
ಪ್ರಮುಖ ಸುದ್ದಿ
ಬೆಂಕಿ ಅವಘಡ : ಮುನ್ನೆಚ್ಚರಿಕೆ ವಹಿಸಲು ಅಗ್ನಿಶಾಮಕ ಅಧಿಕಾರಿ ಪಿ.ಚಂದನ್ ಮನವಿ
ರಾಜ್ಯ( ಮಡಿಕೇರಿ) ಡಿ.17 :- ಈಗಾಗಲೇ ಚಳಿಗಾಲ ಆರಂಭವಾಗಿದ್ದು, ಗಿಡ ಮರಗಳ ಎಲೆ ಉದುರುವಿಕೆಯಿಂದ ವಾತಾವರಣದಲ್ಲಿನ ತೇವಾಂಶ ಕಡಿಮೆಯಾಗುತ್ತಿದೆ. ಉದುರುತ್ತಿರುವ ಎಲೆಗಳು ಬೇಗ ಬೆಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದ್ದು, ಚಳಿಗಾಲದ ಬೀಸುವ ಗಾಳಿಯು ಬೆಂಕಿಯ ಕಿಡಿಯನ್ನು ಬಹಳಷ್ಟು ಸಮಯ ಆರದಂತೆ ಕಾಯ್ದುಕೊಂಡು ಅರಣ್ಯ ಪ್ರದೇಶಕ್ಕೆ ಪಸರಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕಸಕ್ಕೆ ಬೆಂಕಿ ಹಾಕುವುದು, ಒಲೆಯ ಬೂದಿಯನ್ನು ಬಯಲಿನಲ್ಲಿ ಸುರಿಯುವುದು, ಬೀಡಿ-ಸಿಗರೇಟು ಸೇದಿ ನಿರ್ಲಕ್ಷ್ಯದಿಂದ ಬಿಸಾಡುವುದು, ಖಾಲಿ ಬಾಟಲಿ ಬಿಸಾಡುವುದನ್ನು ಮಾಡಬಾರದು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪಿ.ಚಂದನ್ ಅವರು ತಿಳಿಸಿದ್ದಾರೆ.
ಅಗ್ನಿ ಅವಘಡಗಳಿಗೆ ಕಾರಣರಾದವರನ್ನು ಅಗ್ನಿ ನಿರ್ಲಕ್ಷತೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಅಗ್ನಿ ಅನಾಹುತ/ ಕಾಡ್ಗಿಚ್ಚು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ಅಗ್ನಿಶಾಮಕ ಇಲಾಖೆಯೊಂದಿಗೆ ಕೈಜೋಡಿಸುವಂತೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪಿ.ಚಂದನ್ ಅವರು ಮನವಿ ಮಾಡಿದ್ದಾರೆ. (ಕೆಸಿಐ,ಎಸ್.ಎಚ್)