ಮೈಸೂರು

ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷದ ಪ್ರಯುಕ್ತ ಜ.1ರಂದು ಭಕ್ತಾದಿಗಳಿಗೆ ತಿರುಪತಿ ಮಾದರಿಯ ಲಡ್ಡು ವಿತರಣೆ : ಪ್ರೊ. ಭಾಷ್ಯಂ ಸ್ವಾಮೀಜಿ

ಮೈಸೂರು,ಡಿ.27:- ಮೈಸೂರು ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷದ ಪ್ರಯುಕ್ತ   01.01.2020 (ಬುಧವಾರ) ಬೆಳಿಗ್ಗೆ  4  ಗಂಟೆಯಿಂದ ರಾತ್ರಿ 12  ಗಂಟೆಯವರೆಗೆ ಎರಡು ಲಕ್ಷ ತಿರುಪತಿ ಮಾದರಿಯ ಲಡ್ಡುವನ್ನು ಭಕ್ತಾದಿಗಳಿಗೆ ವಿತರಿಸುವ ಕಾರ್ಯಕ್ರಮ ನಡೆಯಲಿದೆ ಎಂದು  ಯೋಗಾನರಸಿಂಗಸ್ವಾಮಿ ದೇಗುಲದ ಸಂಸ್ಥಾಪಕರಾದ ಪ್ರೊ. ಭಾಷ್ಯಂ ಸ್ವಾಮೀಜಿ ತಿಳಿಸಿದರು.

ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಹಲವಾರು ವರ್ಷಗಳಿಂದ  ಲಡ್ಡುವಿತರಿಸುವ ಕಾರ್ಯವನ್ನು  ನಡೆಸಿಕೊಂಡು ಬರಲಾಗಿದ್ದು,  ಈ ವರ್ಷವೂ ಸಹ ನೂತನ ಕ್ರೈಸ್ತ ವರ್ಷಾರಂಭದ ಅಂಗವಾಗಿ   01.01.2020 (ಬುಧವಾರ) ರ ಬೆಳಿಗ್ಗೆ  4 ಗಂಟೆಯಿಂದ ಪ್ರಾರಂಭಿಸಿ ಶ್ರೀ ಯೋಗಾನರಸಿಂಹಸ್ವಾಮಿಯವರಿಗೆ ವಿಶೇಷ ಅಲಂಕಾರ ಮತ್ತು ತಮಿಳುನಾಡಿನ “ಶ್ರೀರಂಗಂಕ್ಷೇತ್ರ’ದಿಂದ, ತಮಿಳುನಾಡಿನ ಮಧುರೆ ಕ್ಷೇತ್ರದಿಂದ ಹಾಗೂ ಶ್ರೀವಿಲ್ಲಿ ಪುತ್ತೂರು ಎಂಬ ದಿವ್ಯ ಕ್ಷೇತ್ರ ದಿಂದ ತರಿಸಿರುವ ವಿಶೇಷ “ತೋಮಾಲೆ” ಮತ್ತು “ಸ್ವರ್ಣಪುಷ್ಪದಿಂದ” ಶ್ರೀಸ್ವಾಮಿಗೆ “ಸಹಸ್ರನಾಮರ್ಚನೆ” ಮತ್ತು ದೇವಾಲಯದ ಉತ್ಸವ ಮೂರ್ತಿಯಾದ ಶ್ರೀಮಲಯಪ್ಪನ್ ಸ್ವಾಮಿ, ಪದ್ಮಾವತಿ ಮತ್ತು ಮಹಾಲಕ್ಷ್ಮಿ ದೇವರಿಗೆ ದೇವಾಲಯದ ಆವರಣದಲ್ಲಿ “ಏಕಾದಶ ಪ್ರಾಕಾರೋತ್ಸವ” ಹಾಗೂ “20 ಕ್ವಿಂಟಾಲ್ ಪುಳಿಯೋಗರೆ ನಿವೇದನೆ” ಮತ್ತು ದೇವಾಲಯಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ “ ಎರಡು ಲಕ್ಷ ತಿರುಪತಿ ಮಾದರಿಯ ಲಡ್ಡು ವಿತರಣಾ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರಾರಂಭದಲ್ಲಿ ಅಂದರೆ 1994ನೇ ಇಸವಿಯಲ್ಲಿ ಅಂದಾಜು ಒಂದು ಸಾವಿರ ಲಡ್ಡು ವಿತರಣೆಯಿಂದ ಪ್ರಾರಂಭಿಸಿ ಕಳೆದ ಐದು ವರ್ಷಗಳಿಂದ ಪ್ರತಿ ವರ್ಷ ಎರಡು ಲಕ್ಷ ಲಡ್ಡುಗಳನ್ನು ಭಕ್ತಾದಿಗಳಿಗೆ ವಿತರಣೆ ಮಾಡಲಾಗುತ್ತಿದೆ. ಈ ವರ್ಷವೂ ಸಹ ಇನ್ನೂ ಹೆಚ್ಚು ಅಂದರೆ ಎರಡು ಲಕ್ಷ ಲಡ್ಡುವನ್ನು ವಿತರಣೆ ಮಾಡಲು ದೇವಸ್ಥಾನದ ವತಿಯಿಂದ ತಯಾರಿ ನಡೆಯುತ್ತಿದೆ. ಈ ವರ್ಷ ಅಂದಾಜು (2000)ಗ್ರಾಂ ತೂಕದ (10,000) ಲಡ್ಡುಗಳು ಹಾಗೂ (200)ಗ್ರಾಂ ತೂಕದ (2 ಲಕ್ಷ) ಲಡ್ಡುಗಳನ್ನು ದೇವಾಲಯಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೆ ಯಾವುದೇ ಜಾತಿ, ಮತ ಮತ್ತು ಭೇದವಿಲ್ಲದೆ ಉಚಿತವಾಗಿ ವಿತರಿಸಲಾಗುವುದು ಎಂದರು.

ಲಡ್ಡು ಪ್ರಸಾದವನ್ನು ವಿಶೇಷವಾಗಿ 50 ಮಂದಿ ನುರಿತ ಬಾಣಸಿಗರಿಂದ ತಯಾರಿಸಲಾಗಿದ್ದು,   20.12.2019 ರಿಂದ ಪ್ರಾರಂಭಿಸಿ 31.12.2017 ರವರೆಗೂ ಲಡ್ಡು ತಯಾರಿ ಕಾರ್ಯ ನಡೆಯಲಿದೆ.

ಲಡ್ಡು ತಯಾರಿಕೆಗೆ 50 ಕ್ವಿಂಟಾಲ್ ಕಡ್ಲೆಹಿಟ್ಟು, 100 ಕಿಂಟಾಲ್ ಸಕ್ಕರೆ, 4000 ಲೀಟರ್ ಖಾದ್ಯ ತೈಲ, 200 ಕೆ.ಜಿ. ಗೋಡಂಬಿ, 200 ಕೆ.ಜಿ. ಒಣದ್ರಾಕ್ಷಿ, 100 ಕೆ.ಜಿ. ಬಾದಾಮಿ, 200 ಕೆ.ಜಿ ಡೈಮಂಡ್ ಸಕ್ಕರೆ, 500 ಕೆ.ಜಿ. ಬೂರಾ ಸಕ್ಕರೆ, 10 ಕೆ.ಜಿ. ಪಿಸ್ತಾ, 20 ಕೆ.ಜಿ, ಏಲಕ್ಕಿ, 20 ಕೆ.ಜೆ. ಜಾಕಾಯಿ ಮತ್ತು ಜಾಪತ್ರೆ, 5 ಕೆ ಜಿ. ಪಚ್ಚೆ ಕರ್ಪೂರ, 100 ಕೆ.ಜಿ, ಲವಂಗಗಳನ್ನು ಬಳಸಿ ತಯಾರಿಸಲಾಗಿದೆ ಎಂದು ತಿಳಿಸಿದರು.

ಲೋಕ ಕಲ್ಯಾಣಾರ್ಥವಾಗಿ ಯಾವುದೇ ಜಾತಿ, ಮತಗಳ ಭೇದವಿಲ್ಲದೆ ಪ್ರಪಂಚದ ಎಲ್ಲೆಡೆ ಆಚರಿಸುವ ಕ್ರೈಸ್ತ ವರ್ಷಾರಂಭದ ಹಿನ್ನೆಲೆಯಲ್ಲಿ ವಿಶ್ವಶಾಂತಿ, ಭ್ರಾತೃತ್ವ ಮತ್ತು ಸರ್ವಧರ್ಮ ಸಮನ್ವಯತೆಗಾಗಿ ಮತ್ತು ನಾಡಿನ ಎಲ್ಲಾ ಜನರ ಒಳಿತಿಗಾಗಿ ಪ್ರಾರ್ಥಿಸಿ ಈ ಲಡ್ಡು ಪ್ರಸಾದ ನಿವೇದನೆ ಮತ್ತು ಭಕ್ತಾದಿಗಳಿಗೆ ವಿನಿಯೋಗ ಕಾರ್ಯಕ್ರಮವನ್ನು ಭಕ್ತಾದಿಗಳ ನೆರವಿನಿಂದ ಮತ್ತು ಸಂಪೂರ್ಣ ಸಹಕಾರದಿಂದ ಈ ಮಹತ್ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.

ಲೋಕಕಲ್ಯಾಣಾರ್ಥಕ್ಕೋಸ್ಕರ ಮತ್ತು ದೇಶದ ಎಲ್ಲಾ ಜನರ ಒಳಿತಿಗಾಗಿ, ಸಮಸ್ತ ಜನರಿಗೆ ಸುಖ ಶಾಂತಿ ನೆಮ್ಮದಿ ದೊರೆಯಲಿ ಎಂದು ಪ್ರಾರ್ಥಿಸುವ ಮತ್ತು ಎಲ್ಲಾ ಭಕ್ತಾದಿಗಳು ಒಂದೇ ಎಂದು ಸಾರುವ ಏಕೈಕ ದೃಷ್ಟಿಯಿಂದ ಈ ಎಲ್ಲಾ ಕಾರ್ಯಕ್ರಮಗಳು ವಿಶೇಷ ಪ್ರಾರ್ಥನೆಯಿಂದ ನೆರವೇರಲಿದೆ ಎಂದರು.

ಈ ಸಂದರ್ಭ  ದೇವಸ್ಥಾನದ ಆಡಳಿತಾಧಿಕಾರಿ ಎನ್, ಶ್ರೀನಿವಾಸನ್  ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

 

 

Leave a Reply

comments

Related Articles

error: