ಪ್ರಮುಖ ಸುದ್ದಿ

 ಕಾಂಗ್ರೆಸ್ ದಿವಾಳಿ ಕಟಿಲ್ ಹೇಳಿಕೆಗೆ ಡಿ.ಬಸವರಾಜ್ ತಿರುಗೇಟು : ದಿವಾಳಿ ಎದ್ದಿರುವುದು  ಕಾಂಗ್ರೆಸ್ ಅಲ್ಲ. ಮೋದಿ ದುರಾಡಳಿತ

ರಾಜ್ಯ(ದಾವಣಗೆರೆ)ಡಿ.17:- ದೇಶದಲ್ಲಿ ಸೋನಿಯಾಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವು ದಿವಾಳಿ ಎದ್ದಿದೆ ಎಂದು ನಿನ್ನೆಯ ದಿನ ದಾವಣಗೆರೆ ಮಹಾನಗರಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟಿಲ್ ಅವರು ನೀಡಿದ ಹೇಳಿಕೆಗೆ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಹಾಗೂ ಕರ್ನಾಟಕ ಸರ್ಕಾರದ ರೇಷ್ಮೆ ನಿಗಮದ ಮಾಜಿ ಅಧ್ಯಕ್ಷರಾದ ಡಿ. ಬಸವರಾಜ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಹೇಳಿಕೆ ನೀಡಿರುವ ಅವರು ಕಾಂಗ್ರೆಸ್ ದಿವಾಳಿ ಎಂಬ ಕಟಿಲ್ ಹೇಳಿಕೆಗೆ ದಿವಾಳಿ ಎದ್ದಿರುವುದು ಕಾಂಗ್ರೆಸ್ ಅಲ್ಲ. ಬದಲಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದುರಾಡಳಿತದಿಂದ ಬಿಜೆಪಿ ದಿವಾಳಿ ಎದ್ದಿದೆ ಎಂದು ಅವರು ಕಟಿಲ್ ಅವರಿಗೆ ತಿರುಗೇಟು ನೀಡಿದ್ದಾರೆ. ದೇಶದ ಜನತೆ ಎರಡು ಬಾರಿ ಕೇಂದ್ರದಲ್ಲಿ ಬಿಜೆಪಿಗೆ ಅಧಿಕಾರ ನೀಡಿದ್ದರೂ ಸಹ ಉತ್ತಮ ಆಡಳಿತ ನೀಡುವಲ್ಲಿ ಪ್ರಧಾನಿ ಮೋದಿ ಮುಗ್ಗರಿಸಿದ್ದಾರೆ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ. ಬಿಜೆಪಿಯು ಅಭಿವೃದ್ಧಿಯ  ಮಂತ್ರ ಪಠಿಸದೇ ಕೇವಲ ರಾಮಮಂದಿರ-ಬಾಬ್ರಿಮಸೀದಿ ವಿಚಾರವನ್ನು ಮುಂದಿಟ್ಟುಕೊಂಡು ಕಳೆದ 3 ದಶಕಗಳ ಕಾಲ ದೇಶದಲ್ಲಿ ಗೊಂದಲ ವಿವಾದ ಸೃಷ್ಟಿಸಿ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿತ್ತು. ಇದೀಗ ಸುಪ್ರೀಂ ಕೋರ್ಟ್ ರಾಮಮಂದಿರ ವಿವಾದಕ್ಕೆ ಮುಕ್ತಿ ನೀಡಿ ಅಂತ್ಯ ಹಾಡಿದೆ. ದೇಶದಲ್ಲಿ ವಿವಾದ ಹಾಗೂ ಗೊಂದಲಗಳನ್ನು ಸೃಷ್ಟಿಸಿದರೆ ಮಾತ್ರ ಬಿಜೆಪಿ ಉಸಿರಾಡುತ್ತದೆ ಎಂದು ಅದರ ನಾಯಕರು ನಂಬಿಕೊಂಡಿದ್ದಾರೆ. ಅದಕ್ಕಾಗಿ ಮೊದಿ ಮತ್ತು ಅಮಿತ್‍ಷಾ ಸಂವಿಧಾನಕ್ಕೆ ವಿರುದ್ಧವಾದ, ಅವೈಜ್ಞಾನಿಕ ಪೌರತ್ವ ತಿದ್ದುಪಡಿ ವಿಧೇಯಕವನ್ನು ಸಂಸತಿನಲ್ಲಿ ತರಾತುರಿಯಲ್ಲಿ ಮಂಡಿಸಿ

ಅಂಗೀಕಾರ ಪಡೆದು ರಾಷ್ಟ್ರಪತಿಯವರಿಂದಲೂ ಅನುಮೋದನೆ ಪಡೆದಿದ್ದಾರೆ. ಮೋದಿ ತೆಗೆದುಕೊಂಡಿರುವ ಸಂವಿಧಾನ ವಿರೋಧಿ ಕಾಯ್ದೆಯಿಂದ ದೇಶಾದ್ಯಂತ ಪ್ರಜ್ಞಾವಂತ ಜನತೆ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧವಾಗಿ ಬೀದಿಗೆ ಇಳಿದಿದ್ದಾರೆ. ಇಂತಹ ಗೊಂದಲದ ಮಸೂದೆ ಜಾರಿಗೊಳಿಸಿದರೆ ರಾಮಮಂದಿರದಂತೆ ಮತ್ತೆ 30 ವರ್ಷಗಳ ಕಾಲ ಬಿಜೆಪಿ ರಾಜಕೀಯ ಬೇಳೆ ಬೇಯಿಸಬಹುದು ಎಂಬ ಅಂದಾಜಿಸಿದೆ ಎಂದು ಅವರು ದೂರಿದ್ದಾರೆ. ಆದರೆ ದೇಶದ ಮೋದಿ ಸರ್ಕಾರದ ದುರಾಡಳಿತದ ವಿರುದ್ಧ ಕರ್ಫ್ಯೂ ನಿಷೇಧಾಜ್ಞೆಗಳನ್ನು ಜಾರಿಗೊಳಿಸಿದರೂ ಸಹ ಲೆಕ್ಕಿಸದೇ ದೇಶಾದ್ಯಂತ ತಮ್ಮ ಹಕ್ಕುಗಳಿಗಾಗಿ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಜನರು ಜೀವದ ಹಂಗುತೊರೆದು ಹೋರಾಟಕ್ಕೆ ಇಳಿದಿದ್ದಾರೆಂದರು.

ಪ್ರಧಾನಮಂತ್ರಿ ನರೇಂದ್ರಮೋದಿ ಆಡಳಿತದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ. ದೇಶದ ನೈಜ ಸಮಸ್ಯೆಗಳ ಬಗ್ಗೆ ಗಮನ ನೀಡದ ಪ್ರಧಾನಿ ಕಳೆದ 6 ವರ್ಷಗಳಿಂದ ಪಾಕಿಸ್ತಾನ, ಪುಲ್ವಾಮಾ, ಬಾಲಾಕೋಟ್, ಸರ್ಜಿಕಲ್‍ಸ್ಟ್ರೈಕ್,  ಇಸ್ಲಾಮ್ ಧರ್ಮಿಯರ ತಲಾಕ್ ಕಾಯ್ದೆ. ಇದೀಗ ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಂತಹ ವಿಷಯಗಳಿಂದ ಬಿಜೆಪಿ ದೇಶದಲ್ಲಿ ಗೊಂದಲಗಳನ್ನು ಸೃಷ್ಟಿಸಿದೆ. ದೇಶದಲ್ಲಿ ಉಂಟಾಗಿರುವ ಜ್ವಲಂತ ಸಮಸ್ಯೆಗಳಾದ ಆರ್ಥಿಕ ಕುಸಿತ, ದಾಖಲೆಯ ನಿರುದ್ಯೋಗ  ಸಮಸ್ಯೆ, ಬೆಲೆ ಏರಿಕೆ, ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ಚಕಾರ ಎತ್ತದ ಮೋದಿಯವರ ನಡೆಯನ್ನು ಡಿ. ಬಸವರಾಜ್ ಖಂಡಿಸಿದ್ದಾರೆ.

ಮೋದಿಯವರು ಆಡಳಿತಕ್ಕೆ ಬಂದ ಮೇಲೆ ದೇಶದ ಗಡಿಭಾಗ ಹಾಗೂ ದೇಶದ ಒಳಗಿನ ಉದ್ದಗಲಕ್ಕೂ ಅಶಾಂತಿ ತುಂಬಿ ತುಳುಕುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿದಾನವನ್ನು ಬದಲಿಸುತ್ತೇವೆಂದು ಪದೇ ಪದೇ ಹೇಳುತ್ತಿದ್ದರು. ಇದೀಗ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತರುವ ಮೂಲಕ ಸಂವಿಧಾನ ಬದಲಾವಣೆಗೆ ಬಿಜೆಪಿ ಪರೋಕ್ಷವಾಗಿ ಮುಂದಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಪಾಂಡಿತ್ಯ ಎಷ್ಟಿದೆ ಎಂದರೆ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ಎಂಬ ಕನಿಷ್ಠ ಜ್ಞಾನವು ಅವರಿಗೆ ಇಲ್ಲ. ಇಂತಹ ವ್ಯಕ್ತಿ ನಗರಕ್ಕೆ ಬಂದು ಕಾಂಗ್ರೆಸ್ ಪಕ್ಷ ಭೌತಿಕವಾಗಿ ವೈಚಾರಿಕವಾಗಿ ದಿವಾಳಿ ಎದ್ದಿದೆ ಎಂದು ಹೇಳಿಕೆ ನೀಡುವ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ 1885ರಲ್ಲಿ ಜನಿಸಿದ ಪಕ್ಷಕ್ಕೆ ಅಪಮಾನಿಸಿದ್ದಾರೆ. ಆದರೆ ಬಿಜೆಪಿ ಕೇವಲ ಅಧಿಕಾರಕ್ಕಾಗಿ 1980ರ ನಂತರ ಜನ್ಮತಾಳಿದೆ ಎಂಬುದು ಅವರು ಅರಿತುಕೊಳ್ಳಬೇಕೆಂದು ಡಿ. ಬಸವರಾಜ್ ವಾಗ್ದಾಳಿ ನಡೆಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: