ನಮ್ಮೂರುಮೈಸೂರು

ಬಾಲಕನ ಸಾವಿನ ಪ್ರಕರಣ: ವೈದ್ಯರ ವಿರುದ್ಧ ಭುಗಿಲೆದ್ದ ಆಕ್ರೋಶ

ಶಸ್ತ್ರ ಚಿಕಿತ್ಸೆ ವೇಳೆ ಬಾಲಕನಿಗೆ ಹೆಚ್ಚಿನ ಪ್ರಮಾಣದಲ್ಲಿ ಅನಸ್ತೇಶಿಯಾ ನೀಡಿದ್ದರಿಂದ ಕೋಮಾ ಸ್ಥಿತಿಗೆ ತಲುಪಿದ್ದ ಬಾಲಕ ಸಾವನ್ನಪ್ಪಿರುವ ಪ್ರಕರಣದ ಹಿನ್ನಲೆಯಲ್ಲಿ ಮೈಸೂರಿನ ಕಾವೇರಿ ಖಾಸಗಿ ಆಸ್ಪತ್ರೆ ವೈದ್ಯರ ವಿರುದ್ಧ ಬಾಲಕನ ಪೋಷಕರು, ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದ ಮುಖೇಶ್ ಮತ್ತು ದಿವ್ಯಾ ಎಂಬ ದಂಪತಿಯ ಪುತ್ರ ಭೂಪೆನ್ (6) ಸಾವನ್ನಪ್ಪಿರುವ ಬಾಲಕ.

ಬಾಲಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ರೊಚ್ಚಿಗೆದ್ದ ಸಾರ್ವಜನಿಕರು ಆಸ್ಪತ್ರೆಯ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ನಡೆಸಿದ್ದಾರೆ. ಆಸ್ಪತ್ರೆ ಬಳಿ ನೂರಾರು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಲಾಗಿದೆ ಎಂದು ತಿಳಿದು ಬಂದಿದೆ.

ತುರ್ತು ನಿಗಾ ಘಟಕದಲ್ಲಿರಿಸಿ ಬಾಲಕನಿಗೆ ಚಿಕಿತ್ಸೆ ನೀಡುತ್ತಿದ್ದರೂ, ಬಾಲಕನ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಲು ಆಸ್ಪತ್ರೆಯ ವೈದ್ಯರು ನಿರಾಕರಿಸಿದ್ದರು.ಆಲನಹಳ್ಳಿ ಠಾಣೆ ಪೊಲೀಸರು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಗುವಿನ ಸಾವಿಗೆ ಕಾರಣವಾಗಿರುವ ವೈದ್ಯರ ಬಂಧನಕ್ಕೆ ಪಟ್ಟು ಹಿಡಿದಿದ್ದಾರೆ.

ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಾವೇರಿ ಆಸ್ಪತ್ರೆಗೆ ಕೆ.ಆರ್. ನಗರ ಕ್ಷೇತ್ರದ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಆಗಮಿಸಿ ಮೃತ ಬಾಲಕನ ಪೋಷಕರ ಜೊತೆ ಚರ್ಚಿಸುತ್ತಿದ್ದಾರೆ.

Leave a Reply

comments

Related Articles

error: