ಕ್ರೀಡೆ

ಹೆಟ್ಮಾಯೆರ್-ಹೋಪ್ ಶತಕ: ವಿಂಡೀಸ್ ಗೆ 8 ವಿಕೆಟ್ ಗಳ ಭರ್ಜರಿ ಜಯ

ಚೆನ್ನೈ,ಡಿ.16-ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ಭಾರತ ನಡುವಣ ಮೊದಲ ಏಕದಿನ ಪಂದ್ಯದಲ್ಲಿ ವಿಂಡೀಸ್ ತಂಡ 8 ವಿಕೆಟ್‌ಗಳ ಜಯ ದಾಖಲಿಸಿದೆ. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಹಿನ್ನಡೆಯನ್ನು ಅನುಭವಿಸಿದೆ.

ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್, ಭಾರತ ತಂಡವನ್ನು ಮೊದಲು ಬ್ಯಾಟಿಂಗ್ ಗೆ ಇಳಿಸಿತು. ಟೀಂ ಇಂಡಿಯಾ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 288 ರನ್ ಗಳ ಸವಾಲಿನ ಮೊತ್ತ ಪೇರಿಸಿತು.

ಬಳಿಕ ಗುರಿ ಬೆನ್ನತ್ತಿದ ವಿಂಡೀಸ್ ಆರಂಭದಲ್ಲೇ ಸುನಿಲ್‌ ಅಂಬ್ರಿಸ್‌ (9) ವಿಕೆಟ್‌ ಕಳೆದುಕೊಂಡರೂ, ಶೇಯ್‌ ಹೋಪ್‌ (ಅಜೇಯ 102) ಮತ್ತು ಶಿಮ್ರಾನ್‌ ಹೆಟ್ಮಾಯೆರ್‌ (139) ಅವರ ಭರ್ಜರಿ ಶತಕಗಳ ನೆರವಿನೊಂದಿಗೆ 47.5 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 291 ರನ್‌ಗಳನ್ನು ಬಾರಿಸಿ ದಾಖಲೆಯ ಗೆಲುವು ತನ್ನದಾಗಿಸಿಕೊಂಡಿತು.

2ನೇ ವಿಕೆಟ್‌ಗೆ ಶೇಯ್‌ ಹೋಪ್‌ ಮತ್ತು ಶಿಮ್ರಾನ್‌ ಹೆಟ್ಮಾಯೆರ್‌ ಅವರ ದ್ವಿಶತಕದ ಜತೆಯಾಟದ ನೆರವಿನಿಂದ ಗೆಲುವಿನ ಹಾದಿಯನ್ನು ಸುಗಮವನ್ನಾಗಿಸಿಕೊಂಡಿತು. ಇನಿಂಗ್ಸ್‌ ಆರಂಭದಿಂದಲೂ ತಾಳ್ಮೆಯ ಮೂರ್ತಿಯಂತೆ ಕ್ರೀಸ್‌ನಲ್ಲಿ ಅಂಟಿಕೊಳ್ಳುವ ಮೂಲಕ ತಂಡವನ್ನು ಗುರಿ ಮುಟ್ಟಿಸಿದ ಶ್ರೇಯ್ ಹೋಪ್‌ 151 ಎಸೆತಗಳಲ್ಲಿ 7 ಪೋರ್‌ ಮತ್ತು 1 ಸಿಕ್ಸರ್‌ ನೆರವಿನಿಂದ ಅಜೇಯ 102 ರನ್ ಗಳಿಸಿದರು. ಇದು ವೃತ್ತಿ ಬದುಕಿನ 7ನೇ ಏಕದಿನ ಶತಕವಾಗಿತ್ತು.

ಸಿಕ್ಸರ್‌ಗಳ ಸುರಿಮಳೆಗೈದ ಹೆಟ್ಮಾಯೆರ್‌, ಟೀಂ ಇಂಡಿಯಾ ಎದುರು ತಮ್ಮ 2ನೇ ಏಕದಿನ ಶತಕ ಬಾರಿಸಿದರು. 106 ಎಸೆತಗಳಲ್ಲಿ 11 ಫೋರ್‌ ಮತ್ತು ಬರೋಬ್ಬರಿ 7 ಸಿಕ್ಸರ್‌ ಒಳಗೊಂಡ 139 ರನ್‌ ಬಾರಿಸಿದರು. ಇದು ಅವರ ಏಕದಿನ ಕ್ರಿಕೆಟ್ ಬದುಕಿನ ಬದುಕಿನ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಟೀಂ ಇಂಡಿಯಾ ಪರ ದೀಪಕ್ ಚಾಹರ್, ಮೊಹಮ್ಮದ್ ಶಮಿ ತಲಾ ಒಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಯಿತು. ವಿಂಡೀಸ್‌ ಪಡೆಯ ಶಿಸ್ತಿನ ಬೌಲಿಂಗ್‌ ದಾಳಿ ಎದುರು ಎಚ್ಚರಿಕೆಯ ಆಟವಾಡುವ ಪ್ರಯತ್ನದಲ್ಲಿ ಎಡವಿದ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಕೆ.ಎಲ್‌.ರಾಹುಲ್‌ (6), ವಿರಾಟ್ ಕೊಹ್ಲಿ (4) ಬಹುಬೇಗ ಪೆವಿಲಿಯನ್‌ ಸೇರಿದರು. ಅನುಭವಿ ಆರಂಭಕಾರ ರೋಹಿತ್ ಶರ್ಮಾ 56 ಎಸೆತಗಳಲ್ಲಿ 36 ರನ್‌ ಗಳಿಸಿ ಆಸರೆಯಾಗಿ ನಿಂತಿದ್ದರಾದರೂ ಅಲ್ಜಾರಿ ಜೋಸೆಫ್‌ ಬೌಲಿಂಗ್‌ನಲ್ಲಿ ವಿಕೆಟ್‌ ಕೈಚೆಲ್ಲಿದರು.

4ನೇ ವಿಕೆಟ್‌ಗೆ ಜೊತೆಯಾದ ಯುವ ಪ್ರತಿಭೆಗಳಾದ ಶ್ರೇಯಸ್‌ ಅಯ್ಯರ್‌ ಮತ್ತು ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಿಷಬ್ ಪಂತ್ ಶತಕದ (114) ಜೊತೆಯಾಟವಾಡಿ ತಂಡವನ್ನು ಅಪಾಯದಿಂದ ಪಾರು ಮಾಡಿದರು. 88 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ನೆರವಿನಿಂದ 70 ರನ್‌ಗಳನ್ನು ಗಳಿಸಿದ ಶ್ರೇಯಸ್‌, ರನ್‌ ಗತಿ ಹೆಚ್ಚಿಸುವ ಪ್ರಯತ್ನಕ್ಕೆ ಮುಂದಾಗುವ ಹೊತ್ತಿಗೆ ಜೋಸೆಫ್‌ ಬೌಲಿಂಗ್‌ನಲ್ಲಿ ರೋಹಿತ್‌ ಶರ್ಮಾ ಮಾದರಿಯಲ್ಲೇ ಔಟ್‌ ಆದರು. ಟೀಕಾಕಾರಿಗೆ ದಿಟ್ಟ ಉತ್ತರ ನೀಡಿದ ಪಂತ್‌ ಜವಾಬ್ದಾರಿಯುತ ಅರ್ಧಶತಕ ಸಿಡಿಸಿದರು. ಪಂತ್ 69 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 71 ರನ್ ಗಳಿಸಿದರು. ಇನ್ನುಳಿದಂತೆ ಕೇದಾರ್ ಜಾಧವ್ 40, ರವೀಂದ್ರ ಜಡೇಜ 21, ಶಿವಂ ದುಬೆ 9, ದೀಪಕ್ ಚಾಹರ್ ಔಟಾಗದೆ 6 ರನ್ ಗಳಿಸಿದರು. ವಿಂಡೀಸ್ ಪರ ಶೆಲ್ಡನ್ ಕಾಟ್ರೆಲ್, ಕೀಮೊ ಪಾಲ್, ಅಲ್ಜರಿ ಜೋಸೆಫ್ ತಲಾ 2 ವಿಕೆಟ್, ಕೀರನ್ ಪೊಲಾರ್ಡ್ ಒಂದು ವಿಕೆಟ್ ಕಬಳಿಸಿದರು.

ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿರುವ ವಿಂಡೀಸ್ ಡಿ.18ರಂದು ವಿಶಾಖಪಟ್ಟಣದ ವಿಡಿಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ 2ನೇ ಪಂದ್ಯದಲ್ಲೂ ಗೆಲುವಿನ ಗುರಿಯಿಟ್ಟಿದೆ. ಇತ್ತ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸುವ ಇರಾದೆಯಲ್ಲಿದೆ. (ಎಂ.ಎನ್)

Leave a Reply

comments

Related Articles

error: