
ಪ್ರಮುಖ ಸುದ್ದಿ
ತಮ್ಮ ನಿಲುವಿಗೆ ಬದ್ಧರಾಗಿರುವ ಸಚಿವ ಅಮಿತ್ ಶಾ : ಸಹಾಯ ಕೋರಿ ಬಂದ ಎಲ್ಲ ಶರಣಾರ್ಥಿಗಳಿಗೆ ಭಾರತೀಯ ಪೌರತ್ವ ನೀಡಿಯೇ ತೀರಲಿದೆ
ದೇಶ(ನವದೆಹಲಿ)ಡಿ.17:- ಪೌರತ್ವ (ತಿದ್ದುಪಡಿ) ಕಾಯ್ದೆ-2019ನ್ನು ವಿರೋಧಿಸಿ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ಮುಂದುವರೆದಿವೆ. ಆದಾಗ್ಯೂ ಕೂಡ ಗೃಹ ಸಚಿವ ಅಮಿತ್ ಶಾ ತಮ್ಮ ನಿಲುವಿಗೆ ಬದ್ಧರಾಗಿದ್ದಾರೆ. ಇಂದು ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ” ರಾಜಕೀಯವಾಗಿ ಈ ಕಾಯ್ದೆಗೆ ಎಷ್ಟೇ ವಿರೋಧ ಎದುರಾಗಲಿ, ಭಾರತೀಯ ಜನತಾ ಪಾರ್ಟಿ ಮಾತ್ರ ಸಹಾಯ ಕೋರಿ ಬಂದ ಎಲ್ಲ ಶರಣಾರ್ಥಿಗಳಿಗೆ ಭಾರತೀಯ ಪೌರತ್ವ ನೀಡಿಯೇ ತೀರಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು “ಶರಣಾರ್ಥಿಗಳಿಗೆ ಭಾರತೀಯ ಪೌರತ್ವ ಸಿಗಲಿದ್ದು, ಅವರು ಭಾರತದ ನಾಗರಿಕರಾಗಲಿದ್ದು, ಈ ದೇಶದಲ್ಲಿ ಗೌರವದಿಂದ ಬಾಳಲಿದ್ದಾರೆ. ರಾಜಕೀಯವಾಗಿ ಯಾರು ಬೇಕಾದರೂ ಇದನ್ನು ವಿರೋಧಿಸಿ, ಭಾರತೀಯ ಜನತಾ ಪಕ್ಷ ಪಕ್ಷ ಮಾತ್ರ ಈ ಕಾಯ್ದೆ ಜಾರಿಗೆ ಕಟಿ ಬದ್ಧವಾಗಿದೆ” ಎಂದಿದ್ದಾರೆ. ಈ ಕಾಯ್ದೆಯಲ್ಲಿ ಎಲ್ಲಿಯೂ ಕೂಡ ಯಾರ ಪೌರತ್ವವನ್ನೂ ಕೂಡ ಹಿಂಪಡೆಯುವ ಕುರಿತು ಪ್ರಸ್ತಾವನೆ ಇಲ್ಲ ಮತ್ತು ಇದರಲ್ಲಿ ಪೌರತ್ವ ದಯಪಾಲಿಸುವ ಪ್ರಸ್ತಾಪ ಮಾತ್ರ ಇದ್ದು, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಭಾರತ ಪ್ರವೇಶಿಸಿರುವ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲಾಗುತ್ತಿದೆ ಎಂದು ಶಾ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ನಾನು ಈ ವಿಶ್ವಾಸ ನೀಡಲು ಬಯಸುತ್ತೇನೆ. ಕಾಯ್ದೆಯ ಕುರಿತಂತೆ ಸ್ಪಷ್ಟನೆ ನೀಡಿರುವ ಶಾ ಈಗಾಗಲೇ ಈ ದೇಶದ ನಾಗರಿಕರಾಗಿರುವವರು ಭಯಪಡುವ ಅಗತ್ಯವಿಲ್ಲ, ಈ ದೇಶದ ನಾಗರಿಕರಾಗಿರುವ ಓರ್ವ ಮುಸ್ಲಿಂ ವ್ಯಕ್ತಿಗೂ ಕೂಡ ಈ ಕಾಯ್ದೆಯಿಂದ ಅನ್ಯಾಯವಾಗುವುದಿಲ್ಲ ಎಂಬುದನ್ನು ನಾನು ವಿಶ್ವಾಸದಿಂದ ಹೇಳಬಯಸುತ್ತೇನೆ ಎಂದಿದ್ದಾರೆ. (ಎಸ್.ಎಚ್)