ಮೈಸೂರು

ಪ್ರೊ. ಶೇಷಗಿರಿರಾವ್ ಅವರ ನಿಧನದಿಂದ ಕನ್ನಡ ಮತ್ತು ನಿಘಂಟು ಕ್ಷೇತ್ರಕ್ಕೆ ತುಂಬಾಲಾಗದ ನಷ್ಟ : ಜಯಕುಮಾರಿ ಬಿ.ಆರ್.

ಮೈಸೂರು,ಡಿ.21:- ಮಹಾಜನ ಪ್ರಥಮ ದರ್ಜೆ ಕಾಲೇಜಿನ ವಾರದ ಸಮಾವೇಶದಲ್ಲಿ ಪ್ರೊ. ಶೇಷಗಿರಿರಾವ್ ಅವರಿಗೆ ಇಂದು ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.

ಪ್ರಭಾರ ಪ್ರಾಂಶುಪಾಲರಾದ  ಜಯಕುಮಾರಿ ಬಿ.ಆರ್. ಅವರು ನುಡಿ ನಮನ ಸಲ್ಲಿಸಿ, ಪ್ರೊ. ಶೇಷಗಿರಿರಾವ್ ಅವರು ದೇಶ ಕಂಡ ಅಪ್ರತಿಮ ಸಾಹಿತಿಗಳು, ವಿಮರ್ಶಕರು ಹಾಗೂ ನಿಘಂಟುಗಾರರು ಎಂದು ಹೇಳಿದರು. ಸಾಹಿತ್ಯ ಲೋಕದಲ್ಲಿ ಎಲ್.ಎಸ್.ಎಸ್. ಎಂದೇ ಪ್ರಖ್ಯಾತರಾಗಿದ್ದ   ಶೇಷಗಿರಿರಾವ್ ಅವರು ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದರೂ ಕನ್ನಡ ಸಾರಸ್ಯತ್ವ ಲೋಕದಲ್ಲಿ ತಮ್ಮ ಛಾಪು ಮೂಡಿಸಿದರು ಎಂದು ಶ್ಲಾಘಿಸಿದರು. ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಬೆಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲೀಷ್ ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಕನ್ನಡ ಹಾಗೂ ಇಂಗ್ಲೀಷ್ ಎರಡು ಭಾಷೆಗಳಲ್ಲಿ ಅಪಾರ ಪ್ರಭುತ್ವವನ್ನು ಹೊಂದಿದ್ದ ಶೇಷಗಿರಿರಾವ್ ಅವರು ತಮ್ಮ ಸಾಹಿತ್ಯ ಕೃಷಿಯನ್ನು ಕನ್ನಡದಲ್ಲಿ ಕೈಗೊಂಡಿದ್ದರು. ‘ಕಪ್ಪು ಹುಡುಗಿ’ ಎಂಬ ಕಥೆಯ ಮೂಲಕ ಸಾಹಿತ್ಯ ಲೋಕಕ್ಕೆ ಕಾಲಿಟ್ಟ ಇವರು ತದನಂತರ ಕನ್ನಡ-ಕನ್ನಡ ನಿಘಂಟು, ಇಂಗ್ಲಿಷ್-ಕನ್ನಡ ನಿಘಂಟುಗಳನ್ನು ತರುವಲ್ಲಿ ಇವರ ಪಾತ್ರ, ಶ್ರದ್ಧೆ, ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ಕೊಂಡಾಡಿದರು. ಪ್ರೊ. ಶೇಷಗಿರಿರಾವ್ ಅವರು ತಮ್ಮ ಕೃತಿ ಇಂಗ್ಲೀಷ್ ಸಾಹಿತ್ಯ ಚರಿತ್ರೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿದ್ದರು. ಅಲ್ಲದೆ 74ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ ಎಂದು ಹೇಳಿದರು.

ಈ ಸಂದರ್ಭ    ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ. ಪ್ರಸಾದ್‍ಮೂರ್ತಿ,    ಕಾರ್ಯನಿರ್ವಹಣಾಧಿ ಕಾರಿಗಳಾದ ಡಾ. ಎಸ್.ಆರ್. ರಮೇಶ್, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಹೆಚ್.ಆರ್. ತಿಮ್ಮೇಗೌಡ, ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ   ಕೆ.ಆರ್. ಮಂಜುನಾಥ  ಮತ್ತಿತರರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: