ಪ್ರಮುಖ ಸುದ್ದಿಮೈಸೂರು

ಹರಿದ್ವಾರದಲ್ಲಿ ನಿರ್ಮಾಣವಾಗಿರುವ ರೋಪ್‌ವೇ ಗಳಿಗಿಂತ ಆಧುನಿಕ ಮಾದರಿಯಲ್ಲಿ ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ : ಸಚಿವ ವಿ.ಸೋಮಣ್ಣ

ಮೈಸೂರು/ಬೆಂಗಳೂರು,ಡಿ.24:-  ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ನೆಲೆಸಿರುವ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹರಿದ್ವಾರ ಮಾದರಿಯಲ್ಲಿ ರೋಪ್‌ವೇ ನಿರ್ಮಾಣ ಮಾಡಲು ಸರಕಾರ ಬಯಸಿದ್ದು, ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ನಿನ್ನೆ ವಿಕಾಸ ಸೌಧದ  ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.  ಬೆಟ್ಟದ ರಸ್ತೆಯಲ್ಲಿ ಸಂಚಾರದ ಒತ್ತಡ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ನೆರವಿನೊಂದಿಗೆ ರೋಪ್‌ವೇ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು, 20 ಕೋಟಿ ರೂ. ವೆಚ್ಚವನ್ನು ಅಂದಾಜಿಸಲಾಗಿದೆ  ಎಂದಿದ್ದಾರೆ.

ಚಾಮುಂಡಿ ಬೆಟ್ಟಕ್ಕೆ ನಿರ್ಮಿಸಲಿರುವ ರೋಪ್‌ವೇ ಯೋಜನೆಯು ಪಳನಿ ಹಾಗೂ ಹರಿದ್ವಾರದಲ್ಲಿ ನಿರ್ಮಾಣವಾಗಿರುವ ರೋಪ್‌ವೇ ಗಳಿಗಿಂತ ಆಧುನಿಕ ಮಾದರಿಯಲ್ಲಿರಲಿದ್ದು  ಪರಿಸರಕ್ಕೆ ಹಾನಿಯಾಗದಂತೆ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಇದರಿಂದ ಭಕ್ತರಿಗೆ ಅನುಕೂಲವಾಗುವ  ಜತೆಗೆ ಮಳೆಗಾಲದಲ್ಲಿ ರಸ್ತೆ ಕುಸಿತದಿಂದ ಸಮಸ್ಯೆ ಎದುರಾಗುವುದೂ ನಿವಾರಣೆಯಾಗಲಿದೆ. ಎಂದಿದ್ದಾರೆ.  ಬೆಟ್ಟದಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಗಾಗಿ ಕಾಮಗಾರಿಗಳು ಪ್ರಗತಿಯಲ್ಲಿದ್ದು,  ಬೆಟ್ಟದ ಸ್ವಚ್ಛತೆಗೆ ಒತ್ತು ನೀಡಿ ಅಂಗಡಿ, ಮುಂಗಟ್ಟುಗಳನ್ನು ಸಂಪೂರ್ಣ ತೆರವುಗೊಳಿಸಲಾಗುತ್ತಿದೆ.  ಸ್ಥಳೀಯ ಕಾರು ನಿಲ್ದಾಣ ಸಮೀಪದಲ್ಲಿ 180 ಮಳಿಗೆಗಳನ್ನು ನಿರ್ಮಿಸಿ ಹಂಚಲು ನಿರ್ಧರಿಸಲಾಗಿದೆ. ಈ ಉದ್ದೇಶಕ್ಕೆ 5 ರಿಂದ 6 ಕೋಟಿ ರೂ. ವೆಚ್ಚವನ್ನು ಅಂದಾಜು ಮಾಡಲಾಗಿದೆ  ಎಂದು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸೊರಗುತ್ತಿರುವ ರೇಷ್ಮೆ ಬೆಳೆಗೆ ಉತ್ತೇಜನ ನೀಡುವ ಉದ್ದೇಶದಿಂದ ಇಲಾಖೆಗೆ ಕಾಯಕಲ್ಪ ನೀಡಲಾಗುತ್ತಿದೆ.  ಕೆಎಸ್‌ಐಸಿ, ಕೆಎಚ್‌ಡಿಸಿ ಒಳಗೊಂಡು ಇಲಾಖೆ ವ್ಯಾಪ್ತಿಯ ನಿಗಮಗಳನ್ನು ವಿಲೀನ ಮಾಡಲು ನಿರ್ಧರಿಸಲಾಗಿದೆ  ಎಂದು ತಿಳಿಸಿದ್ದಾರೆ.

ಒಂದೊಂದು ಸಂಸ್ಥೆಗೂ ಐಎಎಸ್‌ ಅಧಿಕಾರಿಗಳು ಮುಖ್ಯಸ್ಥರಾಗಿದ್ದು, ಅನಗತ್ಯ ವೆಚ್ಚದಿಂದ ಈ ಸಂಸ್ಥೆಗಳು ಸೊರಗುತ್ತಿದೆ. ಇದನ್ನು ತಪ್ಪಿಸಿ ಇಲಾಖೆಯ ನೇರ ಆಡಳಿತಕ್ಕೆ ತರುವ ಪ್ರಸ್ತಾವನೆ ಸಿದ್ಧವಾಗುತ್ತಿದೆ. ಜತೆಗೆ, ಕೆಎಸ್‌ಐಸಿ ರೇಷ್ಮೆ ಸೀರೆಗಳಿಗೆ ಉತ್ತಮ ಬೇಡಿಕೆ ಇದ್ದು, ಮಧ್ಯಮ ವರ್ಗದ ಕೈಗೆಟಕುವ ದರದಲ್ಲೂ ರೇಷ್ಮೆ ಸೀರೆಗಳ ತಯಾರಿಕೆ ಮತ್ತು ಮಾರಾಟಕ್ಕೆ ಒತ್ತು ನೀಡಲು ಉದ್ದೇಶಿಸಲಾಗಿದೆ  ಎಂದು ಹೇಳಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: