ಕರ್ನಾಟಕಪ್ರಮುಖ ಸುದ್ದಿ

ಮಾರ್ಚ್ 9 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ : ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಕಟ್ಟೆಚ್ಚರ

ಬೆಂಗಳೂರು : ಕಳೆದ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಉಂಟಾಗಿದ್ದ ಗೊಂದಲ ಈ ಬಾರಿ ಮರುಕಳಿಸದಂತೆ ತಡೆಯಲು ಪದವಿಪೂರ್ವ ಶಿಕ್ಷಣ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿದೆ.

ಮಾರ್ಚ್‍ 9 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ನೋಡಿಕೊಳ್ಳಲು ಕೇಂದ್ರ ಕಚೇರಿಯಲ್ಲಿ ನಿಗಾ ಕೊಠಡಿಯನ್ನು ಸ್ಥಾಪಿಸಿ ರಾಜ್ಯಾದ್ಯಂತ ಪ್ರಶ್ನೆ ಪತ್ರಿಕೆ ಸಂಗ್ರಹವಾಗಿರುವಲ್ಲಿ ಖಜಾನೆಯ ಮೇಲ್ವಿಚಾರಣೆ ನಡೆಯಲಿದೆ. ನಿಯಂತ್ರಣ ಕೊಠಡಿಯನ್ನು ಪರೀಕ್ಷಾ ವಿಭಾಗದ ಸಿಬ್ಬಂದಿ ನೋಡಿಕೊಳ್ಳುತ್ತಾರೆ. ಖಜಾನೆ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ನಿಯೋಜಿಸಲಾಗಿದೆ.

ಪ್ರಶ್ನೆಪತ್ರಿಕೆ ಇಟ್ಟಿರುವ ಕೊಠಡಿಗೆ ಯಾರಾದರೂ ಅನಧಿಕೃತ ವ್ಯಕ್ತಿಗಳು ಪ್ರವೇಶಿಸಿದರೆ ಪದವಿಪೂರ್ವ ವಿಭಾಗದ ನಿರ್ದೇಶಕರ ಮೊಬೈಲ್ ಫೋನ್‍ಗೆ ಎಚ್ಚರಿಕೆ ಕರೆ ಹೋಗುತ್ತದೆ. ಅಲ್ಲದೆ ಸ್ಥಳೀಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲು ಖಜಾನೆ ಕೊಠಡಿಯಲ್ಲಿ ಅಲರಾಂ ಬಾರಿಸುತ್ತದೆ. ನಿಯಂತ್ರಣ ಕೊಠಡಿ ಎಲ್ಲಾ 30 ಜಿಲ್ಲೆಗಳ ಖಜಾನೆಗಳ ಮೇಲೂ ನಿಗಾವಹಿಸುತ್ತದೆ.

ಪರೀಕ್ಷೆ ಆರಂಭವಾಗುವುದಕ್ಕೆ ಮೂರು ದಿನಗಳ ಮೊದಲು ಪ್ರಶ್ನೆ ಪತ್ರಿಕೆಯನ್ನು ಜಿಲ್ಲಾ ಖಜಾನೆಯಲ್ಲಿ ಶೇಖರಿಸಲಾಗುತ್ತದೆ. ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷೆ ದಿನ ಪರೀಕ್ಷಾ ಕೇಂದ್ರಗಳಿಗೆ ವಿತರಿಸಲಾಗುತ್ತದೆ.

ಕಳೆದ ವರ್ಷ ರಸಾಯನ ಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ತನಿಖೆ ನಡೆಸುತ್ತಿರುವ ಸಿಐಡಿ, ಪಿಯು ಮಂಡಳಿ ಖಜಾನೆಯಲ್ಲಿ ಹಲವು ನ್ಯೂನತೆಗಳಿದ್ದು ಕೆಲವು ಖಜಾನೆ ಅಧಿಕಾರಿಗಳೇ ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣ ಎಂದು ಹೇಳಿದೆ. ಹೀಗಾಗಿ ಈ ಬಾರಿ ಕಳೆದ ಬಾರಿಗಿಂತ ಹೆಚ್ಚು ನಿಗಾ ಇಡಲಾಗಿದೆ.

Leave a Reply

comments

Related Articles

error: