ಮೈಸೂರು

ವಾಯುವಿಹಾರಕ್ಕೆ ತೆರಳಿದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಅಪಹರಣ

ಮೈಸೂರು,ಡಿ.12:- ಸ್ನೇಹಿತೆಯೊಂದಿಗೆ ವಾಯುವಿಹಾರಕ್ಕೆ ತೆರಳಿದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಕದಿಯಲು ಮುಂದಾದ ದುಷ್ಕರ್ಮಿಗಳು ಕೊನೆಗೂ ಚಿನ್ನದ ತುಣುಕನ್ನು ಕಿತ್ತು ಪರಾರಿಯಾಗಿರುವ ಘಟನೆ ಕುವೆಂಪುನಗರದಲ್ಲಿ ನಡೆದಿದೆ.

ಕುವೆಂಪುನಗರದ ಕಂದಾಯ ಬಡಾವಣೆಯಲ್ಲಿ ಸೋಮವಾರ ಸಂಜೆ ಘಟನೆ ನಡೆದಿದ್ದು, ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂದಾಯ ಬಡಾವಣೆಯ ನಿವಾಸಿ ಗೀತಾ ಎಂಬವರೇ 30ಸಾವಿರ ರೂ.ಮೌಲ್ಯದ ಹತ್ತು ಗ್ರಾಮ ಚಿನ್ನದ ಸರವನ್ನು ಕಳೆದುಕೊಂಡವರಾಗಿದ್ದಾರೆ. ಇವರು ಅಂದು ಸಾಯಂಕಾಲ 4.30ರ ಸುಮಾರಿಗೆ 1ನೇ ಮೇನ್ ಮೂರನೇ ಕ್ರಾಸ್ ನಲ್ಲಿ ನಡದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬೈಕಿನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಗೀತಾ ಅವರ ಕೊರಳಿನಲ್ಲಿದ್ದ 40ಗ್ರಾಂ ಚಿನ್ನದ ಸರವನ್ನು ಕಿತ್ತುಕೊಳ್ಳಲು ಯತ್ನಿಸಿದ್ದರು. ಆದರೆ ಅವರು ಕೂಡಲೇ ಎಚ್ಚೆತ್ತು ಸರವನ್ನು ಬಿಗಿಯಾಗಿ ಹಿಡಿದುಕೊಂಡಿದ್ದು, ಹತ್ತು ಗ್ರಾಂ ತುಣುಕಷ್ಟೇ ಕಳ್ಳರ ಕೈ ಸೇರಿದೆ. ವಿಷಯ ತಿಳಿಯುತ್ತಿದ್ದಂತೆ ಕುವೆಂಪುನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: