ದೇಶಪ್ರಮುಖ ಸುದ್ದಿ

ಪೌರತ್ವ ಕಿಚ್ಚು, ಹಿಜಾಬ್ ಧಾರಣೆ ಆರೋಪ: ರಾಷ್ಟ್ರಪತಿಯಿಂದ ಚಿನ್ನದ ಪದಕ ಸ್ವೀಕರಿಸಲು ವಿದ್ಯಾರ್ಥಿನಿಗೆ ನಿರಾಕರಣೆ; ಪದಕ ತಿರಸ್ಕರಿಸಿದ ರಬೀಹಾ

ಚೆನ್ನೈ,ಡಿ.24-ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಚಿನ್ನದ ಪದಕ ಸ್ವೀಕರಿಸಲು ಕೊನೆ ಕ್ಷಣದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯನ್ನು ತಡೆದ ಅಮಾನವೀಯ ಘಟನೆ ಪುದುಚೇರಿ ವಿಶ್ವವಿದ್ಯಾಲಯದಲ್ಲಿ ನಡೆದಿದೆ.

ಪುದುಚೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ರಾಮನಾಥ್ ಕೋವಿಂದ್ ಅವರು ಚಿನ್ನದ ಪದಕ ಹಾಗೂ ಪ್ರಮಾಣಪತ್ರ ನೀಡುವಾಗ ಚಿನ್ನದ ಪದಕ ವಿಜೇತೆ ರಬೀಹಾ ಅಬ್ದುರೆಹಿಮ್ ಅವರನ್ನು ಒಳಗೆ ಬಿಟ್ಟಿಲ್ಲ.

ರಾಷ್ಟ್ರೀಯ ಪೌರತ್ವ ಮಸೂದೆ ಕಾಯ್ದೆ ವಿರೋಧಿಸಿ ಧ್ವನಿ ಎತ್ತಿದ ಹಿನ್ನೆಲೆ ಹಾಗೂ ಹಿಜಾಬ್ ಧರಿಸಿದ್ದರು ಎಂಬ ಕಾರಣಕ್ಕೆ ಸೂಪರಿಂಡೆಂಟ್ ಪೊಲೀಸ್ (ಎಸ್ಪಿ) ವಿದ್ಯಾರ್ಥಿಯನ್ನು ಘಟಿಕೋತ್ಸವ ಸಮಾರಂಭದಿಂದ ಹೊರಗೆ ಕಳುಹಿಸಿದ್ದಾರೆ.

ಘಟನೆ ಬಗ್ಗೆ ವಿವರಿಸಿರುವ ಸಂವಹನ ಮಾಧ್ಯಮ ಸ್ನಾತಕೋತ್ತರ ವಿಭಾಗದಲ್ಲಿ ಟಾಪರ್ ಆಗಿರುವ ರಬೀಹಾ, ಜವಹರಲಾಲ್ ನೆಹರೂ ಸಭಾಂಗಣದಲ್ಲಿ ಏರ್ಪಾಡಾಗಿದ್ದ ಘಟಿಕೋತ್ಸವ ಸಮಾರಂಭದಲ್ಲಿ ಇತರ 9 ಮಂದಿ ವಿದ್ಯಾರ್ಥಿಗಳ ಜೊತೆ ಚಿನ್ನದ ಪದಕ ಸ್ವೀಕರಿಸಲು ನಾನೂ ಕುಳಿತಿದ್ದೆ. ಆಗ ಅಲ್ಲಿಗೆ ಬಂದ ಮಹಿಳಾ ಹಿರಿಯ ಎಸ್ಪಿ ತಮ್ಮ ಜೊತೆ ಬನ್ನಿ ಎಂದು ಹೊರಗೆ ಕರೆದುಕೊಂಡು ಹೋದರು. ಹೊರಗೆ ಹೋದಾಗ ಯಾಕೆ ಹಿಜಾಬ್ ಧರಿಸಿದ್ದೀರಿ ಎಂದು ಕೇಳಿದರು. ನಾನು ಹೀಗೆ ಧರಿಸಿಕೊಳ್ಳುತ್ತೇನೆ ಎಂದಾಗ ಕಾರ್ಯಕ್ರಮದಲ್ಲಿ ಭಾಗವಹಿಸಬೇಡಿ, ಹೊರಗೆ ಕುಳಿತುಕೊಳ್ಳಬೇಡಿ ಎಂದರು ಎಂದು ಹೇಳುತ್ತಾರೆ.

ಎಸ್ಪಿ ಅಕಾಂಕ್ಷ ಯಾದವ್ ಕೊಠಡಿಗೆ ಹೋಗಿ ಬಾಗಿಲು ಹಾಕಿದವರು ನಂತರ ಹೊರಗೆ ಬರಲಿಲ್ಲ. ಕಾರ್ಯಕ್ರಮ ಆರಂಭವಾದಾಗ ಹೊರಗೆ ನಿಂತಿದ್ದ ಪೊಲೀಸರಲ್ಲಿ ನನ್ನನ್ನು ಯಾಕೆ ಬಿಡುತ್ತಿಲ್ಲ ಎಂದು ಕೇಳಿದೆ. ಆದರೆ ಅವರು ಏನೂ ಹೇಳಲಿಲ್ಲ. ನಂತರ ಪೊಲೀಸ್ ಅಧಿಕಾರಿಗಳೂ ನನ್ನ ಬಳಿ ಬರಲಿಲ್ಲ. ತುಂಬಿದ ಸಭಾಂಗಣದಲ್ಲಿ ಎಲ್ಲರ ಮುಂದೆ ಚಿನ್ನದ ಪದಕ ಪಡೆಯುವುದು ನನ್ನ ಕನಸಾಗಿತ್ತು. ಆದರೆ ಅವರು ನನ್ನ ಮೇಲೆ ತಾರತಮ್ಯ ತೋರಿ ನನ್ನನ್ನು ಘಟಿಕೋತ್ಸವದಲ್ಲಿ ಭಾಗವಹಿಸದಂತೆ ಮಾಡಿದ್ದಾರೆ. ನನಗೆ ಇನ್ನು ಆ ಚಿನ್ನದ ಪದಕ ಬೇಡ ಎಂದು ತಿರಸ್ಕರಿಸಿದ್ದಾರೆ ರಬೀಹಾ.

ನಾನು ಒಂದು ಗಂಟೆಗೂ ಹೆಚ್ಚು ಸಮಯ ಘಟಿಕೋತ್ಸವ ಸಭಾಂಗಣದಿಂದ ಹೊರಗೆ ಕಾಯುತ್ತಿದ್ದೆ ಎಂದು ಹೇಳಿದ್ದಾರೆ. ಸಭಾಂಗಣದ ಹೊರಗಿನಂದಲೇ ರಾಷ್ಟ್ರಪತಿಯವರ ಭಾಷಣವನ್ನು ಕೇಳಿದೆ.

ರಾಮನಾಥ್ ಕೋವಿಂದ್ ಅವರು ಘಟಿಕೋತ್ಸವ ಸಮಾರಂಭದಿಂದ ನಿರ್ಗಮಿಸಿದ ಬಳಿಕ, ರಬೀಹಾ ಅವರನ್ನು ಸಭಾಂಗಣದ ಒಳಗೆ ಬಿಡಲಾಯಿತು. ಪ್ರಮಾಣಪತ್ರವನ್ನು ಸ್ವೀಕರಿಸಿದ ರಬೀಹಾ, ಪ್ರತಿಭಟನೆಯ ಸಂಕೇತವಾಗಿ ಚಿನ್ನದ ಪದಕವನ್ನು ತಿರಸ್ಕರಿಸಿದರು.ಇದು ನನಗೆ ಮತ್ತು ನನ್ನ ಸಮುದಾಯಕ್ಕೆ ಆದ ದೊಡ್ಡ ಅವಮಾನ. ಚಿನ್ನದ ಪದಕವನ್ನು ತಿರಸ್ಕರಿಸಿದ ನನ್ನ ನಡೆ ಕೇಂದ್ರ ಸರ್ಕಾರಕ್ಕೆ ಒಂದು ಸಂದೇಶ ನೀಡುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಸಂಕೇತವಾಗಿ ನಾನು ಚಿನ್ನದ ಪದಕವನ್ನು ತಿರಸ್ಕಾರ ಮಾಡಿದ್ದೇನೆ. ಇದು ನನಗೆ ಮತ್ತು ಸದ್ಯ ಪ್ರತಿಭಟನೆ ನಡೆಸುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಆದ ಅವಮಾನ. ಇದು ನಾನು ಪ್ರತಿಭಟನೆ ಮಾಡುತ್ತಿರುವ ಮಾರ್ಗವಾಗಿದೆ ಮತ್ತು ಭಾರತದ ಎಲ್ಲಾ ವಿದ್ಯಾರ್ಥಿಗಳ ಒಗ್ಗಟ್ಟಾಗಿದೆ. ಪ್ರತಿಯೊಬ್ಬ ಹುಡುಗ, ಹುಡುಗಿ, ಮುಸ್ಲಿಮ್, ಹಿಂದು ಮತ್ತು ಪ್ರತಿಯೊಬ್ಬ ಭಾರತೀಯನೂ ಕೂಡ ಪೌರತ್ವ ಮಸೂದೆ ಕಾಯ್ದೆ ಮತ್ತು ಪೌರತ್ವ ನೋಂದಣಿ ಕಾಯ್ದೆ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ ಎಂದು ರಬೀಹಾ ತಿಳಿಸಿದ್ದಾರೆ.

ರಾಮನಾಥ್ ಕೋವಿಂದ್ ಅವರಿಂದ ಚಿನ್ನದ ಪದಕ ಸ್ವೀಕರಿಸಲು 10 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಇವರಲ್ಲಿ ಸೇರಿದ್ದ ಏಕೈಕ ಮುಸ್ಲಿಂ ವಿದ್ಯಾರ್ಥಿನಿ ರಬೀಹಾ ಅಬ್ದುರೆಹಿಮ್. ಆದರೆ ಕೊನೆ ಕ್ಷಣದಲ್ಲಿ

189 ಮಂದಿ ಚಿನ್ನದ ಪದಕ ವಿಜೇತರ ಪೈಕಿ ರಾಷ್ಟ್ರಪತಿಗಳಿಂದ ಪದಕ ಸ್ವೀಕರಿಸಲು ರಬೀಹಾ ಸೇರಿದಂತೆ ಕೇವಲ 10 ಮಂದಿಯನ್ನು ಆಯ್ಕೆ ಮಾಡಲಾಗಿತ್ತು.

ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಭಾರೀ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿ ಈ ರೀತಿಯ ಘಟನೆ ನಡೆದಿರುವುದು ವಿದ್ಯಾರ್ಥಿ ಸಮುದಾಯವನ್ನು ಆಕ್ರೋಶಕ್ಕೀಡು ಮಾಡಿದೆ. (ಎಂ.ಎನ್)

 

Leave a Reply

comments

Related Articles

error: