ಕರ್ನಾಟಕಪ್ರಮುಖ ಸುದ್ದಿ

ಕಂಕಣ ಸೂರ್ಯಗ್ರಹಣ: ಅಪರೂಪದ ಕ್ಷಣವನ್ನು ಕಣ್ತುಂಬಿಕೊಂಡ ಜನರು

ಬೆಂಗಳೂರು,26-ಬಾನಂಗಳದಲ್ಲಿ ಅಪರೂಪಕ್ಕೊಮ್ಮೆ ನಡೆಯುವ ಕಂಕಣ ಸೂರ್ಯಗ್ರಹಣವನ್ನು ರಾಜ್ಯಾದ್ಯಂತ ಜನರು ಕುತೂಹಲದಿಂದ ವೀಕ್ಷಿಸಿದರು.

ವರ್ಷದ ಕೊನೆಯ ಸೂರ್ಯಗ್ರಹಣ ಇದ್ದಾಗಿದ್ದು, ದೇಶದ ವಿವಿಧೆಡೆ ಹಾಗೂ ವಿಶ್ವದ ಹಲವು ರಾಷ್ಟ್ರಗಳಲ್ಲಿ ಜನರು ಕುತೂಹಲದಿಂದ ಸೂರ್ಯಗ್ರಹಣ ವೀಕ್ಷಿಸಿದ್ದಾರೆ.

ಮೈಸೂರು, ಶಿವಮೊಗ್ಗ, ಮಂಗಳೂರು, ಬೆಳಗಾವಿ ಸೇರಿ ರಾಜ್ಯಾದ್ಯಂತ ಸೂರ್ಯಗ್ರಹಣ ಗೋಚರವಾಗಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಗ್ರಹಣ ಗೋಚರ ಬೆಳಗ್ಗೆ ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆ ನೆಹರೂ ತಾರಾಲಯ, ಲಾಲ್‌ಬಾಗ್‌ ಸೇರಿ ಹಲವೆಡೆ ವರ್ಷದ ಕೊನೆಯ ಸೂರ್ಯ ಗ್ರಹಣ ವೀಕ್ಷಣೆಗೆ ಬಂದಿದ್ದವರಿಗೆ ನಿರಾಸೆಯಾಗಿತ್ತು. ಆದರೆ, ಬೆಳಗ್ಗೆ 9 ಗಂಟೆಯ ಬಳಿಕ ರಾಜ್ಯ ರಾಜಧಾನಿಯಲ್ಲೂ ಗ್ರಹಣ ಗೋಚರವಾಗಿದೆ.

ಮಂಗಳೂರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಕಂಕಣ ಗ್ರಹಣ ಎರಡು ನಿಮಿಷ ಕಾಣಸಿಗಲಿದೆ. ಹೀಗಾಗಿ ಕರಾವಳಿಯಲ್ಲಿ ಸೂರ್ಯಗ್ರಹಣ ನೋಡಲು ನೂರಾರು ಖಗೋಳಾಸಕ್ತರು ಸೇರಿದ್ದರು. ಮಂಗಳೂರಿನ ಪಣಂಬೂರು ಬೀಚ್ ಪ್ರವಾಸೋದ್ಯಮ ಅಭಿವೃದ್ದಿ ಮಂಡಳಿ ಹಾಗೂ ಸ್ಪೇಸ್ ಸಂಸ್ಥೆ ಜೊತೆಗೂಡಿ ಬಾನಂಗಳದ ಕೌತುಕ ವೀಕ್ಷಣೆಗೆ ಆಸಕ್ತಿ ಉಳ್ಳವರಿಗೆ ಅವಕಾಶವನ್ನು ಕಲ್ಪಿಸಲಾಗಿತ್ತು.

ಕೊಡಗು ಜಿಲ್ಲೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಗ್ರಹಣ ಗೋಚರಿಸಲಿದ್ದ ಕಾರಣ ಕುಟ್ಟದ ಚೆಕೆರಾ ಧರ್ಮಜ ದೇವಯ್ಯ ಅವರ ಮೇರಿಲ್ಯಾಂಡ್ ಎಸ್ಟೇಟ್ ನ ಕಾಫಿ ಕಣ ಮತ್ತು ಕಾಯಿಮನಿಯ ಕೊಳೇರಾ ರವಿ ಕಾರ್ಯಪ್ಪ ಅವರ ಕಾಫಿ ಕಣದಲ್ಲಿ ರಾಜ್ಯ ಮಟ್ಟದ ಗ್ರಹಣ ವೀಕ್ಷಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬೆಳಗಾವಿಯ ಸ‌.ಜ.ನಾಗಲೋಟಿಮಠ ವಿಜ್ಞಾನ ಕೇಂದ್ರದಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ವಿಕ ಸಹಯೋಗದಲ್ಲಿ ನಡೆದ ಗ್ರಹಣ ವೀಕ್ಷಣಾ ಕಾರ್ಯಕ್ರಮದಲ್ಲಿ ಹಲವಾರು ವಿದ್ಯಾರ್ಥಿಗಳು ಸೇರಿ ಕಂಕಣ ಸೂರ್ಯ ಗ್ರಹಣವನ್ನು ವೀಕ್ಷಣೆ ಮಾಡಿ ಖುಷಿಪಟ್ಟರು.

ಇನ್ನು ನೆಲಮಂಗಲ, ಶಿವಮೊಗ್ಗ, ಬೆಳಗಾವಿ, ಕೊಪ್ಪಳ, ಯಾದಗಿರಿ, ಚಾಮರಾಜನಗರ ಸೇರಿ ಹಲವೆಡೆ ಸೂರ್ಯ, ಚಂದ್ರ, ಭೂಮಿ ಒಂದೇ ರೇಖೆಯಲ್ಲಿ ಕಾಣಿಸಿಕೊಂಡಿರುವುದು ಸೂರ್ಯಗ್ರಹಣದ ವಿಶೇಷತೆಯಾಗಿದೆ.

ಇನ್ನು ಕೊಚ್ಚಿ, ವಯನಾಡು, ಚೆನ್ನೈ, ಭುವನೇಶ್ವರ, ಅಹಮದಾಬಾದ್‌ ಸೇರಿ ದೇಶದ ಹಲವೆಡೆ ಕಂಕಣ ಸೂರ್ಯಗ್ರಹಣ ಗೋಚರಿಸಿದೆ. ಅಲ್ಲದೆ, ಚೀನಾ, ಯುಎಇ, ಸಿಂಗಾಪುರ್, ಕತಾರ್, ಸೌದಿ ಅರೇಬಿಯಾ, ಶ್ರೀಲಂಕಾ ಸೇರಿ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೌತುಕ ನಡೆಯುತ್ತಿದೆ.

ಬೆಂಕಿಯ ಬಳೆಯಂತೆ ಗೋಚರಿಸುವ ಹಿನ್ನೆಲೆಯಲ್ಲಿ ಇದನ್ನು ಖಗೋಳ ಭಾಷೆಯಲ್ಲಿ ಕಂಕಣ ಸೂರ್ಯ ಗ್ರಹಣ ಎಂದು ಕರೆಯಲಾಗಿದೆ. 2010ರ ಜ. 15 ರಂದು ಜರುಗಿದ್ದ ಕಂಕಣ ಸೂರ್ಯ ಗ್ರಹಣ 11 ನಿಮಿಷ 8 ಸೆಕೆಂಡುಗಳಷ್ಟು ದೀರ್ಘವಾಗಿ ಕಾಣಿಸಿತ್ತು. 300ಕಿ.ಮೀ ಅಗಲದ ನೆರಳು ದಕ್ಷಿಣ ಭಾರತದ ರಾಮೇಶ್ವರಂ ಮತ್ತು ಕನ್ಯಾಕುಮಾರಿಯಲ್ಲಿ ಕಂಡು ಬಂದಿತ್ತು. (ಎಂ.ಎನ್)

 

Leave a Reply

comments

Related Articles

error: