ಪ್ರಮುಖ ಸುದ್ದಿ

ಉಲಮಾ ಸಮ್ಮೇಳನ : ಪ್ರಾಣತ್ಯಾಗ ಮಾಡಲು ಸಿದ್ಧ, ಆದರೆ ದೇಶವನ್ನು ಬಿಡಲ್ಲ : ಶಾಸಕ ಎನ್.ಎ.ಹ್ಯಾರಿಸ್

ರಾಜ್ಯ( ಮಡಿಕೇರಿ) ಡಿ.18 :- ಕರ್ನಾಟಕ ರಾಜ್ಯ ಫೈಝೀಸ್ ಅಸೋಸಿಯೇಷನ್ ವತಿಯಿಂದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ 60ನೇ ವಾರ್ಷಿಕ ಮಹಾ ಸಮ್ಮೇಳನ ಹಾಗೂ ಜಾಮಿಯ್ಯಾ ನೂರಿಯ್ಯಾ ಪಟ್ಟಕಾಡ್ 57ನೇ ವಾರ್ಷಿಕೋತ್ಸವ ಹಾಗೂ 55ನೇ ಸನುದಾನದ ಮಹಾ ಸಮ್ಮೇಳನದ ಇದರ ಪ್ರಚಾರ ಮಹಾ ಸಮ್ಮೇಳನವು ನಗರದ ಗಾಂಧಿ ಮೈದಾನದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಬೆಂಗಳೂರು ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ.ಹ್ಯಾರಿಸ್, ಪ್ರಾಣವನ್ನು ತ್ಯಾಗ ಮಾಡಲು ನಾವು ಸಿದ್ದ, ಆದರೆ ದೇಶವನ್ನು ಬಿಟ್ಟು ಹೋಗಲು ನಾವು ಸಿದ್ಧರಿಲ್ಲ. ನಾವು ಈ ದೇಶಕ್ಕೆ ನಿನ್ನೆ ಮೊನ್ನೆ ಬಂದವರಲ್ಲ. ದೇಶದ ಸಂವಿಧಾನವನ್ನು ನಾವು ಕಾಪಾಡಿಕೊಂಡು ಬಂದವರು. ಭಾರತ ದೇಶವು ಜಾತೀವಾದಿ ದೇಶವಲ್ಲ, ಜಾತ್ಯತೀತ ರಾಷ್ಟ್ರವಾಗಿದೆ. ನಮ್ಮ ಗುರು ಹಿರಿಯರು ತ್ಯಾಗ, ಬಲಿದಾನದ ಮಾಡಿ ಕಟ್ಟಿದ ದೇಶವಿದು, ಈ ದೇಶದಲ್ಲಿ ವಾಸಿಸುತ್ತಿರುವ ಸರ್ವರೂ ನಮ್ಮ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯಂದಿರಾಗಿದ್ದಾರೆ. ಭಾರತವು ವಿವಿಧೆತೆಯಲ್ಲಿ ಏಕತೆಯನ್ನು ಕಾಣುವ ದೇಶವಾಗಿದೆ. ಕೇವಲ ಸಂಖ್ಯಾ ಬಲದ ಆಧಾರದ ತಾವು ದೇಶದ ಸಂವಿಧಾನವನ್ನು ಬದಲಾಯಿಸಲು ಮುಂದಾಗಿದ್ದೀರಿ, ನಿಮ್ಮ ಯಾವುದೇ ಷಡ್ಯಂತ್ರಕ್ಕೆ ನಾವು ಬಲಿಯಾಗುವುದಿಲ್ಲ ಎಂದು ಹ್ಯಾರಿಸ್ ಹೇಳಿದರು.
ಈಗಾಗಲೇ ತಿವ್ರಳಿ ತಲಾಖ್ ಹಾಗೂ ಬಾಬರೀ ಮಸೀದಿಯನ್ನು ನಾವು ಕಳೆದುಕೊಂಡಿದ್ದೇವೆ. ಮುಸ್ಲಿಂ ಸಮುದಾಯವು ಜಗತ್ತಿನಲ್ಲೇ ಅತೀ ಹೆಚ್ಚು ಶಾಂತಿಪ್ರಿಯ ಸಮುದಾಯವಾಗಿದೆ. ಆದರಿಂದ ನಮ್ಮ ತಾಳ್ಮೆಯನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ದೇಶವನ್ನು ವಿಭಜನೆ ಮಾಡುವ ಕೆಲಸ ಕೇವಲ ಕೆಲವರ ಹಗಲು ಕನಸಾಗಿದೆ. ಯಾರಿಂದಲೂ ನಮ್ಮನ್ನು ಇಲ್ಲಿಂದ ಹೊರಹಾಕಲು ಸಾಧ್ಯವಿಲ್ಲ ಎಂದು ಹ್ಯಾರಿಸ್ ಹೇಳಿದರು.
ಎಸ್.ಕೆ.ಎಸ್.ಎಸ್.ಎಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತವು ವಿವಿಧತೆಯನ್ನು ಕಾಣುವ ದೇಶವಾಗಿದೆ. ಸರ್ವಧರ್ಮದವರು ಶಾಂತಿಯುತವಾಗಿ ಜೀವನ ನಡೆಸುತ್ತಿರುವ ದೇಶವಾಗಿದೆ ಎಂದರು. ಈ ದೇಶದಲ್ಲಿ ಕಳೆದ 93 ವರ್ಷಗಳಿಂದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಬಹಳ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದೆ. ಸಮಸ್ತದ ಅಧೀನದಲ್ಲಿ 10ಸಾವಿರಕ್ಕೂ ಹೆಚ್ಚು ಮದರಸಗಳು ಕಾರ್ಯನಿರ್ವಹಿಸುತ್ತಾ ಬಂದಿವೆ. ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗ ಎಸ್.ಕೆ.ಎಸ್.ಎಸ್.ಎಫ್ ವಿಖಾಯ ತಂಡವು ಜಾತಿ ಧರ್ಮವನ್ನು ಮರೆತು ಕಾರ್ಯನಿರ್ವಹಿಸಿದೆ ಎಂದರು.
ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾದ ಕೆ.ಎ.ಯಾಕುಬ್ ಧ್ವಜಾರೋಹಣ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು. ಝೈನುಲ್ ಆಬಿದೀನ್ ಜಿಫ್ರೀ ತಂಙಲ್ ಬೆಳ್ತಂಗಡಿ ಪ್ರಾರ್ಥನೆ ನೆರವೇರಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ಓಣಂಬಳ್ಳಿ ಮುಹಮ್ಮದ್ ಫೈಝಿ, ಅಬ್ದುಲ್ಲಾ ಫೈಝಿ ಕೊಡಗು, ಸಯ್ಯದ್ ಆಬಿದೀನ್ ತಂಙಲ್ ಕುನ್ನುಂಗೈ, ನಾಪೋಕ್ಲು ಗ್ರಾಮ ಪಂಚಾಯತಿ ಅಧ್ಯಕ್ಷ ಇಸ್ಮಾಯಿಲ್, ಉಸ್ಮಾನ್ ಹಾಜಿ ಸಿದ್ದಾಪುರ ಮತ್ತಿತರ ಪ್ರಮುಖರು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: