ಮೈಸೂರು

‘ಅನರ್ಹ’ ಪುಸ್ತಕ ಬರೆಯುತ್ತಾರಂತೆ ಪರಾಜಿತ ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್

ಮೈಸೂರು,ಡಿ.17:- ಹುಣಸೂರಿನ ಪರಾಜಿತ ಬಿಜೆಪಿ ಅಭ್ಯರ್ಥಿ ಇದೀಗ ‘ಅನರ್ಹ’ ಪುಸ್ತಕ ಬರೆಯುತ್ತಾರಂತೆ. ಅವರ ಈ ಪುಸ್ತಕದಲ್ಲಿ ಅನರ್ಹತೆ ಕುರಿತಾದ ರಾಜಕೀಯ ವಿಚಾರಗಳು ಇರಲಿವೆಯಂತೆ.
ಈ ಸಂಬಂಧ ನಿನ್ನೆ ಹುಣಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಎಚ್. ವಿಶ್ವನಾಥ್ ಉಪ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳು ಹಾಗೂ ಮಾಧ್ಯಮಗಳು ನಮ್ಮ ಪಕ್ಷಾಂತರವನ್ನೇ ದೊಡ್ಡದಾಗಿ ಬಿಂಬಿಸಿದರು ಎಂದು ಕಿಡಿಕಾರಿದರು.

ನಾವು ಹೋದಲೆಲ್ಲಾ ಅನರ್ಹರು, ಅನರ್ಹರು ಎಂಬ ಬಿರುದು ನೀಡಿ ಮತದಾರರನ್ನು ದಿಕ್ಕು ತಪ್ಪಿಸಲು ಯತ್ನಿಸಿದರು ಎಂದು ಕಿಡಿ ಕಾರಿದ ಅವರು ಎರಡು ಕ್ಷೇತ್ರ ಹೊರತಾಗಿ 12 ಕ್ಷೇತ್ರಗಳಲ್ಲಿ ಅನರ್ಹರೇ ಜಯಭೇರಿ ಬಾರಿಸಿದ್ದೇವೆ ಎಂದರು. ವಿರೋಧಿಗಳು ಇದನ್ನು ಅರ್ಥಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಪಕ್ಷಾಂತರದ ನೈಜತೆಯನ್ನು ಜನರಿಗೆ ಅರ್ಥೈಸಲು ಪುಸ್ತಕ ಬರೆಯುತ್ತೇನೆ ಎಂದು ಪ್ರಕಟಿಸಿದರು.
ಅನರ್ಹ ಶಾಸಕರನ್ನು ಸೋಲಿಸಿ ಎಂದು ಬೊಬ್ಬೆ ಇಡುತ್ತಿದ್ದ ಕಾಂಗ್ರೆಸ್‌-ಜೆಡಿಎಸ್‌ ನಾಯಕರು ಹಾಗೂ ಪ್ರಗತಿಪರರಿಗೆ ರಾಜ್ಯದ ಮತದಾರ ತಕ್ಕ ಪ್ರತ್ಯುತ್ತರ ನೀಡಿದ್ದಾನೆ ಎಂದು ತಿರುಗೇಟು ನೀಡಿದ ಅವರು, 12 ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವ ಮೂಲಕ ನಾವು ಅನರ್ಹರಲ್ಲ, ಅರ್ಹರು ಎಂಬುದು ಸಾಬೀತಾಗಿದೆ ಎಂದರು.
ಹುಣಸೂರು ತಾಲೂಕಿನಲ್ಲಿ 36 ಸಾವಿರ ಜೆಡಿಎಸ್‌ ಮತಗಳಿದ್ದು, ನಾನು ಹಿಂದಿನ ಚುನಾವಣೆಯಲ್ಲಿ 90 ಸಾವಿರ ಮತ ಗಳಿಸಿದ್ದೆ, ಆದರೆ, ಗೆಲ್ಲಿಸಿದ್ದು ತಾವೇ ಎಂದು ಬಿಂಬಿಸಿಕೊಳ್ಳುವ ಜೆಡಿಎಸ್‌ನವರಿಗೆ ಕ್ಷೇತ್ರದಲ್ಲಿ ನನ್ನದೂ 54 ಸಾವಿರ ಮತಗಳಿವೆ ಎಂಬುದು ತಿಳಿಯಲಿ ಎಂದರು. ತಾವು ಸೋತರೂ ಬಿಜೆಪಿಯನ್ನು ಬಲಪಡಿಸಿದ್ದೇನೆಂಬ ಹೆಮ್ಮೆ ಇದೆ ಎಂದರು.
ಈ ಹಿಂದಿನ ಕಪಟ ನಾಟಕದ ಸರಕಾರವನ್ನು ಕಿತ್ತೊಗೆದಿರುವ ಹೆಮ್ಮೆ ಇದೆ. ಈಗ ಯಡಿಯೂರಪ್ಪ ನೇತೃತ್ವದ ಸ್ಥಿರ ಸರಕಾರ ಬಂದಿದೆ, ತಾವು ಸೋತರೂ ನಮ್ಮದೇ ಸರಕಾರವಿದ್ದು, ನನ್ನ ಅನುಭವವನ್ನು ಬಳಸಿಕೊಂಡು ಹುಣಸೂರಿನ ಸಮಗ್ರ ಅಭಿವೃದ್ದಿಗೆ ಬದ್ಧನಾಗಿರುತ್ತೇನೆ ಎಂದು ಘೋಷಿಸಿದರು.

ಹುಣಸೂರು ಪಟ್ಟಣದ ಗೌರಮ್ಮ ಪುಟ್ಟಸ್ವಾಮಪ್ಪ ಕಲ್ಯಾಣಮಂಟಪದಲ್ಲಿ ಬಿಜೆಪಿ ವತಿಯಿಂದ ಡಿ.19ರಂದು 11ಗಂಟೆಗೆ ಮತದಾರರಿಗೆ ಕೃತಜ್ಞತಾ ಸಭೆ ಆಯೋಜಿಸಲಾಗಿದೆ ಎಂದರು. (ಕೆಎಸ್,ಎಸ್.ಎಚ್)

Leave a Reply

comments

Related Articles

error: