ಮೈಸೂರು

ವಿಶೇಷರನ್ನು ಭಕ್ತಿಯಿಂದ ನೋಡಿಕೊಳ್ಳಿ: ಉಮಾಶ್ರೀ

ವಿಶೇಷವಾಗಿ ಗುರುತಿಸಿಕೊಂಡಿರುವ ಮಕ್ಕಳನ್ನು ಪ್ರೀತಿ ಹಾಗೂ ಭಕ್ತಿಯಿಂದ ನೋಡಿಕೊಳ್ಳಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರಿ ಹೇಳಿದ್ದಾರೆ.

ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮೈತ್ರಿ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ವತಿಯಿಂದ ನಡೆದ ಮೈತ್ರಿ ಮಹೋತ್ಸವವನ್ನು ಸಚಿವೆ ಉಮಾಶ್ರೀ ಉದ್ಘಾಟಿಸಿದರು. ಬಳಿಕ  ವೆಂಕೋಬರಾವ್ ರಚಿಸಿದ ವಿಷಯ ಒಂದೇ ಒಕ್ಕಣೆ ಬೇರೆ ಕೃತಿಯನ್ನು ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಅವರು ವಿಶೇಷವಾಗಿ ಗುರುತಿಸಲ್ಪಟ್ಟ ಮಕ್ಕಳು ತಮ್ಮದೇ ಆದ ಕುಟುಂಬವನ್ನು ಸೃಷ್ಟಿಸಿಕೊಂಡು ಬಿಟ್ಟಿರುತ್ತಾರೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಸರ್ಕಾರ ಮಾಡುತ್ತದೆ. ಜನರು ಅವರನ್ನು ಪ್ರೀತಿ ಮತ್ತು ಭಕ್ತಿಯಿಂದ ನೋಡಿಕೊಳ್ಳಬೇಕು. ಇದರಲ್ಲಿ ಪೋಷಕರ ಪಾತ್ರ ತುಂಬಾ ಮಹತ್ವವಾದದ್ದು. ಸರ್ಕಾರ ಇವರ ಮೇಲೆ ವಿಶೇಷ ಕಾಳಜಿ ವಹಿಸಲಿದೆ ಎಂದರು.

ರಾಜ್ಯ ಸರ್ಕಾರ ಹಿರಿಯ ನಾಗರಿಕರಿಗೆ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳನ್ನು ಮೆಚ್ಚಿ ಕೇಂದ್ರ ಸರ್ಕಾರದಿಂದ ಮೂರು ಪ್ರಶಸ್ತಿಗಳು ಲಭಿಸಿದೆ. ಸರ್ಕಾರ ಹಿರಿಯ ನಾಗರಿಕರಿಗೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದೆ. ಕೇಂದ್ರ ಸರ್ಕಾರದಿಂದ ನೀಡಲಾಗುವ ನ್ಯಾಷನಲ್ ಅವಾರ್ಡ್ ಫಾರ್ ಡಿಪಾರ್ಟ್ ಮೆಂಟ್ ಪ್ರಶಸ್ತಿಯನ್ನೂ ಇಲಾಖೆ ಪಡೆದಿದೆ.  ನ್ಯಾಶನಲ್ ಇನ್ಸ್ ಟಿಟ್ಯೂಟ್ ಆಪ್ ಮೆಂಟಲ್ ಹೆಲ್ತ್ ಮತ್ತು ನ್ಯೂರೋ ಸೈನ್ಸ್ ನ ಸಂಶೋಧನಾ ಕೆಲಸಕ್ಕೂ ಪ್ರಶಸ್ತಿ ದೊರಕಿದೆ. ಕೇಂದ್ರದಿಂದ ಹಿರಿಯ ನಾಗರಿಕರಿಗೆ ನೀಡಲಾಗುವ ಪ್ರಶಸ್ತಿಗೆ ರಾಜ್ಯ ಸರ್ಕಾರ ಶಿಫಾರಸು ಮಾಡಿದ ಬೆಂಗಳೂರಿನ ಹಿರಿಯ ಶ್ರೀನಿವಾಸಯ್ಯ ಅವರಿಗೆ ಹಿರಿಯ ನಾಗರಿಕ ಪ್ರಶಸ್ತಿ ಲಭಿಸಿದೆ ಎಂದರು.

ಮೈತ್ರಿ ಚಾರಿಟೇಬಲ್ ಟ್ರಸ್ಟ್ ನೀಡುವ ಪ್ರಶಸ್ತಿಗೆ ಮೈತ್ರಿ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ನೆರವು ನೀಡುತ್ತಿರುವ ಮಾರ್ ಲ್ಯಾಬ್ ಸಂಸ್ಥೆಯ ಅಧ್ಯಕ್ಷ ಜೆ.ಎನ್.ನಾಯರ್ ಅವರಿಗೆ ದಿ ಅಂಬಾಸಿಡರ್ ಗುಡ್ ವಿಲ್ ಪ್ರಶಸ್ತಿಯನ್ನು ನೀಡಲಾಗಿದ್ದು ಅವರ ಬದಲು ನಗರದ ಮಾರ್ ಲ್ಯಾಬ್ಸ್ ಮುಖ್ಯಸ್ಥ  ಚನ್ನಕೇಶವ ಪ್ರಶಸ್ತಿ ಸ್ವೀಕರಿಸಿದರು. ಕೈಗಾರಿಕೋದ್ಯಮಿ ಮುರುಗೇಶ್ ಅವರಿಗೆ ಮೈತ್ರಿ ಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭ ಶಾಸಕ ವಾಸು, ಮೈತ್ರಿ ಟ್ರಸ್ಟ್ ನ ಮ್ಯಾನೆಂಜಿಂಗ್ ಟ್ರಸ್ಟಿ ಪೃಥ್ವಿ ಸುರೀಂದರ್,ಖಜಾಂಚಿ ಡಾ.ಸಿ.ಎಸ್.ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Tags

Related Articles

error: