ಪ್ರಮುಖ ಸುದ್ದಿಮೈಸೂರು

ಐ ಯಾಮ್‌ ಕಂಪ್ಲೀಟ್ಲಿ ಹೆಲ್ದಿ ,ಊಹಾಪೋಹಗಳಿಗೆ ಕಿವಿಗೊಡಬೇಡಿ : ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್

ಬೆಂಗಳೂರು/ಮೈಸೂರು,ಡಿ.13:- ”ಐ ಯಾಮ್‌ ಕಂಪ್ಲೀಟ್ಲಿ ಹೆಲ್ದಿ. ಯಾರೊಬ್ಬರೂ ಆತಂಕಪಡುವ ಅಗತ್ಯವಿಲ್ಲ. ಊಹಾಪೋಹಗಳಿಗೆ ಕಿವಿಗೊಡಬೇಡಿ. ಆಸ್ಪತ್ರೆಗೆ ಯಾರೂ ಬರುವುದು ಬೇಡ. 2 ದಿನಗಳ ಬಳಿಕ ಮನೆಗೆ ಮರಳುತ್ತೇನೆ ‘ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಂಪೂರ್ಣ ಚೇತರಿಸಿಕೊಂಡಿದ್ದಾರೆ.   ಅವರನ್ನು ನಿನ್ನೆ  ವಾರ್ಡ್‌ಗೆ ಶಿಫ್ಟ್‌ ಮಾಡಲಾಗಿದ್ದು, ವೈದ್ಯರ ಸಲಹೆಯಂತೆ ಅವರು ಇನ್ನೂ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲೇ ಉಳಿದು ವಿಶ್ರಾಂತಿ ಪಡೆಯಲಿದ್ದಾರೆ.

ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ”2008ರಲ್ಲಿ ಹೃದಯ ತಜ್ಞರು ಎರಡು ರಕ್ತನಾಳಗಳಿಗೆ ಸ್ಟಂಟ್‌ ಅಳವಡಿಸಿದ್ದರು. ಈ ಪೈಕಿ ಒಂದು ಸ್ಟಂಟ್‌ ಬ್ಲಾಕ್‌ ಆಗಿತ್ತು. ಅದಕ್ಕಾಗಿ ಆಂಜಿಯೋಪ್ಲಾಸ್ಟಿ ಮಾಡಿಸಿಕೊಂಡಿದ್ದೇನೆ. ನಾನು ಸಂಪೂರ್ಣ ಆರೋಗ್ಯವಾಗಿದ್ದೇನೆ. ಎರಡು ದಿನಗಳಲ್ಲಿ ಮನೆಗೆ ಮರಳುತ್ತೇನೆ. ಯಾರೊಬ್ಬರೂ ಆಸ್ಪತ್ರೆಗೆ ಬರುವುದು ಬೇಡ,”ಎಂದಿದ್ದಾರಲ್ಲದೇ, ಈ ಕುರಿತು ಟ್ವೀಟ್ ಕೂಡ ಮಾಡಿದ್ದಾರೆ.

ನಿಮಗೂ ಹಾರ್ಟ್ ಇದೆ ಅನ್ನೋದು ಗ್ಯಾರಂಟಿ ಆಯ್ತು ; ಕಾಲೆಳೆದ ಈಶ್ವರಪ್ಪ

ನಿಮಗೂ ಹಾರ್ಟ್‌ ಇದೆ ಅನ್ನೋದು ಗ್ಯಾರಂಟಿ ಆಯ್ತಲ್ಲಾ  ಎಂದು ನಿನ್ನೆ ಆಸ್ಪತ್ರೆಗೆ ಮಾಜಿ ಸಿಎಂ ಸಿದ್ದರಾಮಯ್ಯನವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಈಶ್ವರಪ್ಪ ಕಾಲೆಳೆದರು. ಅಷ್ಟೇ ಹಸನ್ಮುಖವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ  ನೀನೇನು ಇಲ್ಲಾ ಅಂದ್ಕೋಡಿದ್ಯಾ  ಎಂದು ಮರು ಪ್ರಶ್ನೆ ಹಾಕಿದ್ದಕ್ಕೆ ನಾನೆಲ್ಲಿ ಹಾಗಂತ ಬಾಯಿ ಬಿಟ್ಟು ಹೇಳಿದೆ ಎಂದು ಈಶ್ವರಪ್ಪ ಹಾಸ್ಯ ಚಟಾಕಿ ಹಾರಿಸಿದರು. ಈಶ್ವರಪ್ಪ ಮಾತಿಗೆ ನಗೆ ಬೀರಿದ ಸಿದ್ದರಾಮಯ್ಯ  ನೀನು ಹ್ಯೂಮನ್‌ ಅನಾಟಮಿ ಓದ್ಕೊಂಡಿದ್ದಿಯೋ  ಎಂದು ಪ್ರಶ್ನಿಸಿದರು. ಇಬ್ಬರ ಈ ಸ್ವಾರಸ್ಯದ ಸಂಭಾಷಣೆಗೆ ಸಿಎಂ, ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಸೇರಿ ಅಲ್ಲಿದ್ದವರೆಲ್ಲರೂ ಗೊಳ್ಳೆಂದು ನಕ್ಕರು. ಸಿದ್ದರಾಮಯ್ಯ ಚೇತರಿಸಿಕೊಳ್ಳುತ್ತಿದ್ದು, ಇನ್ನೆರಡು ದಿನದಲ್ಲಿ ಡಿಸ್ಚಾರ್ಜ್‌ ಆಗಲಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: