ಕರ್ನಾಟಕಪ್ರಮುಖ ಸುದ್ದಿ

ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ಬಾಬರೀ ಮಸೀದಿ ಧ್ವಂಸ ಅಣಕು ಪ್ರದರ್ಶನ: ದೂರು ದಾಖಲು

ಮಂಗಳೂರು,ಡಿ.17-ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ಭಾನುವಾರ ನಡೆದ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬಾಬರೀ ಮಸೀದಿ ಧ್ವಂಸ ಘಟನೆಯ ಅಣಕು ಪ್ರದರ್ಶನ ನೀಡಿದ್ದರು. ಇದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಪ್ರದರ್ಶನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಅಯೋಧ್ಯೆ ತೀರ್ಪು ಪ್ರಕಟಿಸಿರುವ ಸೂಕ್ಷ್ಮ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಇಂತಹ ಕಾರ್ಯಕ್ರಮಗಳನ್ನು ನಡೆಸುವುದು ಕೋಮುಪ್ರಚೋದಕ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಈ ನಡುವೆ ಶಾಲೆಯ ಆಡಳಿತ ಮಂಡಳಿಯ ಸದಸ್ಯರ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುತ್ತಾರೆ ಎಂದು ಆರೋಪಿಸಿ ಪಿಎಫ್‌ಐ ಕಲ್ಲಡ್ಕ ವಲಯದ ಅಬೂಬಕರ್ ಸಿದ್ದೀಕ್ ನೀಡಿದ ದೂರಿನ ಅನ್ವಯ ಶ್ರೀ ರಾಮ ವಿದ್ಯಾ ಕೇಂದ್ರ ಆಡಳಿತ ಮಂಡಳಿಯ ಸದಸ್ಯರ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಕಲಂ 295(ಎ), 298 ಐ.ಪಿ.ಸಿ. ಯಂತೆ ಪ್ರಕರಣ ದಾಖಲಾಗಿದೆ.

ಆರ್.ಎಸ್‌.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಯ ಆಡಳಿತ ಮಂಡಳಿ ಮುಖ್ಯಸ್ಥರಾಗಿದ್ದು, ಭಾನುವಾರ ರಾತ್ರಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಪುದುಚೇರಿ ರಾಜ್ಯಪಾಲರಾದ ಕಿರಣ್ ಬೇಡಿ ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಮ್ ಲಕ್ಷ್ಮೀ ಪ್ರಸಾದ್ ಅವರು ಕೂಡಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಆರ್.ಎಸ್‌.ಎಸ್ ಮುಖಂಡ ಹಾಗೂ ಶ್ರೀರಾಮ ವಿದ್ಯಾ ಕೆಂದ್ರದ ಮುಖ್ಯಸ್ಥರಾದ ಡಾ.ಪ್ರಭಾಕರ್ ಭಟ್ ಬಾಬರೀ ಮಸೀದಿ ಧ್ವಂಸದ ಅಣಕು ಪ್ರದರ್ಶನವನ್ನು ಕ್ರೀಡೋತ್ಸವದಲ್ಲಿ ನಡೆಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.

ಐತಿಹಾಸಿಕ ಘಟನೆಯನ್ನು ವಿದ್ಯಾರ್ಥಿಗಳ ಹಾಗೂ ಜನರಿಗೆ ತಿಳಿಸುವ ಉದ್ದೇಶದಿಂದ ಕಾರ್ಯಕ್ರಮದಲ್ಲಿ ಈ ಪ್ರದರ್ಶನ ನೀಡಲಾಗಿದೆ. ಪ್ರತಿ ವರ್ಷ ವಿದ್ಯಾಕೇಂದ್ರದಲ್ಲಿ ದೇಶದಲ್ಲಿ ನಡೆದ ಮಹತ್ವದ ವಿಚಾರಗಳ ಕುರಿತಾಗಿ ಅಣಕು ಪ್ರದರ್ಶನವನ್ನು ವಿದ್ಯಾರ್ಥಿಗಳು ನಡೆಸುತ್ತಾರೆ. ಈ ವರ್ಷದಲ್ಲಿ ಅಯೋಧ್ಯೆ ತೀರ್ಪು ಪ್ರಕಟವಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಘಟನೆಯ ಇತಿಹಾಸವನ್ನು ಪ್ರದರ್ಶನ ಮಾಡಿದ್ದಾರೆ. ನಮ್ಮ ಪಾಲಿಗೆ ಬಾಬರಿ ಮಸೀದಿ ಅಲ್ಲ ಬದಲಾಗಿ ಬಾಬರಿ ಕಟ್ಟಡ. ಅದು ಅಪಮಾನದ ಕಟ್ಟಡವಾಗಿರುವುದರಿಂದ ಅದನ್ನು ನಾವು ಒಪ್ಪುವುದಿಲ್ಲ. ದೇಶದ ಬಗ್ಗೆ ಗೌರವ ಇದ್ದ ಮುಸ್ಲಿಮರು ಕೂಡಾ ಒಪ್ಪಬಾರದು ಎಂದಿದ್ದಾರೆ.

ಪ್ರದರ್ಶನದಲ್ಲಿ ಮುಸ್ಲಿಮರ ವಿರುದ್ಧ ಯಾರು ಮಾತನಾಡಿಲ್ಲ. ಇಬ್ಬರು ಮುಸ್ಲಿಂ ಸಮುದಾಯದದವರು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿಯಾಗಿದ್ದರು. ಪುದುಚೇರಿ ರಾಜ್ಯಪಾಲರಾದ ಕಿರಣ್ ಬೇಡಿ ಕೂಡಾ ಕಾರ್ಯಕ್ರಮವದ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವರು ಉದ್ದೇಶಪೂರ್ವಕವಾಗಿ ವಿರೋಧಿಸುತ್ತಾರೆ ಎಂದರು.

ಇನ್ನು ಡಿ.ವಿ.ಸದಾನಂದ ಗೌಡ ಅವರು ಪ್ರದರ್ಶನದ ವೇಳೆ ಸ್ಥಳದಲ್ಲಿರಲಿಲ್ಲ. ಹೀಗಾಗಿ ಘಟನೆ ಕುರಿತು ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೆ, ಜೆಡಿಎಸ್ಎಂ.ಎಲ್‌.ಸಿ ಎಸ್.ಎಲ್ ಭೋಜೇಗೌಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಬೇಗ ತೆರಳಿದ್ದ ಕಾರಣಕ್ಕಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ ಲಕ್ಷ್ಮೀ ಪ್ರಸಾದ್, ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದ ವಾರ್ಷಿಕ ಕ್ರೀಡಾಕೂಟದ ಕಾರ್ಯಕ್ರಮದಲ್ಲಿ 1992 ರಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ಅಣಕು ಪ್ರದರ್ಶನವನ್ನು ವಿದ್ಯಾರ್ಥಿಗಳಿಂದ ಪ್ರದರ್ಶಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿರುತ್ತಾರೆ ಎಂಬ ವಿಚಾರದ ಕುರಿತಾಗಿ ದೂರು ದಾಖಲಾಗಿದೆ. ಅಬೂಬಕ್ಕರ್ ಸಿದ್ದೀಕ್ ಎಂಬುವವರು ನೀಡಿದ ದೂರಿನ ಅನ್ವಯ ಶ್ರೀ ರಾಮ ವಿದ್ಯಾ ಕೇಂದ್ರ ಆಡಳಿತ ಮಂಡಳಿಯ ಸದಸ್ಯರ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಕಲಂ 295(ಎ), 298 ಐ.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ. ಕಾರ್ಯಕ್ರಮದಲ್ಲಿ ಪುದುಚೇರಿ ರಾಜ್ಯಪಾಲರಾದ ಕಿರಣ್ ಬೇಡಿ ಭಾಗಿಯಾಗಿದ್ದರಿಂದ ಪ್ರೋಟೋಕಾಲ್ ಕಾರಣಕ್ಕಾಗಿ ನಾನು ವೇದಿಕೆಯಲ್ಲಿದೆ ಎಂದಿದ್ದಾರೆ. (ಎಂ.ಎನ್)

Leave a Reply

comments

Related Articles

error: