ಮೈಸೂರು

ಅರಣ್ಯ ಇಲಾಖೆಯ ಸಿಬ್ಬಂದಿಗಳಲ್ಲಿ ಅನುಭವದ ಕೊರತೆಯಿದೆ : ಸಿ.ಹೆಚ್.ವಿಜಯಶಂಕರ್

ನಾನೇನಾದರೂ ಅರಣ್ಯ ಸಚಿವನಾಗಿದ್ದ ಸಂದರ್ಭದಲ್ಲಿ ಕಾಡಿನಲ್ಲಿ ಈ ರೀತಿಯ ಬೆಂಕಿ ಬಿದ್ದಿದ್ದರೆ ಅದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೆ ಎಂದು ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ರಾಜ್ಯದ ಅರಣ್ಯಗಳಿಗೆ  ಕೇರಳ ಗಡಿಭಾಗದಿಂದ ಸಂಶಯಾಸ್ಪದ ವ್ಯಕ್ತಿಗಳು ಬಂದು ಹೋಗುತ್ತಿರುತ್ತಾರೆ. ಇವರು ಕಾಡನ್ನು ಆಹುತಿ ಪಡೆಯುತ್ತಿದ್ದಾರೆ. ಇವರನ್ನು ಹತ್ತಿಕ್ಕುವಲ್ಲಿ ಅರಣ್ಯ ಇಲಾಖೆಯವರು ವಿಫಲವಾಗಿದೆ ಎಂದು ಆರೋಪಿಸಿದರು. ಅರಣ್ಯ ಇಲಾಖೆಯ ಸಿಬ್ಬಂದಿಗಳಲ್ಲಿ ಅನುಭವದ ಕೊರತೆ, ಪರಿಣತಿಯ ಕೊರತೆ, ಅನುಕೂಲಗಳ ಕೊರತೆ, ಪೂರ್ವಭಾವಿ ಸಿದ್ಧತೆಯ ಕೊರತೆ ಎದ್ದು ಕಾಣುತ್ತಿದ್ದು, ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಅನೇಕ ಅಧಿಕಾರಿಗಳಿಗೆ ಅರಣ್ಯದ ಪರಿಚಯವೇ ಇಲ್ಲ ಎಂದರು. ಅರಣ್ಯಕ್ಕೆ ವಿಶೇಷ ಆದ್ಯತೆ ನೀಡಬೇಕಿದ್ದು,ಜಿಲ್ಲಾಧಿಕಾರಿಗಳನ್ನು ಟಾಸ್ಕಪೋರ್ಸ್ ಸಮಿತಿಯ ಅಧ್ಯಕ್ಷರನ್ನಾಗಿ ಮಾಡುವುದರ ಜೊತೆ  ಅರಣ್ಯ ಇಲಾಖೆಯಲ್ಲಿ ಬಡ್ತಿ ನೀಡುವಾಗ ಅವರ ಸಾಮರ್ಥ್ಯ ಹಾಗೂ ಸೇವೆಯನ್ನು ಪರಿಗಣಿಸಿ ಬಡ್ತಿ ನೀಡಬೇಕು ಎಂದು ಆಗ್ರಹಿಸಿದರು.

ಅರಣ್ಯಕ್ಕೆ ಬೆಂಕಿ ಬಿದ್ದಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶ ನೀಡುವುದರ ಜೊತೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಶಿವಣ್ಣ, ನಗರಾಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್, ಮೈ.ಪೋ.ರಾಜೇಶ್, ಪ್ರಭಾಕರ್ ಶಿಂಧೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: