ಕರ್ನಾಟಕಪ್ರಮುಖ ಸುದ್ದಿ

ಮಂಗಳೂರು ಗೋಲಿಬಾರ್ ಕುರಿತು ತನಿಖೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಮಂಗಳೂರು,ಡಿ.21-ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರು ಕಾನೂನು ಕೈಗೆತ್ತಿಕೊಂಡಿದ್ದರಿಂದ ಗೋಲಿಬಾರ್ ನಡೆಸಬೇಕಾಯಿತು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಮಂಗಳೂರಿನಲ್ಲಿ ಈ ಸಂಬಂಧ ಶನಿವಾರ ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಪರಿಸ್ಥಿತಿ ಕೈ ಮೀರಿತ್ತು. ಪ್ರತಿಭಟನಾಕಾರರು ಶಸ್ತ್ರಾಸ್ತ್ರ ದಾಸ್ತಾನು ಕೊಠಡಿಯ ಗೋಡೆ ಹೊಡೆದು ನುಗ್ಗಲು ಯತ್ನಿಸುತ್ತಿದ್ದರು. ಶಸ್ತ್ರಾಸ್ತ್ರ ದಾಸ್ತಾನು ಕೊಠಡಿ ನುಗ್ಗಿದ್ದರೆ ಅನಾಹುತವಾಗುತ್ತಿತ್ತು. ಹೀಗಾಗಿ ಅನಿವಾರ್ಯವಾಗಿ ಗೋಲಿಬಾರ್ ಮಾಡಬೇಕಾಯಿತು ಎಂದು ಹೇಳಿದ್ದಾರೆ.

ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರು ಕುಟುಂಬಗಳಿಗೆ ಕಾನೂನು ರೀತಿಯಲ್ಲಿ ಪರಿಶೀಲಿಸಿ ಪರಿಹಾರ ನೀಡಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ ಅವರು, ಗೋಲಿಬಾರ್ ಕುರಿತು ತನಿಖೆ ನಡೆಸಲಾಗುವುದು. ಆದರೆ, ಯಾವ ರೀತಿಯ ತನಿಖೆ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂದರು. ಪೊಲೀಸರ ವೈಫಲ್ಯದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಈ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದರು.

ಉದ್ವಿಗ್ನಗೊಂಡಿರುವ ಮಂಗಳೂರಿನಲ್ಲಿ ಸೋಮವಾರ ಬೆಳಿಗ್ಗೆ ಕರ್ಫ್ಯೂ ಹಿಂತೆಗೆಯಲಾಗುವುದು. ಇಂದು 3 ರಿಂದ 6ಗಂಟೆಯವರೆಗೆ ಕರ್ಫ್ಯೂ ಸಡಿಲಿಸಲಾಗುವುದು, 6ರ ನಂತರ ರಾತ್ರಿಯವರೆಗೆ ಮುಂದುವರಿಸಲಾಗುವುದು. ಭಾನುವಾರ ಬೆಳಿಗ್ಗೆಯಿಂದ ರಾತ್ರಿಯವರೆಗೆ ಕರ್ಫ್ಯೂ ಇರುವುದಿಲ್ಲ. ರಾತ್ರಿ ಮುಂದುವರಿಯಲಿದೆ. ರಾತ್ರಿಯಿಂದ ಸೋಮವಾರ ಬೆಳಿಗ್ಗೆಯಿಂದ ಕರ್ಫ್ಯೂ ಇರುವುದಿಲ್ಲ. ಆದರೆ, ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಹೇಳಿದರು.

ನಮ್ಮ ಸರ್ಕಾರ ದೃಷ್ಟಿಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲರೂ ಒಂದೇ, ಎಲ್ಲರ ಏಳಿಗೆಗಾಗಿ ಸರ್ಕಾರ ಶ್ರಮವಹಿಸುತ್ತಿದೆ. ಪ್ರಧಾನಿಯವರ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂಬ ಮಾತಿನಂತೆ ನಡೆಯುತ್ತಿದ್ದೇವೆ ಎಂದರು.

ಈ ಸಮಯದಲ್ಲಿ ಗೋಲಿಬಾರ್‌ನಲ್ಲಿ ಮೃತಪಟ್ಟ ಇಬ್ಬರು ಕುಟುಂಬದವರ ಜೊತೆ ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು.

ಸಿದ್ದರಾಮಯ್ಯ ಅವರ ಟ್ವೀಟ್ ಬಗ್ಗೆ ಕೇಳಿದ ಪ್ರತಿಕ್ರಿಯಿಸಿದ ಅವರು, ಪ್ರತಿಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು ಜವಾಬ್ದಾರಿಯಿಂದ ನಡೆದುಕೊಳ್ಳಲಿ ಎಂದರು.

ಈ ಸಂದರ್ಭದಲ್ಲಿ ಗೃಹಮಂತ್ರಿ ಬಸವರಾಜ ಬೊಮ್ಮಾಯಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ ಇತರರು ಹಾಜರಿದ್ದರು. (ಎಂ.ಎನ್)

Leave a Reply

comments

Related Articles

error: