆಸಿದ ಗೋಕಾಕ್ ಅವರನ್ನು ಕುರಿತಾದ ಕೃತಿ ‘ವಿ.ಕೃ.ಗೋಕಾಕ್’. ಗೋಕಾಕ್ ವರದಿಯ ಅನುಷ್ಠಾನಕ್ಕಾಗಿ ಚಿದಾನಂದ ಮೂರ್ತಿ, ಚಂದ್ರಶೇಖರ ಕಂಬಾರ ಸೇರಿದಂತೆ ಇನ್ನೂ ಮೊದಲಾದವರು ಜೈಲು ಸೇರಿದ್ದರು. ಅಂದು ಗುಂಡೂರಾವ್ ಸರ್ಕಾರ ಉರುಳಲು ಗೋಕಾಕ್ ವರದಿಯೇ ಕಾರಣವಾಗಿತ್ತು. ಗೋಕಾಕ್ ವರದಿಯ ನೇಕಾರ ವಿ.ಕೃ.ಗೋಕಾಕ್ ರೇ ಆಗಿದ್ದರು. ನವ್ಯ ಸಾಹಿತ್ಯದ ಪ್ರವರ್ತಕರಾಗಿ ಉಗಮಗೊಂಡ ಗೋಕಾಕ್ ರ ಜೀವನ, ಸಾಹಿತ್ಯ, ವ್ಯಕ್ತಿತ್ವ, ಆಡಳಿತ ವೈಖರಿ ಇನ್ನೂ ಮೊದಲಾದ ಅಂಶಗಳನ್ನು ಈ ಕೃತಿಯಲ್ಲಿ ಬಹಳ ವಿಸ್ತಾರವಾಗಿ ಬಿಂಬಿಸಿದ್ದಾರೆ ಎಂದು ತಿಳಿಸಿದರು.

ಹಿರಿಯ ಸಮಾಜ ಸೇವಕ ಕೆ.ರಘುರಾಮ್ ಸಮಾರಂಭದ ಅಧ‍್ಯಕ್ಷತೆ ವಹಿಸಿದ್ದರು. ಹಾರ್ಡ್ವಿಕ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಹಿರಿಮರಳಿ ಧರ್ಮರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಾನಪದ ವಿದ್ವಾಂಸ ಜಿ.ಎಸ್.ಭಟ್ಟ, ವಿದ್ವಾಂಸ ಡಾ.ಕಬ್ಬಿನಾಲೆ ವಸಂತಭಾರದ್ವಾಜ್, ಲೇಖಕಿ ಡಾ.ವಿಜಯಮಾಲ ರಂಗನಾಥ, ಕರ್ನಾಟಕ ವಿಚಾರ ವೇದಿಕೆಯ ಪ್ರಧಾನ ಸಂಚಾಲಕ ಪ್ರೊ.ಬೆಸೂರು ಮೋಹನ್ ಪಾಳೇಗಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

 

 

Leave a Reply

comments

Related Articles

error: