
ಪ್ರಮುಖ ಸುದ್ದಿಮೈಸೂರು
ಸಿಎಎ, ಎನ್ ಆರ್ ಸಿ ಪ್ರತಿಭಟನೆಯ ಎಫೆಕ್ಟ್ ; ಪ್ರವಾಸಿಗರಿಲ್ಲದೆ ಬಣಗುಡುತ್ತಿದೆ ಮೈಸೂರು; ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ
ಮೈಸೂರು,ಡಿ.26:- ಸಾಂಸ್ಕೃತಿಕ ನಗರಿ ಮೈಸೂರು ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಇದು ಮಲ್ಲಿಗೆಯ ನಗರಿ ಎಂತಲೂ ಗುರುತಿಸಿಕೊಂಡಿದೆ. ಇಲ್ಲಿ ಪ್ರೇಕ್ಷಣಿಯ ಸ್ಥಳಗಳು, ಪ್ರಾಣಿ ಸಂಗ್ರಹಾಲಯ, ಅರಮನೆ ಸೇರಿದಂತೆ ಅನೇಕ ಪ್ರವಾಸಿ ತಾಣಗಳಿದ್ದು, ಇವುಗಳನ್ನೆಲ್ಲ ಕಣ್ತುಂಬಿಕೊಳ್ಳಲು ಡಿಸೆಂಬರ್ ನಲ್ಲಿ ರಾಜ್ಯ ಹೊರರಾಜ್ಯ, ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಈ ಬಾರಿ ಪ್ರವಾಸೋದ್ಯಮ ಕಳೆಗುಂದಿದೆ.
ದೇಶದಲ್ಲಿ ಎನ್ಆರ್ಸಿ ಹಾಗೂ ಸಿಎಎ ವಿರೋಧಿ ಪ್ರತಿಭಟನೆಗಳು ಆರಂಭವಾದ ಬಳಿಕ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ ಎನ್ನಲಾಗುತ್ತಿದೆ. ರಾಜ್ಯದಲ್ಲೂ ಸಿಎಎ ಮತ್ತು ಎನ್ಆರ್ಸಿ ವಿರೋಧಿ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಪ್ರವಾಸಿ ತಾಣ ಮೈಸೂರಿಗೆ ಭೇಟಿ ನೀಡಲು ಪ್ರವಾಸಿಗರೂ ಕೂಡ ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ಪ್ರತಿಭಟನೆಗಳಿಂದ ಶೇ 20ರಿಂದ 40ರಷ್ಟು ಪ್ರವಾಸಿಗರು ಭೇಟಿ ನೀಡಿಲ್ಲ ಎನ್ನುತ್ತಿದೆ ಮೈಸೂರು ಹೋಟೆಲ್ ಅಸೋಸಿಯೇಷನ್.
ಈಗ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯ ಪ್ರಯುಕ್ತ ಹಲವು ಶಾಲೆಗಳಿಗೆ ರಜೆ ಇರುತ್ತಿದ್ದು, ಡಿಸೆಂಬರ್ ನಲ್ಲಿ ಪ್ರತಿ ವರ್ಷ ಹೊಸವರ್ಷಕ್ಕೆ ಹತ್ತು ದಿನಗಳ ಮುಂಚೆಯೆ ಹೋಟೆಲ್ ರೆಸಾರ್ಟ್ ಗಳು ತುಂಬಿ ತುಳುಕುತ್ತಿದ್ದವು. ಆದರೆ ಈ ಬಾರಿ ಹೊಸ ವರ್ಷಕ್ಕೆ ನಾಲ್ಕೇ ದಿನಗಳು ಬಾಕಿ ಇದ್ದು ರೆಸಾರ್ಟ್ಗಳು, ಹೋಟೆಲ್ಗಳು ಪ್ರವಾಸಿಗರಿಲ್ಲದೆ ಬಣಗುಡುತ್ತಿವೆ. ಬುಕ್ಕಿಂಗ್ ಮಾಡಿರುವ ಹೋಟೆಲ್ಗಳಲ್ಲೂ ಪ್ರವಾಸಿಗರು ಬುಕ್ಕಿಂಗ್ ಕ್ಯಾನ್ಸಲ್ ಮಾಡಿಸುತ್ತಿದ್ದಾರೆ ಎನ್ನಲಾಗಿದೆ. ಪ್ರತಿಭಟನೆಗಳಾಗಿ ಗಲಾಟೆಗಳಾದರೆ ತಾವೆಲ್ಲಿ ಅರ್ಧದಲ್ಲಿ ಸಿಲುಕಿ ಪಡಬಾರದ ಪಾಡು ಪಡಬೇಕೇನೋ ಎಂಬ ಭಯದಿಂದ ಪ್ರವಾಸಿಗರು ಮೈಸೂರು ಪ್ರವಾಸವನ್ನೇ ರದ್ದು ಮಾಡುತ್ತಿದ್ದಾರೆ. ಇದರಿಂದ ಮೈಸೂರಿಗೆ ಬರುವ ಪ್ರವಾಸಿಗರಲ್ಲಿ ಶೇ 40%ರಷ್ಟು ಕಡಿಮೆಯಾಗಿದೆ ಎಂದು ಕಳವಳ ವ್ಯಕ್ತಪಡಿಸುತ್ತಾರೆ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ನಾರಾಯಣ್ ಗೌಡ.
ಡಿಸೆಂಬರ್ ಬಂತೆಂದರೆ ಸಾಕು ಅಯ್ಯಪ್ಪ ಮಾಲಾಧಾರಿಗಳು, ಪ್ರವಾಸಿಗರಿಂದ ಚಾಮುಂಡಿ ಬೆಟ್ಟ ಗಿಜಿಗುಡುತ್ತಿತ್ತು. ಆದರೆ ಈ ವರ್ಷದ ಡಿಸೆಂಬರ್ ನಲ್ಲಿ ಮಾತ್ರ ಬೆರಳೆಣಿಕೆಯ ಪ್ರವಾಸಿಗರು ಕಾಣಿಸಿಕೊಂಡಿದ್ದಾರೆ. ದೇಶಾದ್ಯಾಂತ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆಗಳ ಕಾವು ಪ್ರವಾಸೋದ್ಯಮದ ಮೇಲೆ ತಟ್ಟಿದೆ. ಅದಕ್ಕೆ ಸ್ಪಷ್ಟ ಉದಾಹರಣೆ ಮೈಸೂರಿನ ಹೋಟೆಲ್ ಬುಕ್ಕಿಂಗ್ ಡಿಟೈಲ್ಸ್. ಸಹಜವಾಗಿ ಡಿಸೆಂಬರ್ನಲ್ಲಿ ಸುತ್ತಮುತ್ತಲಿನ ರಾಜ್ಯಗಳು ಹಾಗೂ ವಿದೇಶಗಳಿಂದ ಮೈಸೂರಿಗೆ ಪ್ರವಾಸಿಗರು ಬರುತ್ತಾರೆ. ಆದರೆ ಈ ಬಾರಿ ಬಂದಿದ್ದ ಪ್ರವಾಸಿಗರು ತರಾತುರಿಯಲ್ಲಿ ವಾಪಸ್ಸಾಗುತ್ತಿರುವುದು ಕಂಡು ಬರುತ್ತಿದೆ. ಇದಕ್ಕೆಲ್ಲಾ ಎನ್ಆರ್ಸಿ ಹಾಗೂ ಸಿಎಎ ಕಾಯ್ದೆಯ ಪ್ರತಿಭಟನೆಗಳು ಕಾರಣ ಎನ್ನಲಾಗುತ್ತಿದೆ.
ಉತ್ತರ ಭಾರತದಲ್ಲಿ ಇದ್ದ ಪ್ರತಿಭಟನೆಯ ಕಾವು ದಕ್ಷಿಣ ಭಾರತಕ್ಕೂ ಕಾಲಿಟ್ಟಿದೆ. ಅದರಲ್ಲೂ ಮಂಗಳೂರಿನಲ್ಲಿ ನಡೆದ ಗಲಭೆಯಿಂದ ಇಬ್ಬರ ಸಾವು ದೇಶಾದ್ಯಾಂತ ಸುದ್ದಿಯಾಗಿದ್ದು, ಇಂತಹ ಗಲಾಟೆಗಳು ಮೈಸೂರಿನಲ್ಲಿಯೂ ನಡೆಯಬಹುದೆಂದು ಪ್ರವಾಸಿಗರು ಮೈಸೂರಿನ ಪ್ರವಾಸವನ್ನೇ ರದ್ದು ಮಾಡುತ್ತಿದ್ದಾರಂತೆ. ಅಲ್ಲದೆ ಹೋಟೆಲ್ ಹಾಗೂ ರೆಸಾರ್ಟ್ಗಳಲ್ಲಿ ಈ ಮೊದಲೇ ಆಗಿದ್ದ ಬುಕ್ಕಿಂಗ್ ಸಹ ಕ್ಯಾನ್ಸಲ್ ಮಾಡಿಕೊಂಡಿದ್ದಾರಂತೆ. ಮೈಸೂರಿನಲ್ಲಿ ಅಂದಾಜಿನ ಪ್ರಕಾರ ವಾಡಿಕೆಗಿಂತ 40% ಪ್ರವಾಸಿಗರು ಕಡಿಮೆಯಾಗಿದ್ದಾರೆ. ಇದರಿಂದ ಪ್ರವಾಸೋದ್ಯಮವನ್ನೇ ನಂಬಿದ್ದ ಹೋಟೆಲ್, ಟ್ರಾವಲ್, ಶಾಪಿಂಗ್ ಮಾಲ್, ಲಾಡ್ಜಿಂಜ್ ಹೋಟೆಲ್, ರೆಸಾರ್ಟ್ಗಳು ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ.
ಆದರೆ ಉದ್ಯಮಿಗಳು ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಒಂದಿಷ್ಟು ಚೇತರಿಕೆ ಕಾಣುವ ನಿರೀಕ್ಷೆಯಲ್ಲಿದ್ದಾರೆ. ದೇಶಾದ್ಯಾಂತ ಪ್ರತಿಭಟನೆಯ ಕಿಚ್ಚನ್ನು ಹೊತ್ತಿಸಿರುವ ಸಿಎಎ ಹಾಗೂ ಎನ್ಆರ್ಸಿ ಪ್ರವಾಸೋದ್ಯಮಕ್ಕೂ ಮಾರಕವಾಗಿರುವುದು ನಿಜಕ್ಕೂ ವಿಪರ್ಯಾಸ. (ಕೆ.ಎಸ್,ಎಸ್.ಎಚ್)