ಮೈಸೂರು

ಪರಸ್ಪರ ಆರ್ಟ್ ಫೌಂಡೇಶನ್ ನಿರ್ಮಾಣದ ‘ದ ಪೇಯಿಂಗ್ ಗೆಸ್ಟ್’ ನಾಟಕ ಪ್ರದರ್ಶನ : ನಾಟಕಗಳ ಸಂಕಲನ ‘ರಂಗೋತ್ರಿ’ ಬಿಡುಗಡೆ

ಮೈಸೂರು, ಡಿ.12:- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಂಗ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹಿಸುವ ಪರಸ್ಪರ ಆರ್ಟ್‍ಫೌಂಡೇಶನ್ ವತಿಯಿಂದ ನಿರ್ಮಿಸಿರುವ ಜಿ.ಎಲ್.ತ್ರಿಪುರಾಂತಕ ಅವರು ರಚಿಸಿರುವ ‘ದ ಪೇಯಿಂಗ್ ಗೆಸ್ಟ್’ ನಾಟಕ  ಡಿಸೆಂಬರ್ 14ರ ಶನಿವಾರ ಸಂಜೆ 7  ಗಂಟೆಗೆ ಕಲಾಮಂದಿರದ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.

ರಂಗಾಯಣದ ಹಿರಿಯ ರಂಗಕರ್ಮಿಯಾಗಿದ್ದ ದಿವಂಗತ   ಮಂಜುನಾಥ ಬೆಳೆಕೆರೆಯವರು ಸಂಸ್ಥಾಪಿಸಿರುವ ಪರಸ್ಪರ ಆರ್ಟ್ ಫೌಂಡೇಶನ್‍  ಅವರ ಪತ್ನಿಯಾದ   ಪ್ರಶಾಂತಿ ಬೆಳೆಕೆರೆಯವರು ಮುನ್ನಡೆಸುತ್ತಿದ್ದು, ಹೊಸ ನಾಟಕಕಾರರ ನಾಟಕಗಳನ್ನು ನಿರ್ಮಿಸಿ ಪ್ರಸ್ತುತಪಡಿಸುವ ಮೂಲಕ   ಮಂಜುನಾಥ ಬೆಳೆಕೆರೆಯವರ ಆಶಯವನ್ನು ಸಾಕಾರಗೊಳಿಸುತ್ತಿದ್ದಾರೆ. ಯುವ ನಿರ್ದೇಶಕರಾದ   ಕಿರಣ್ ಗಿರ್ಗಿಯವರು ‘ದ ಪೇಯಿಂಗ್ ಗೆಸ್ಟ್’ ನಾಟಕದ ವಿನ್ಯಾಸ ಹಾಗೂ ನಿರ್ದೇಶನವನ್ನು ಮಾಡುತ್ತಿದ್ದಾರೆ. ನಗರ ಪ್ರದೇಶದ ಕೌಟುಂಬಿಕ ವಸ್ತುಗಳನ್ನೊಳಗೊಂಡಿರುವ ಈ ನಾಟಕದಲ್ಲಿ    ಪಿ.ಕೃಷ್ಣನ್,   ಸುಧಾ ಗುಡುಗುಂಟಿ,   ಸುಪ್ರೀತ್.ಪಿ ಹಾಗೂ   ಜಗದೀಶ್ ರಾಜಶೇಖರ್ ಅಭಿನಯಿಸುತ್ತಿದ್ದಾರೆ.

ಇದೇ ನಾಟಕವನ್ನು ಮೈಸೂರು ಆಕಾಶವಾಣಿಯು ನಿರ್ಮಿಸಿ   6.12.2019 ರಂದು ಪ್ರಸಾರ ಮಾಡಿದೆ. ಡಿಸೆಂಬರ್ 21ರ ಶನಿವಾರ ಸಂಜೆ 7 ಕ್ಕೆ ಕಿರುರಂಗಮಂದಿರದಲ್ಲಿ ನಾಟಕದ ಮರು ಪ್ರದರ್ಶನಗೊಳ್ಳಲಿದೆ.

ನಾಟಕ ಪ್ರದರ್ಶನಕ್ಕೂ ಮೊದಲು ಸಂಜೆ. 6  ಗಂಟೆಗೆ ಅಂಕಣಕಾರರಾದ ಜಿ.ಎಲ್.ತ್ರಿಪುರಾಂತಕರವರು ರಚಿಸಿ, ಅನನ್ಯ ಪುಸ್ತಕಗಳು ಪ್ರಕಾಶನದವರು ಪ್ರಕಟಿಸಿರುವ ಮೂರು ನಾಟಕಗಳ ಸಂಕಲನ ‘ರಂಗೋತ್ರಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕುಂದೂರು ಮಠಾಧ್ಯಕ್ಷರು ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಶೈವ ಸಂಶೋಧನಾ ಮತ್ತು ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಶ್ರೀ ಶರತ್‍ಚಂದ್ರ ಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಲಿದ್ದಾರೆ. ಪರಸ್ಪರ ಆರ್ಟ್ ಫೌಂಡೇಶನ್‍ನ ಪ್ರಶಾಂತಿ ಬೆಳೆಕೆರೆಯವರು ಉದ್ಘಾಟನೆ ಮಾಡಲಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ನಂದೀಶ್ ಹಂಚೆಯವರು ಕೃತಿ ಬಿಡುಗಡೆ ಮಾಡಲಿದ್ದಾರೆ. ಪುಸ್ತಕ ಕುರಿತು ರಂಗಕರ್ಮಿಗಳು ಹಾಗೂ ನಿವೃತ್ತ ಪ್ರಾಂಶುಪಾಲರು ಆದ ಪ್ರೊ. ಎಚ್.ಎಸ್.ಉಮೇಶ್‍ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಕಾಶಕರಾದ   ಡಿ.ಎನ್.ಲೋಕಪ್ಪ ಹಾಗೂ ಲೇಖಕರಾದ   ಜಿ.ಎಲ್.ಟಿ.ಯವರು ಉಪಸ್ಥಿತರಿರುತ್ತಾರೆ.  ಹೆಚ್ಚಿನ ಮಾಹಿತಿಗೆ ಮ.ಸಂ. 9686677284 ಈ ಸಂಖ್ಯೆಯಲ್ಲಿ ತ್ರಿಪುರಾಂತಕ ಇವರನ್ನು ಸಂಪರ್ಕಿಸಬಹುದು. (ಎಸ್.ಎಚ್)

Leave a Reply

comments

Related Articles

error: