ದೇಶಪ್ರಮುಖ ಸುದ್ದಿವಿದೇಶ

ಜನಾಂಗೀಯ ದಾಳಿ ಪ್ರಕರಣಗಳಲ್ಲಿ ತ್ವರಿತ ನ್ಯಾಯ: ಅಮೆರಿಕ ಭರವಸೆ

ವಾಷಿಂಗ್ಟನ್: ಭಾರತೀಯ ಮೂಲದವರ ಮೇಲೆ ಅಮೆರಿಕದಲ್ಲಿ ನಡೆಯುತ್ತಿರುವ ಜನಾಂಗೀಯ ದಾಳಿ ಸಂತ್ರಸ್ತರಿಗೆ ತ್ವರಿತ ಗತಿಯಲ್ಲಿ ನ್ಯಾಯ ದೊರೆಯಲಿದೆ ಎಂದು ಅಮೆರಿಕ ಭರವಸೆ ನೀಡಿದೆ.

ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಹಾಗೂ ಅಮೆರಿಕದ ಫೆಡರಲ್ ಸರ್ಕಾರಗಳು ದಾಳಿ ಕುರಿತಂತೆ ಸಂತಾಪ ವ್ಯಕ್ತಪಡಿಸಿವೆ. ಪ್ರಕರಣ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಸಿ ತ್ವರಿತವಾಗಿ ನ್ಯಾಯ ದೊರಕಿಸುವುದಾಗಿ ತಿಳಿಸಿವೆ ಎಂದು ಅಮೆರಿದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಅಮೆರಿಕದಲ್ಲಿರುವ ಭಾರತದ ರಾಯಭಾರಿ ನವತೇಜ್ ಸರ್ನಾ ಅವರು ಶ್ವೇತಭವನದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಭಾರತೀಯರ ಮೇಲೆ ನಡೆಯುತ್ತಿರುವ ದಾಳಿಯನ್ನು ನಿಯಂತ್ರಿಸುವ ಮೂಲಕ ಅಮೆರಿಕದಲ್ಲಿರುವ ಭಾರತೀಯರಿಗೆ ರಕ್ಷಣೆ ನೀಡುವಂತೆ ಕೋರಿದ್ದಾರೆ. ಹಾರ್ನಿಶ್ ಪಟೇಲ್, ದೀಪ್ ರಾಯ್ ಮೇಲಾದ ಮಾರಾಣಾಂತಿಕ ಹಲ್ಲೆ ಕುರಿತು ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಚರ್ಚೆ ವೇಳೆ ತಮ್ಮ ಕಳವಳ ವ್ಯಕ್ತಪಡಿಸಿವೆ. ಈ ಸಂಬಂಧ ಭಾರತೀಯ ರಾಯಭಾರ ಕಚೇರಿ ಅಮೆರಿಕದ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಸರ್ನಾ ತಿಳಿಸಿದ್ದಾರೆ.

2 ವಾರದಲ್ಲಿ 5ನೇ ದಾಳಿ: ನಿನ್ನೆ ಮತ್ತೆ ದೀಪ್ ರಾಯ್ ಎಂಬ ಸಿಖ್ ವ್ಯಕ್ತಿ ಮೇಲೆ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದ. ದಾಳಿ ವೇಳೆ ನಿನ್ನ ದೇಶಕ್ಕೆ ನೀನು ಹೋಗು ಎಂದು ಕೂಗಿದ್ದ. ಅದೃಷ್ಟವಶಾತ್ ದೀಪ್ ರಾಯ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಆಘಾತಕಾರಿ ಅಂಶವೆಂದರೆ ಕಳೆದ 2 ವಾರದಲ್ಲಿ ಭಾರತೀಯರ ಮೇಲೆ ನಡೆದ 5ನೇ ಜನಾಂಗೀಯ ದ್ವೇಷದ ದಾಳಿ ಇದು.

ಇದಕ್ಕೂ ಮೊದಲು ಹೈದರಾಬಾದ್ ಮೂಲದ ಇಂಜಿನಿಯರ್ ಶ್ರೀನಿವಾಸ್ ಕುಚಿಬೋಟ್ಲಾ ಅವರನ್ನು ಹತ್ಯೆ ಮಾಡಲಾಗಿತ್ತು. ನಂತರ ಉದ್ಯಮಿ ಹಾರ್ನಿಶ್ ಪಟೇಲ್ ಅವರನ್ನು ಅಮೆರಿಕದಲ್ಲಿ ಹತ್ಯೆ ಮಾಡಲಾಗಿತ್ತು. ಇದಲ್ಲದೆ, ಭಾರತೀಯರೆಂಬ ಕಾರಣಕ್ಕೆ ನಿಂದಿಸಿದ ಕೆಲ ಪ್ರಕರಣಗಳೂ ಕೂಡ ವರದಿಯಾಗಿತ್ತು. ನಿನ್ನೆ ನಡೆದ ದಾಳಿ ಅಮೆರಿಕದಲ್ಲಿರುವ ಭಾರತೀಯರ ಭೀತಿಯನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ಎಫ್’ಬಿಐ ತನಿಖೆ : ಭಾರತೀಯರ ಮೇಲಿನ ದಾಳಿ ಪ್ರಕರಣಗಳನ್ನು ಈಗಾಗಲೇ ಕೆಂಟ್ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದ್ದು, ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಎಫ್’ಬಿಐ ಕೂಡ ಕೈಜೋಡಿಸಿದೆ. ಎಫ್’ಬಿಐ ಉನ್ನತ ಮಟ್ಟದ ತನಿಖಾ ಸಂಸ್ಥೆಯಾಗಿದ್ದು, ಸಂಭವನೀಯ ದ್ವೇಷಪೂರಿತ ದಾಳಿಗಳಿಗೆ ಕಾರಣವಾಗುವ ಅಪರಾಧಗಳ ವಿರುದ್ಧ ಎಫ್’ಬಿಐ ಜಾಗೃತವಾಗಿದೆ. ತನಿಖೆಯನ್ನು ಪ್ರಗತಿಯಲ್ಲಿದೆ ಎಂದು ಎಫ್’ಬಿಐ ಸಿಯಾಟಲ್ ವಕ್ತಾರ ಐನ್ ಡೀಟ್ರಿಚ್ ಹೇಳಿದ್ದಾರೆ.

Leave a Reply

comments

Related Articles

error: