ಮೈಸೂರು

ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ ಆರೋಪ : ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸಿಬ್ಬಂದಿ ಅಮಾನತು

ಮೈಸೂರು,ಡಿ.19:-  ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸಿಬ್ಬಂದಿಯೊಬ್ಬರು ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ ಮೇರೆಗೆ ಅಮಾನತುಗೊಂಡ ಘಟನೆ ನಡೆದಿದೆ.

ಕಾಲೇಜಿನ ದ್ವಿತೀಯ ದರ್ಜೆ ಸಹಾಯಕ ಜೆ. ಜಯರಾಮ ಅಮಾನತುಗೊಂಡ ಸಿಬ್ಬಂದಿಯಾಗಿದ್ದು,  ಕಾಲೇಜಿನ ವಿದ್ಯಾರ್ಥಿನಿ ಯೋರ್ವರ  ಮೊಬೈಲ್ ನಂಬರ್ ಸಂಗ್ರಹಿಸಿ ಆಕೆಗೆ ಕರೆ ಮಾಡಿ ಮಾನಸಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಕಾಲೇಜಿನ ಮಹಿಳಾ ದೌರ್ಜನ್ಯ ಸಮಿತಿಯ ನಡಾವಳಿಯ ಆಧಾರದ ಮೇಲೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಡಿ.12 ರಂದು ಜಯರಾಮ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ಕಾಲೇಜಿನ ವಿದ್ಯಾರ್ಥಿನಿಯೋರ್ವರ ಮೊಬೈಲ್ ನಂಬರ್ ಸಂಗ್ರಹಿಸಿ ದ್ವಿತೀಯ ದರ್ಜೆ ಸಹಾಯಕ ಜೆ. ಜಯರಾಮ  ಆಕೆಗೆ ಕರೆ ಮಾಡಿ ಕಾಲೇಜಿನ ಶೈಕ್ಷಣಿಕ ವಿಚಾರ ಮುಂದಿಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದ.  ನೀನು ಸರಿಯಾಗಿ ಕಾಲೇಜಿಗೆ ಬರುತ್ತಿಲ್ಲ.  ಈ ವಿಚಾರವನ್ನು ಪಾಲಕರ ಗಮನಕ್ಕೆ ತರುತ್ತೇನೆ.  ನಿನಗೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದೆಲ್ಲ ಬೆದರಿಕೆ ಒಡ್ಡಿದ್ದಾನೆ. ವಿದ್ಯಾರ್ಥಿನಿ ಬೆದರಿಕೆಗೆ ಮಣಿದಾಗ ಪಾರ್ಟಿ ಕೊಡಿಸಬೇಕೆಂದು ಜಯರಾಮ ಪೀಡಿಸಿರುವ ಮಾತುಗಳು ಮೊಬೈಲ್‌ನಲ್ಲಿ ರೆಕಾರ್ಡ್ ಆಗಿದೆ. ಅಲ್ಲದೆ ನೀನು ಒಬ್ಬಳೇ ನನ್ನ ಜತೆ ಮಾತನಾಡಬೇಕು ಎಂದು ಬೆದರಿಕೆಯೊಡ್ಡಿದ್ದು, ಇದರಿಂದ ನನಗೆ ಓದಲು ಸಹ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನೊಂದ ವಿದ್ಯಾರ್ಥಿನಿ 18-10-2019 ರಂದು ಪ್ರಾಂಶುಪಾಲರಿಗೆ ದೂರು ನೀಡಿದ್ದಳು.

ಈ ದೂರಿನ ಆಧಾರದ ಮೇಲೆ ವಿಚಾರಣೆ ನಡೆಸಿದ ಕಾಲೇಜಿನ ಮಹಿಳಾ ದೌರ್ಜನ್ಯ ಸಮಿತಿಯು ಜಯರಾಮ ವಿರುದ್ಧ ಕಾಲೇಜು ಶಿಕ್ಷಣ ಇಲಾಖೆಗೆ ವರದಿ ಸಲ್ಲಿಸಿತ್ತು. ಈ ವರದಿಯ ಆಧಾರದ ಮೇಲೆ ಜಯರಾಮ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.

ಏತನ್ಮಧ್ಯೆ ಶಾಸಕ ಎಲ್.ನಾಗೇಂದ್ರ ಸಿಬ್ಬಂದಿ ಪರ ಬ್ಯಾಟಿಂಗ್ ಮಾಡಿದ್ದಾರೆ.   ಕಾಲೇಜು ಶಿಕ್ಷಣ ಇಲಾಖೆ 14-11-2018 ರಲ್ಲಿ ಹೊರಡಿಸಿದ ಸುತ್ತೋಲೆ ಪ್ರಕಾರ ಮಹಾರಾಣಿ ಕಾಲೇಜಿನಲ್ಲಿ ಮಹಿಳಾ ಲೈಂಗಿಕ ಕಿರು ಕುಳ ನಿವಾರಣಾ ಸಮಿತಿ ರಚನೆಯಾಗಿಲ್ಲ. ಸುತ್ತೋಲೆಯಲ್ಲಿ ಸೂಚಿಸಿರುವ ಸದಸ್ಯರನ್ನು ಸಮಿತಿಗೆ ನೇಮಕ ಮಾಡಿಲ್ಲ. ಸಮಿತಿ ರಚನೆಯಲ್ಲಿಯೇ ಲೋಪವಾಗಿದ್ದು, ಈ ಸಮಿತಿ ವರದಿ ಆಧಾರದ ಮೇಲೆ ಜಯರಾಮ ಅವರನ್ನು ಅಮಾನತು ಮಾಡಿರುವುದು ಸರಿಯಲ್ಲ. ಕಾಲೇಜಿನಲ್ಲಿರುವ ಕೆಲವು ಸಿಬ್ಬಂದಿ ಜಯರಾಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಅಮಾನತು ಆದೇಶ ಹಿಂಪಡೆಯಬೇಕೆಂದು ಡಿ.16 ರಂದು ಶಾಸಕ ಎಲ್. ನಾಗೇಂದ್ರ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಸಚಿವರು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: