ಮೈಸೂರು

ಮೈಸೂರು ಜಿಲ್ಲೆಯಲ್ಲಿ ಇಂದಿನಿಂದ ಐದು ದಿನಗಳ ಕಾಲ ಮೋಡ ಕವಿದ ವಾತಾವರಣ : ಮಳೆ ಬರುವ ಸಾಧ್ಯತೆ ಇಲ್ಲ

ಮೈಸೂರು,ಡಿ.21:- ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಈ ವಾರದ ಮುನ್ಸೂಚನೆಯಂತೆ ಮೈಸೂರು ಜಿಲ್ಲೆಯಲ್ಲಿ   21-12-2019ರಿಂದ 25-12-2019 ವರೆಗೆ ಮೋಡ ಕವಿದ ವಾತಾವರಣವಿದ್ದು, ಮಳೆ ಬರುವ ಸಾಧ್ಯತೆ ಇಲ್ಲ. ಗರಿಷ್ಠ ಉಷ್ಣಾಂಶ 29-30ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ಉಷ್ಣಾಂಶ 15-16ಡಿಗ್ರಿ ಸೆಲ್ಶಿಯಸ್ ವರೆಗೆ ದಾಖಲಾಗುವ ಸಾಧ್ಯತೆಯಿದೆ. ಬೆಳಗಿನ ಗಾಳಿಯ ತೇವಾಂಶ ಶೇಕಡ 82-85% ವರೆಗೆ ಮತ್ತು ಮಧ್ಯಾಹ್ನದ ತೇವಾಂಶ ಶೇಕಡ 55-57% ಮತ್ತು ಗಾಳಿಯು ಗಂಟೆಗೆ ಸರಾಸರಿ 1-2 ಕಿಲೋಮೀಟರ್ ವೇಗದಲ್ಲಿ ಬೀಸುವ ಸಾಧ್ಯತೆಯಿದೆ ಎಂದು ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗ ತಿಳಿಸಿದೆ.

ಭತ್ತ, ರಾಗಿ ಮತ್ತು ಇತರೆ ಬೆಳೆಗಳು ಕಟಾವು ಮತ್ತು ಒಕ್ಕಣೆ ಹಂತದಲ್ಲಿದ್ದು, ಜಿಲ್ಲೆಯಲ್ಲಿ ಮೋಡ ಕವಿದ ವಾತವಾರಣವಿದ್ದು, ಮುಂದಿನ ಮೂರು ನಾಲ್ಕು ದಿನಗಳು ಮಳೆ ಬರುವ ಸಾಧ್ಯತೆ ಇಲ್ಲ. ಬೆಳೆಗಳ ಕಟಾವು ನಡೆದಿದ್ದು, ರೈತರು ಭತ್ತ, ರಾಗಿ ಹಾಗೂ ಇತರೆ ಬೆಳೆಗಳ ಕಟಾವು ಮತ್ತು ಒಕ್ಕಣೆ ಕೆಲಸ ಕಾರ್ಯಗಳನ್ನು ಮುಂದುವರೆಸಲು ತಿಳಿಸಲಾಗಿದೆ.

ಕಟಾವು ಮಾಡಿದ ಬಿತ್ತನೆ ಬೀಜಗಳನ್ನು ಸರಿಯಾಗಿ ಒಣಗಿಸಬೇಕು. ಅಂದರೆ ಏಕದಳ ಧಾನ್ಯಗಳು ತೇವಾಂಶ ಶೇ. 11 ರಿಂದ 12, ದ್ವಿದಳದಾನ್ಯಗಳ ತೇವಾಂಶ ಶೇ. 9, ಎಣ್ಣೆಕಾಳುಗಳು ಶೇ.8 ಮತ್ತು ತರಕಾರಿ ಬೀಜಗಳು ಶೇ.5 ರಿಂದ 6 ರಷ್ಟಿರಬೇಕು. ಇದರಿಂದ ಹೆಚ್ಚುದಿನ ಕೆಡದಂತೆ ಬೀಜಗಳನ್ನು ಸಂಸ್ಕರಣೆ ಮಾಡಬಹುದು ಜೊತೆಗೆ ಉಗ್ರಾಣ ಕೀಟದ ಬಾಧೆಯನ್ನು ಕಡಿಮೆ ಮಾಡಬಹುದು.

ಬೆಳೆಗಳನ್ನು ಕಟಾವು ಮಾಡಿದ ನಂತರ ಬೆಳೆಯ ಉಳಿಕೆಗಳನ್ನು ಸುಡಬಾರದು. ಅವುಗಳನ್ನು ಕೂಡಿ ಹಾಕಿ ಎರೆಗೊಬ್ಬರ/ಕಾಂಪೋಕ್ಟ್ ತಯಾರಿಸಲು ಉಪಯೋಗಿಸಬೇಕು.

ಜಾನುವಾರು,ರೇಷ್ಮೆ ಹಾಗೂ ಕೋಳಿ ಸಾಕಣೆ ಬೆಳಗಿನ ಜಾವ ಹಾಗೂ ರಾತ್ರಿ ವೇಳೆ ವಾತಾವರಣದ ಉಷ್ಣಾಂಶದಲ್ಲಿ ಸ್ವಲ್ಪ ಇಳಿತವಿರುವುದರಿಂದ ಜಾನುವಾರು, ರೇಷ್ಮೆ ಹಾಗೂ ಕೋಳಿ ಸಾಕಣೆ ಕೊಠಡಿಯ ಉಷ್ಣಾಂಶದ ಸ್ಥಿರತೆಯನ್ನು ವಿದ್ಯುತ್ ಬಲ್ಪ್ ನ ಶಾಖದ ಸಹಾಯದಿಂದ ಕಾಪಾಡಿಕೊಳ್ಳಬೇಕು. ಕೊಟ್ಟಿಗೆಯನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು ಮತ್ತು ಜಾನುವಾರುಗಳನ್ನು ಚಳಿಗಾಳಿಯಿಂದ ರಕ್ಷಿಸಬೇಕು.

ಕೊಯ್ಲು ಮಾಡಿದ ಭತ್ತ,ರಾಗಿ, ಜೋಳ & ಇನ್ನಿತರ ಧಾನ್ಯಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ, ಒಕ್ಕಣೆ ಮಾಡಿ ಶುಚಿಗೊಳಿಸಿ ಚೀಲಗಳಲ್ಲಿ ಶೇಖರಣೆ ಮಾಡುವುದು. ಬಣವೆ ಹಾಕುವ ಮೊದಲು ಹುಲ್ಲನ್ನು ಚೆನ್ನಾಗಿ ಒಣಗಿಸಿ ಬಣವೆ ಹಾಕಬೇಕು. ಬಣವೆ ಹಾಕುವ ಪೂರ್ವದಲ್ಲಿ ಭತ್ತದ ಹುಲ್ಲಿನ ಹೊರೆ ಕಟ್ಟುವ ಮೊದಲು ಇಬ್ಬನಿ ಆರಲು ಬಿಡಬೇಕು.

ಈ ಕೇಂದ್ರದಲ್ಲಿ ಎರೆಹುಳುಗಳು ಕೆ.ಜಿಗೆ 500ರೂ, ಹಾಗೂ ಉತ್ತಮ ಗುಣಮಟ್ಟದ ಚಕ್ತಮುನಿ,ಛಾಯಾ, ಹಿಪ್ಪುನೇರಳೆ (ವಿ-5), ಇನ್ಸುಲಿನ್, ಗ್ಲಿರಿಸೀಡಿಯಾ ಮತ್ತು ನುಗ್ಗೆ(ಪಿ.ಕೆ.ಎಂ-1) ಸಸಿಗಳು ಮಾರಾಟಕ್ಕೆ ದೊರೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ರೈತರು ದೂರವಾಣಿ ಮೂಲಕ ಡಾ.ಪಿ,ಪ್ರಕಾಶ್, ಹಿರಿಯ ಕ್ಷೇತ್ರ ಅಧೀಕ್ಷಕರು/  ಎನ್.ನರೇಂದ್ರಬಾಬು, ಸಹ ಸಂಶೋಧಕರು, ದೂರವಾಣಿ ಸಂಖ್ಯೆ. 9449869914/08212591267/9343532154 ರವರನ್ನು ಸಂಪರ್ಕಿಸಬಹುದು. (ಎಸ್.ಎಚ್)

Leave a Reply

comments

Related Articles

error: