ದೇಶಪ್ರಮುಖ ಸುದ್ದಿ

‘ಪ್ಯಾರಿಸ್ ಹವಾಮಾನ ಬದಲಾವಣೆ’ ಒಪ್ಪಂದಕ್ಕೆ ಅ.2ರಂದು ಅನುಮೋದನೆ

ಜಾಗತಿಕ ತಾಪಮಾನ ತಗ್ಗಿಸಲು ಕೈಗೊಳ್ಳಲಾಗಿರುವ ಮಹತ್ವದ ‘ಪ್ಯಾರಿಸ್ ಹವಾಮಾನ ಬದಲಾವಣೆ’ ಒಪ್ಪಂದಕ್ಕೆ ಭಾರತ ಅಕ್ಟೋಬರ್ 2ರಂದು ಅಧಿಕೃತವಾಗಿ ಅನುಮೋದನೆ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಕೇರಳದ ಕೋಯಿಕೋಡ್‍ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

ಶ್ರೀಮಂತ ರಾಷ್ಟ್ರಗಳ ಮಿತಿಮೀರಿದ ಅಭಿವೃದ್ಧಿ ಕಾರ್ಯಗಳಿಂದ ಜಾಗತಿಕ ತಾಪಮಾನದಲ್ಲಿ ಬದಲಾವಣೆ ಉಂಟಾಗುತ್ತಿದೆ. ಹಾಗಾಗಿ ಅಂತಹ ದೇಶಗಳು ಹಸಿರುಮನೆ ಪರಿಣಾಮ ನಿವಾರಿಸಲು ಬಡ ರಾಷ್ಟ್ರಗಳಿಗೆ ನೆರವು ನೀಡಬೇಕೆಂಬುದು ಭಾರತದ ನಿಲುವಾಗಿದೆ. ಜಾಗತಿಕ ತಾಪಮಾನ ಹೆಚ್ಚಳವು ಮೊದಲು ಕರಾವಳಿ ತೀರದ ರಾಜ್ಯಗಳ ಮೇಲೆ ಪರಿಣಾಮ ಬೀರುವುದರಿಂದ ಪ್ಯಾರಿಸ್ ಹವಾಮಾನ ಬದಲಾವಣೆ ಒಪ್ಪಂದಕ್ಕೆ ಮುದ್ರೆಯೊತ್ತುವ ವಿಷಯವನ್ನು ಕೋಯಿಕೋಡ್‍ನಿಂದ ಪ್ರಕಟಿಸುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು.

ಕಳೆದ ವರ್ಷ ಡಿಸೆಂಬರ್‍ನಲ್ಲಿ ಪ್ಯಾರಿಸ್‍ನಲ್ಲಿ ನಡೆದ ‘ಕಾನ್ಫರೆನ್ಸ್ ಆಫ್ ದಿ ಪಾರ್ಟಿಸ್-21’ ಸಭೆಯಲ್ಲಿ ಪಾಲ್ಗೊಂಡಿದ್ದ 195 ರಾಷ್ಟ್ರಗಳಲ್ಲಿ ಈವರೆಗೆ 60 ರಾಷ್ಟ್ರಗಳು ಪ್ಯಾರಿಸ್ ಒಪ್ಪಂದಕ್ಕೆ ಅನುಮೋದನೆ ನೀಡಿವೆ.

ಜಾಗತಿಕ ತಾಪಮಾನ ಏರುಪೇರಿನಿಂದ ವಿಶ್ವಾದ್ಯಂತ ಕುಡಿಯುವ ನೀರು, ಆಹಾರ ಮೊದಲಾದ ಮೂಲಭೂತ ಅವಶ್ಯಕತೆಗಳು ಕಡಿಮೆಯಾಗುತ್ತಿದ್ದು, ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಹಾಗಾಗಿ ಪರಿಸರ ಸ್ನೇಹಿ ಯೋಜನೆಗಳ ಜಾರಿ, ಸಾಂಪ್ರದಾಯಿಕ ಇಂಧನದ ಮೇಲಿನ ಅವಲಂಬನೆ ಕಡಿಮೆ ಮಾಡಿ ಪವನ ಶಕ್ತಿ ಹಾಗೂ ಸೌರಶಕ್ತಿಯ ಉತ್ಪಾದನೆಗೆ ಕಡೆ ಗಮನ ನೀಡುವುದು. ಮತ್ತು ಈ ಯೋಜನೆಗಳನ್ನು ಅಳವಡಿಸಿಕೊಳ್ಳಲು ಬಡರಾಷ್ಟ್ರಗಳಿಗೆ ಶ್ರೀಮಂತ ರಾಷ್ಟ್ರಗಳು ಹಣಕಾಸಿನ ನೆರವು ನೀಡಬೇಕೆಂಬುದು ಒಪ್ಪಂದದಲ್ಲಿ ಇರುವ ಪ್ರಮುಖ ಅಂಶವಾಗಿದೆ.

 

Leave a Reply

comments

Tags

Related Articles

error: