ಮೈಸೂರು

ಕಲಾನಿಕೇತನ ಆರ್ಟ್ ಗ್ಯಾಲರಿಯಲ್ಲಿ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ

ಮೈಸೂರು,ಡಿ.12- ವಿಜಯನಗರದ ಶ್ರೀ ಕಲಾನಿಕೇತನ ಆರ್ಟ್ ಗ್ಯಾಲರಿಯಲ್ಲಿ ಇಂದು ಕಲಾವಿದ ಡಿ.ಎಂ.ವೀರೇಶ್ ಅವರ `ಪ್ರಕೃತಿ ಪುರುಷ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ’ ಆಯೋಜಿಸಲಾಗಿತ್ತು.

ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿದ ಸಮಾಜಶಾಸ್ತ್ರಜ್ಞ ಡಾ.ಸಿ.ಎಸ್.ಮಹೇಶ್ ಕುಮಾರ್ ಮಾತನಾಡಿ, ಕಲಾವಿದ ಡಿ.ಎಂ.ವೀರೇಶ್ ಅವರು ಪ್ರಕೃತಿಯ ಸಂಪನ್ಮೂಲಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂಬ ಸಂದೇಶದ ಜೊತೆಗೆ ಪ್ರಾಣಿ, ಪಕ್ಷಿಗಳಿಗೆ ಯಾವುದೇ ರೀತಿಯ ತೊಂದರೆ ಮಾಡದಂತೆ ಬದುಕಬೇಕು ಎಂಬ ಜಾಗೃತಿಯನ್ನು ಚಿತ್ರಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಲಾವಿದ ಡಿ.ಎಂ.ವೀರೇಶ್ ಮಾತನಾಡಿ, ಬೆಂಗಳೂರಿನಂತಹ ನಗರಗಳಲ್ಲಿ ಗುಬ್ಬಚ್ಚಿಗಳು ಸಂಪೂರ್ಣವಾಗಿ ಮರೆಯಾಗಿವೆ. ಅದಲ್ಲದೇ, ಗ್ರಾಮೀಣ ಭಾಗದಲ್ಲಿಯೂ ಅವುಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಮನುಷ್ಯ ಮತ್ತು ಪ್ರಕೃತಿಯ ನಡುವೆ ಅಂತರ ಕಾಯ್ದುಕೊಳ್ಳುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಹೀಗಾಗಿ, ಪ್ರಕೃತಿಯಲ್ಲಿ ಪ್ರತಿಯೊಂದು ಪ್ರಾಣಿ, ಪಕ್ಷಿಗೂ ಒಂದು ರೀತಿಯ ಸಂಬಂಧವನ್ನು ಕಲ್ಪಿಸಿದೆ. ಅದರಲ್ಲಿ ಯಾವುದೇ ಏರು,ಪೇರಾದರು ಸಮಸ್ಯೆ ಎದುರಾಗುತ್ತದೆ. ಈ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬುದ್ಧ, ಕೃಷ್ಣ, ಶಿವಾ ಚಿತ್ರಗಳ ಮೂಲಕ ಮನುಷ್ಯ ಪ್ರಕೃತಿಯೊಳಗೆ ಒಂದು ಭಾಗ ಎಂಬುದನ್ನು ತಿಳಿಸುವ ಪ್ರಯತ್ನವಾಗಿದೆ ಎಂದು ತಿಳಿಸಿದರು.

ಚಿತ್ರ ಪ್ರದರ್ಶನ ವೀಕ್ಷಣೆಗೆ ಭಾನುವಾರದವರೆಗೆ ಅವಕಾಶವಿದ್ದು, ಬೆ.10 ರಿಂದ ಸಂಜೆ 5ರವರೆಗೆ ಭೇಟಿ ನೀಡಬಹುದು. ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ ಪ್ರಾಚಾರ್ಯ ಕೆ.ಸಿ.ಮಹದೇವಶೆಟ್ಟಿ, ಚಿತ್ರಕಲಾ ಶಿಕ್ಷಕ ಮಹಾಂತಯ್ಯ ಕುಲಕರ್ಣಿ ಇತರರು ಇದ್ದರು. (ಎಂ.ಎನ್)

Leave a Reply

comments

Related Articles

error: