ಮೈಸೂರು

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ : ಮಾ.6 ರಂದು

ಮುಂದಿನ ಬಜೆಟ್‍ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಿವುಡರಿಗಾಗಿ ಮೀಸಲಾತಿ ಹಾಗೂ ಅವರ ಅಭಿವೃದ್ಧಿಗಾಗಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೈಸೂರು ಜಿಲ್ಲಾ ಕಿವುಡರ ಸಂಘದ ವತಿಯಿಂದ ಮಾ.6 ರಂದು ಬೃಹತ್ ಪ್ರತಿಭಟನಾ ಪಾದಯಾತ್ರೆ ನಡೆಸಲಾಗುವುದು ಎಂದು ಸಂಘದ ಗೌರವಾಧ್ಯಕ್ಷ ಕೆ.ಎಚ್.ಶಂಕರ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಸುಮಾರು 5 ಲಕ್ಷ ಮಂದಿ ಕಿವುಡರಿದ್ದು,   ಸರ್ಕಾರದಿಂದ ಇವರಿಗೆ ಅಗತ್ಯವಿರುವ ಸೌಲಭ್ಯಗಳು ದೊರೆಯುತ್ತಿಲ್ಲ. ಹೀಗಾಗಿ ಸರ್ಕಾರದಿಂದ ಶ್ರವಣಮಾಂದ್ಯತೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು.

ಬೇಡಿಕೆಗಳು : ಕಿವುಡ ವ್ಯಕ್ತಿಗಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವುದು ಹಾಗೂ ವಂಚನೆಯನ್ನು ತಡೆಗಟ್ಟುವುದು, ಶೇ.75 ಡೆಸಿಬಲ್ ಕಿವುಡುತನವನ್ನು ಹೊಂದಿದವರಿಗೆ ಮಾತ್ರ ಮೀಸಲಾತಿ ನೀಡಬೇಕು. ಶ್ರವಣಮಾಂದ್ಯ ಕ್ರೀಡಾಕೂಟಕ್ಕೆ ಹಾಗೂ ಕ್ರೀಡಾಪಟುಗಳಿಗೆ ಸಹಾಯಧನ ನೀಡುವುದು. ಅಂಗವಿಕಲ ದಂಪತಿಗಳಿಗೆ ನೀಡಲಾಗುತ್ತಿರುವ ವಿವಾಹ ಪ್ರೋತ್ಸಾಹ ಧನವನ್ನು ಕಿವುಡ ದಂಪತಿಗಳಿಗೂ ವಿಸ್ತರಿಸುವುದು. ಕಿವುಡರ ಶಾಲೆಗಳಲ್ಲಿ ಶಿಕ್ಷಕರಿಗೆ ಸಂಜ್ಞಾ (ಸನ್ನೆ) ಭಾಷೆಯಲ್ಲಿ ಶಿಕ್ಷಣದ ತರಬೇತಿ ನೀಡಬೇಕು. ಇವರಿಗೆ ನೀಡುತ್ತಿರುವ ಸಹಾಯಧನವನ್ನು 5 ಸಾವಿರ ರೂ. ಗೆ ಹೆಚ್ಚಿಸಬೇಕು. ಪತಿ-ಪತ್ನಿಯರಲ್ಲಿ ಯಾರಾದರೂ ಒಬ್ಬರು ಸರ್ಕಾರಿ ಕೆಲಸದಲ್ಲಿದ್ದರೆ ಇಬ್ಬರೂ ಒಂದೇ ಸ್ಥಳದಲ್ಲಿ ಜೀವನ ಮಾಡಲು ಅನುಕೂಲವಾಗುವಂತೆ ವರ್ಗಾವಣಾ ವ್ಯವಸ್ಥೆ ಮಾಡಬೇಕು. ಕಿವುಡ-ಮೂಗರು ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ರಿಯಾಯಿತಿ ಬಡ್ಡಿ ದರದಲ್ಲಿ ಹಣಕಾಸಿನ ಸಹಾಯ ಹಾಗೂ ಸಬ್ಸಿಡಿ ಸಾಲವನ್ನು ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಈ ಮೂಲಕ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಮಹೇಶ್ ವರ್ಮ, ಪ್ರಧಾನ ಕಾರ್ಯದರ್ಶಿ ಎಚ್.ಎನ್.ದೇವರಾಜ್, ಉಮೇಶ್, ಮಧುಸೂದನ್ ಹಾಜರಿದ್ದರು.

Leave a Reply

comments

Related Articles

error: