ಕ್ರೀಡೆ

ರೋಹಿತ್, ರಾಹುಲ್, ಕೊಹ್ಲಿ ಅಬ್ಬರ: ವಿಂಡೀಸ್ ವಿರುದ್ಧ ಸರಣಿ ಜಯಿಸಿದ ಟೀಂ ಇಂಡಿಯಾ

ಕಟಕ್‌,ಡಿ.23-ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್‌ಗಳಿಂದ ಜಯಗಳಿಸಿ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ.

ಇಲ್ಲಿನ ಬಾರಬತಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲಿಗೆ ಫೀಲ್ಡಿಂಗ್ ಆಯ್ದುಕೊಂಡಿತು. ಬೌಲರ್‌ಗಳ ಸಾಧಾರಣ ಪ್ರದರ್ಶನದಿಂದಾಗಿ ವಿಂಡೀಸ್ 50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 315 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ಬಳಿಕ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ರೋಹಿತ್ ಶರ್ಮಾ (63), ಕೆ.ಎಲ್‌.ರಾಹುಲ್‌ (77), ನಾಯಕ ವಿರಾಟ್‌ ಕೊಹ್ಲಿ (85) ಹಾಗೂ ಇನಿಂಗ್ಸ್‌ ಅಂತ್ಯದಲ್ಲಿ ಆಲ್‌ರೌಂಡರ್‌ ರವೀಂದ್ರ ಜಡೇಜಾ (ಅಜೇಯ 39), ಶಾರ್ದುಲ್‌ ಠಾಕೂರ್‌ (ಅಜೇಯ 17) ಜವಾಬ್ದಾರಿಯುತ ಬ್ಯಾಟಿಂಗ್‌ ಮೂಲಕ ತಂಡವನ್ನು ಜಯದ ದಡ ಮುಟ್ಟಿಸಿದರು.

48.4 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ ಭಾರತ 316 ರನ್‌ ಗಳಿಸಿ ಜಯ ತನ್ನದಾಗಿಸಿಕೊಂಡಿತು. ಈ ಮೂಲಕ ಒಡಿಐನಲ್ಲಿ ವೆಸ್ಟ್ ಇಂಡೀಸ್‌ ವಿರುದ್ಧ ಸತತ 10ನೇ ಸರಣಿ ಗೆದ್ದು ಬೀಗಿತು.

ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಉತ್ತಮ ಆರಂಭವೊದಗಿಸಿಕೊಟ್ಟರು. 21.2 ಓವರ್ ಗಳಲ್ಲಿ ಇವರಿಬ್ಬರೂ ಸೇರಿ 122 ರನ್ ಗಳನ್ನು ಕಲೆಹಾಕಿದರು. ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡದ ನೂತನ ಆರಂಭಿಕ ಜೋಡಿ ರೋಹಿತ್‌ ಶರ್ಮಾ ಮತ್ತು ಕೆಎಲ್‌ ರಾಹುಲ್‌ 2019ರಲ್ಲಿ ಜೊತೆಯಾಗಿ ಒಟ್ಟು 1008 ರನ್‌ ಗಳಿಸಿದ್ದಾರೆ.

ಇವರಿಬ್ಬರ ಬಳಿಕ ವಿರಾಟ್ ಕೊಹ್ಲಿ ದಿಟ್ಟ ಹೋರಾಟ ಆರಂಭಿಸಿದರು. ಆದರೆ ಇವರಿಗೆ ಶ್ರೇಯಸ್ ಅಯ್ಯರ್ (7), ರಿಷಭ್ ಪಂತ್ (7), ಕೇದಾರ್ ಜಾಧವ್ (9) ಅವರಿಂದ ಬೆಂಬಲ ಸಿಗಲಿಲ್ಲ. ಆದರೂ ಕೊಹ್ಲಿ ಏಕಾಂಗಿ ಹೋರಾಟ ಮುಂದುವರೆಸಿದರು. ಕೊನೆಗೆ ಇವರಿಗೆ ಆಲ್ ರೌಂಡರ್ ರವೀಂದ್ರ ಜಡೇಜ ಸಾಥ್ ನೀಡಿದರು.

ಕೊಹ್ಲಿ 51 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಏಕದಿನ ಕ್ರಿಕೆಟ್ ನಲ್ಲಿ ಇದು 44ನೇ ಅರ್ಧಶತಕವಾಗಿತ್ತು. ಕೊಹ್ಲಿ ಮತ್ತು ಜಡೇಜ 6ನೇ ವಿಕೆಟ್ ಜೊತೆಯಾಟದಲ್ಲಿ 58 ರನ್ ಗಳನ್ನು ಸೇರಿಸಿದರು. ಶತಕದತ್ತ ಹೆಜ್ಜೆ ಇಟ್ಟಿದ್ದ ವಿರಾಟ್ ಕೊಹ್ಲಿ ಕೀಮೊ ಪೌಲ್‌ ಎಸೆತವನ್ನು ಆಫ್ ಡ್ರೈವ್ ಮಾಡುವಲ್ಲಿ ವಿಫಲರಾದರು. ಬ್ಯಾಟ್ ನ ಒಳ ಅಂಚು ತಗುಲಿ ಆಫ್ ಸ್ಟಂಪ್ ಅನ್ನು ಎಗರಿಸಿತು. ಕೊಹ್ಲಿ 81ಎಸೆತಗಲ್ಲಿ 9 ಬೌಂಡರಿಗಳ ನೆರವಿನಿಂದ 85 ರನ್ ಗಳಿಸಿದರು. ಕ್ರೀಸ್ ನಿಂದ ತೆರಳುತ್ತಿದ್ದ ಕೊಹ್ಲಿ ಬ್ಯಾಟಿಂಗ್ ಗೆ ಬರುತ್ತಿದ್ದ ಶಾರ್ದೂಲ್ ಠಾಕೂರ್ ಕಿವಿಯಲ್ಲಿ ಸಲಹೆ ಕೊಟ್ಟು ನಿರ್ಗಮಿಸಿದರು.

ಜಡೇಜ ಜೊತೆಗೂಡಿದ ಶಾರ್ದೂಲ್ ತಮ್ಮ ನಾಯಕನ ಮಾತನ್ನು ಈಡೇರಿಸಿದರು. ಎದುರಿಸಿದ ಮೊದಲ ಎಸೆತವನ್ನೇ ಬೌಂಡರಿಗೆ ಹೊಡೆದ ಶಾರ್ದೂಲ್ ಭರವಸೆ ಮೂಡಿಸಿದರು. ಮುರಿಯದ ಏಳನೇ ವಿಕೆಟ್ ಜೊತೆಯಾಟದಲ್ಲಿ 30 ರನ್ ಸೇರಿಸಿದ ಇಬ್ಬರೂ ತಂಡವನ್ನು ಗೆಲುವಿನ ದಡ ಸೇರಿಸಿದರು. ಗೆಲುವಿಗೆ ಬೇಕಿದ್ದ ಕೊನೆಯ ಒಂದು ರನ್ ನೋಬಾಲ್ ರೂಪದಲ್ಲಿ ಬಂದಿತು. ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ಶಾರ್ದುಲ್‌ ಠಾಕೂರ್‌, 6 ಎಸೆತಗಳಲ್ಲಿ 2 ಫೋರ್‌ ಮತ್ತು 1 ಸಿಕ್ಸರ್‌ ಒಳಗೊಂಡ ಅಜೇಯ 17 ರನ್‌ ಗಳಿಸಿದರು.

49ನೇ ಓವರ್ ನ ಐದನೇ ಎಸೆತವು ಒಂದು ನಾಟಕೀಯ ಘಟನೆಗೆ ಕಾರಣವಾಯಿತು. ಭಾರತಕ್ಕೆ ಗೆಲುವಿಗಾಗಿ ಕೇವಲ ಒಂದು ರನ್ ಬೇಕಿತ್ತು. ಕಿಮೊ ಪಾಲ್ ಎಸೆತವನ್ನು ಪುಷ್ ಮಾಡಿದ ಜಡೇಜ ಒಂದು ರನ್ ಗಾಗಿ ಓಡಿದರು. ಆದರೆ, ಫೀಲ್ಡರ್ ಮಾಡಿದ ನೇರ ಥ್ರೋ ಜಡೇಜ ಕ್ರೀಸ್ ಮುಟ್ಟುವ ಮುನ್ನ ಬೇಲ್ಸ್ ಹಾರಿಸಿದ್ದ ಮೇಲ್ನೋಟಕ್ಕೆ ಕಂಡಿತ್ತು. ಆದರೂ ಅಂಪೈರ್ ಟಿವಿ ಅಂಪೈರ್ ಗೆ ಮನವಿ ಸಲ್ಲಿಸಿದರು. ನಂತರದ ಕ್ಷಣದಲ್ಲಿಯೇ ಟಿವಿ ಅಂಪೈರ್ ರಾಡ್ ಟಕ್ಕರ್ ಅವರು ಅದನ್ನು ನೋಬಾಲ್ ಎಸೆತ ಎಂದು ಸೂಚನೆ ರವಾನಿಸಿದರು. ಫೀಲ್ಡ್ ಅಂಪೈರ್ ನಿತಿನ್ ಮೆನನ್ ನೋಬಾಲ್ ಘೋಷಿಸಿದರು. ಭಾರತ ತಂಡ ಗೆದ್ದಿತು.

ಇದಕ್ಕೂ ಮುನ್ನ ವೆಸ್ಟ್‌ ಇಂಡೀಸ್‌ ಪರ ಎವಿನ್‌ ಲೂಯಿಸ್‌ (21), ಶೇಯ್‌ ಹೋಪ್‌ (42), ಶಿಮ್ರಾನ್‌ ಹೆಟ್ಮಾಯೆರ್‌ (37), ರಾಸ್ಟನ್ ಚೇಸ್‌ (38) ಉಪಯುಕ್ತ ಕಾಣಿಕೆ ನೀಡಿದರು. ಆದರೆ, ತಂಡದ ಮೊತ್ತ 300 ರನ್‌ಗಳ ಗಡಿ ದಾಟುವಂತೆ ಮಾಡಿದ್ದು ಯುವ ಬ್ಯಾಟ್ಸ್‌ಮನ್‌ ನಿಕೊಲಾಸ್‌ ಪೂರನ್‌ ಮತ್ತು ಕ್ಯಾಪ್ಟನ್‌ ಕೈರೊನ್‌ ಪೊಲಾರ್ಡ್ಸ್‌. ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಪೂರನ್‌ 64 ಎಸೆತಗಳಲ್ಲಿ 10 ಫೋರ್‌ ಮತ್ತು 3 ಸಿಕ್ಸರ್‌ ಒಳಗೊಂಡ 89 ರನ್‌ಗಳನ್ನು ಚಚ್ಚಿದರು.

ನಾಯಕನ ಆಟವಾಡಿದ ಕೈರೊನ್‌ ಪೊಲಾರ್ಡ್‌ 51 ಎಸೆತಗಳಲ್ಲಿ 3 ಫೋರ್‌ ಮತ್ತು 7 ಭರ್ಜರಿಯ ಸಿಕ್ಸರ್‌ಗಳನ್ನು ಒಳಗೊಂಡ ಅಜೇಯ 74 ರನ್‌ಗಳನ್ನು ಬಾರಿಸಿದರು. ಭಾರತದ ಪರ ಪದಾರ್ಪಣೆಯ ಪಂದ್ಯವನ್ನಾಡಿದ ನವದೀಪ್‌ ಸೈನಿ ತಮ್ಮ 10 ಓವರ್‌ಗಳ ಸ್ಪೆಲ್‌ನಲ್ಲಿ 58 ರನ್‌ ನೀಡಿ 2 ವಿಕೆಟ್‌ ಪಡೆದರು.

ಚೇಸ್‌ ಮಾಸ್ಟರ್‌ ವಿರಾಟ್‌ ಕೊಹ್ಲಿ: ಕಳೆದ 10 ವರ್ಷಗಳಲ್ಲಿ ಭಾರತ ತಂಡ ಒಡಿಐನಲ್ಲಿ ಒಟ್ಟು 10 ಬಾರಿ 300ಕ್ಕೂ ಅಧಿಕ ರನ್‌ಗಳ ಗುರಿಯನ್ನು ಬೆನ್ನತ್ತಿ ಜಯ ದಕ್ಕಿಸಿಕೊಂಡಿದೆ. ಇದರಲ್ಲಿ ವಿರಾಟ್‌ ಕೊಹ್ಲಿ 7 ಶತಕ ಮತ್ತು ಏಕೈಕ ಅರ್ಧಶತಕ (ಭಾನುವಾರದ ಪಂದ್ಯದಲ್ಲಿ) ದಾಖಲಿಸಿದ್ದಾರೆ. ಈ ಮೂಲಕ ರನ್‌ ಚೇಸಿಂಗ್‌ನಲ್ಲಿ ತಾವು ಮಾಸ್ಟರ್‌ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: