ಮೈಸೂರು

ಸರ್ವಜ್ಞ ವಚನ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮಹಾನ್ ಸಂತ : ಡಾ.ಹೆಚ್.ಸಿ.ಮಹದೇವಪ್ಪ ಬಣ್ಣನೆ

ಸರ್ವಜ್ಞ ತಮ್ಮ ಉತ್ಕೃಷ್ಠ  ವಚನಗಳ ಮೂಲಕ 16ನೇ ಶತಮಾನದಲ್ಲಿ ವಚನ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮಹಾನ್ ಸಂತ ಎಂದು ಜಿಲ್ಲಾ ಉಸ್ತವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅಭಿಪ್ರಾಯಪಟ್ಟರು.

ಭಾನುವಾರ  ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಜಿಲ್ಲಾ ಕುಂಬಾರರ ಸಂಘ ಸಂಸ್ಥೆಗಳು ಹಾಗೂ ಸರ್ವಜ್ಞ  ಜಯಂತೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,  10ನೇ ಶತಮಾನದಲ್ಲಿ ದೇವರ ದಾಸಿಮಯ್ಯ, 12ನೇ ಶತಮಾನದಲ್ಲಿ ಬಸವಣ್ಣ ತಮ್ಮ ವಚನಗಳ ಮೂಲಕ ಸಮಾಜ ತಿದ್ದುವ, ಸರಿದಾರಿಯಲ್ಲಿ ಮುನ್ನಡೆಸುವ ಕೆಲಸ ಮಾಡಿದ ಹಾಗೆ ಸರ್ವಜ್ಞ 16ನೇ ಶತಮಾನದಲ್ಲಿ ಬದುಕಿನ ಸತ್ಯಗಳನ್ನು ಯಾರಿಗೂ ಹೆದರದೆ ನೇರವಾಗಿ, ನಿಷ್ಠುರವಾಗಿ, ನಿಖರವಾಗಿ, ಮಾರ್ಮಿಕವಾಗಿ ಸಮಾಜವನ್ನು ತಿದ್ದುವ ಕೆಲಸ ಮಾಡಿದರು. ಅವರು ಯಾವುದೆ ಒಂದು ಜಾತಿಗೆ ಸೀಮಿತವಾದವರಲ್ಲ. ಗಾಳಿ, ಜಲ, ವಾಯುವಿನಂತೆ ಸರ್ವಜ್ಞ ಕೂಡ ಸರ್ವಾಂತರ್ಯಾಮಿ ಎಂದು ಬಣ್ಣಿಸಿದರು.

ಸಮಾಜವನ್ನು ತಿದ್ದಿ ಒಟ್ಟಿಗೆ ಸೇರಿಸುವ ಪ್ರಯತ್ನವಾಗಿ ಈ ಜಯಂತಿ ಆಚರಿಸಲಾಗುತ್ತಿದೆ. ಇಂದು ಕುಂಬಾರಿಕೆ ಸೇರಿದಂತೆ ಅನೇಕ ಗುಡಿಕೈಗಾರಿಕೆಗಳು ನಶಿಸಿ ಹೋಗುವ ಹಂತ ತಲುಪಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಗುಡಿಕೈಗಾರಿಕೆಗಳಿಗೆ ಪುನಶ್ಚೇತನ ನೀಡಲು ಹಲವಾರು ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಿದೆ. ಜಾತಿ ಆಧಾರಿತ ಮೀಸಲಾತಿ ನೀಡುವ ಸಲುವಾಗಿ ಜನಗಣತಿ ನಡೆಯುತ್ತಿದ್ದು ಕೆಲ ಬುದ್ದಿಜೀವಿಗಳು, ಚಿಂತಕರು  ಜಾತ್ಯತೀತ ರಾಷ್ಟ್ರದಲ್ಲಿ ಜಾತಿ ಗಣತಿ ಎಷ್ಟು ಸರಿ ಎಂದು ಪ್ರಶ್ನಿಸುತ್ತಾರೆ. ಜಾತಿಗಣತಿಯನ್ನು ಮಾಡುತ್ತಿರುವುದು ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸಲುವಾಗಿ. ಆದರೆ, ದೇಶದಲ್ಲಿ ಈಗಾಗಲೆ ಜಾತಿ ಗಟ್ಟಿಯಾಗಿದೆ. ಮೊದಲು ಈ ಜಾತಿ ವ್ಯವಸ್ಥೆ ವಿನಾಶವಾಗಬೇಕು. ಮೇಲ್ವರ್ಗದವರಿಂದ ಕೆಳವರ್ಗದವರ ಮೇಲಾಗುತ್ತಿರುವ ದಬ್ಬಾಳಿಕೆಯನ್ನು ತಪ್ಪಿಸಬೇಕು. ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕುಂಬಾರ ಸಮುದಾಯ ಮನವಿ ಸಲ್ಲಿಸಿದ್ದು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸೂಕ್ತ ಕ್ರಮಕೈಗೊಳ್ಳುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಕುಂಬಾರ ಗುರುಪೀಠದ ಬಸವಕುಂಬಾರ ಗುಂಡಯ್ಯಸ್ವಾಮೀಜಿ, ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ಮೈ ಲಾಕ್ ಅಧ್ಯಕ್ಷ ಹೆಚ್.ಎ.ವೆಂಕಟೇಶ್, ಪಾಲಿಕೆ ಸದಸ್ಯ ಶಿವಣ್ಣ, ಕೆಪಿಸಿಸಿ ಮಾಜಿ ಸದಸ್ಯ ಕೃಷ್ಣಪ್ರಸಾದ್, ಲೋಕೋಪಯೋಗಿ ಅಧಿಕಾರಿ ಆರ್.ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

comments

Related Articles

error: