ಮೈಸೂರು

ತಾಲೂಕಿಗೆ ಒಂದೇ ಕೇಂದ್ರ : ಆಧಾರ್ ಕಾರ್ಡ್ ಪಡೆಯಲು ಜನರ ಪರದಾಟ

ವರದಿ : ಬಿ.ಆರ್. ರಾಜೇಶ್

ಬೈಲಕುಪ್ಪೆ: ಪಟ್ಟಣದ ಆಡಳಿತ ಭವನದಲ್ಲಿ ಸ್ಥಾಪಿಸಿರುವ ಆಧಾರ್ ಪತ್ರ ತೆರೆಯುವ ಕೇಂದ್ರದಲ್ಲಿ ಆಧಾರ್ ಪತ್ರ ತೆಗೆಸಲು ಸಾರ್ವಜನಿಕರು ಹರಸಾಹಸವನ್ನೆ ಪಡುವಂತಾಗಿದೆ. ಇತ್ತಿಚೆಗೆ ಸರ್ಕಾರದ ಎಲ್ಲ ದಾಖಲಾತಿಗಳಿಗೆ ಹಾಗೂ ಬ್ಯಾಂಕ್, ಅಂಚೆ ಕಛೇರಿ, ಎಲ್.ಐ.ಸಿ, ಅಡುಗೆ ಅನಿಲ ವಿತರಣೆ ಮುಂತಾದ ಕಡೆ ಆಧಾರ್ ಕಾರ್ಡ್ ದಾಖಲೆಯನ್ನು ಎಲ್ಲ ವ್ಯವಹಾರಗಳಿಗೂ ಕಡ್ಡಾಯ ಮಾಡಿರುವುದರಿಂದ ಜನತೆ ಆಧಾರ್‍ ಪತ್ರ ಪಡೆಯಲು ಪರಿತಪಿಸುವಂತಾಗಿದೆ.

ಇದರ ಜೊತೆ ಕೇಂದ್ರ ಹಾಗು ರಾಜ್ಯ ಸರ್ಕಾರದ ಎಲ್ಲ ಯೋಜನೆಗಳಿಗೆ ಮತ್ತು ಸವಲತ್ತುಗಳನ್ನು ಪಡೆಯಲು ಆಧಾರ್ ಪತ್ರ ಕಡ್ಡಾಯಗೊಳಿಸಿರುವುದರಿಂದ ಸಾರ್ವಜನಿಕರು ಹಾಗೂ ರೈತಾಪಿ ಮಂದಿ ತಮ್ಮ ದೈನಂದಿನ ಕೆಲಸ ಕಾರ್ಯ ಸ್ಥಗಿತಗೊಳಿಸಿ ತಾಲೂಕು ಕೇಂದ್ರಕ್ಕೆ ಅಲೆಯುವಂತಾಗಿದೆ.

ಅಲ್ಲದೆ ಪಡಿತರ ಕಾರ್ಡ್‌ನಲ್ಲಿ ಹೆಸರಿರುವರು ಆಧಾರ್ ಸಂಖ್ಯೆ ನೀಡಿರದಿದ್ದರೆ ಅಂತಹವರಿಗೆ ಪಡಿತರ ವಿರತಣೆ ತಡೆ ಹಿಡಿಯಲಾಗುತ್ತಿದೆ. ಇದರಿಂದ ಆಧಾರ ಪತ್ರ ಮಾಡಿಸಲು ಸಾರ್ವಜನಿಕರು ಮುಗಿ ಬೀಳುವಂತಾಗಿದೆ. ಆಹಾರ ಇಲಾಖೆಯ ಮಾಹಿತಿ ಪ್ರಕಾರ ತಾಲೂಕಿನಲ್ಲಿ ಇನ್ನೂ 15 ಸಾವಿರ ಮಂದಿ ಸಾರ್ವಜನಿಕರು ಪಡಿತರ ಕಾರ್ಡ್‌ಗೆ ಆಧಾರ್ ಸಂಖ್ಯೆ ಜೋಡಿಸದೇ ಇರುವುದರಿಂದ ಆಧಾರ್ ಪತ್ರವನ್ನು ಇಷ್ಟೂ ಮಂದಿ ಕಡ್ಡಾಯವಾಗಿ ನೊಂದಣಿ ಮಾಡಲೇ ಬೇಕಾಗಿದೆ.

ಈ ಹಿಂದೆ ಸರ್ಕಾರ ಪ್ರತಿ ಹೋಬಳಿ ಕೇಂದ್ರಗಳ ಅಟಲ್‌ಜಿ ಕೇಂದ್ರಗಳಲ್ಲಿ ಹಾಗೂ ಗ್ರಾ.ಪಂ. ಕಛೇರಿಗಳಲ್ಲಿ ಆಧಾರ್ ಪತ್ರಗಳನ್ನು ನೊಂದಾಯಿಸಲು ನಿಗದಿ ಮಾಡಲಾಗಿತ್ತು. ಆದರೆ ಕೆಲಸದ ಒತ್ತಡ ಹಾಗೂ ತಾಂತ್ರಿಕ ಕಾರಣ ನೀಡಿ ಈ ಕೇಂದ್ರಗಳಲ್ಲಿ ಹಾಗೂ ಗ್ರಾ.ಪಂ.ಗಳಲ್ಲಿ ಆಧಾರ್ ಪತ್ರ ನೊಂದಾಯಿಸದೆ ನಿರಾಕರಿಸುವುದರಿಂದ ತಾಲೂಕು ಆಡಳಿತ ಭವನದಲ್ಲಿ ಸ್ಥಾಪಿಸಿರುವ ಏಕೈಕ ಆಧಾರ್ ನೊಂದಣಿ ಕೇಂದ್ರಕ್ಕೆ ಸಾರ್ವಜನಿಕರು ಅಲೆಯುವಂತಾಗಿದೆ.

ಸರ್ಕಾರ ಕೂಡ ತಾಲೂಕು ಕೇಂದ್ರದಲ್ಲಿ ಮಾತ್ರ ಆಧಾರ್ ನೊಂದಣಿ ಕಛೇರಿ ಸ್ಥಾಪಿಸಿ ಕೈತೊಳೆದುಕೊಂಡಿದೆ. ಅಲ್ಲದೆ ಸರ್ಕಾರದ ಆದೇಶದ ಪ್ರಕಾರ ಪ್ರತಿ ಅಟಲ್‌ಜಿ ಕೇಂದ್ರಗಳಲ್ಲಿ ಹಾಗೂ ಗ್ರಾ.ಪಂ.ಗಳಲ್ಲಿ ತ್ವರಿತವಾಗಿ ಆಧಾರ್ ನೊಂದಣಿ ಮಾಡಿಸಬೇಕೆಂಬ ಕಾನೂನು ಇದ್ದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಈ ಬಗ್ಗೆ ಸಂಬಧಪಟ್ಟ ಅಧಿಕಾರಿಗಳಾಗಲಿ ಅಥವಾ ಸರ್ಕಾರಗಳಾಗಲಿ ಈ ಬಗ್ಗೆ ಕ್ರಮ ಕೈಗೊಳ್ಳುವರೇ ಎಂದು ಕಾದು ನೋಡಬೇಕಿದೆ.

 

ಅಭಿಪ್ರಾಯ:

ಇಡೀ ತಾಲೂಕಿನ ಜನತೆ ಪಟ್ಟಣದ ಆಡಳಿತ ಭವನದಲ್ಲಿ ಸ್ಥಾಪಿಸಿರುವ ಏಕೈಕ ಆಧಾರ್ ಕೇಂದ್ರಕ್ಕೆ ಅಲೆಯುವಂತಾಗಿದ್ದು, ಹೆಚ್ಚು ಆಧಾರ್ ಕೇಂದ್ರಗಳನ್ನು ಸ್ಥಾಪಿಸಿ ಸಾರ್ವಜನಿಕರಿಗೆ ಸಹಾಯವಾಗುವಂತೆ ಮಾಡಬೇಕು.
– ಹನುಮಪ್ಪ, ರೈತ

ಆಹಾರ ಇಲಾಖೆ 15 ಸಾವಿರ ಮಂದಿ ಆಧಾರ್ ಪತ್ರದ ಸಂಖ್ಯೆ ನೀಡಬೇಕಾಗಿದ್ದು, ಇನ್ನಿತರ ಇಲಾಖೆಗಳಲ್ಲಿಯೂ ಯಾವುದೇ ಸೌಲಭ್ಯ ಪಡೆಯಲು ಆಧಾರ್ ಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ.
– ಸಣ್ಣಸ್ವಾಮಿ, ಆಹಾರ ನಿರೀಕ್ಷಕ

Leave a Reply

comments

Related Articles

error: