ಮೈಸೂರು

ಕೇಂದ್ರ ಸರ್ಕಾರ ಜಾರಿಮಾಡಿರುವ ಸಿಎಎ/ಎನ್ ಆರ್ ಸಿಗೆ ಬೆಂಬಲ : ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಗಿರಿಧರ್ ವಿ.

ಮೈಸೂರು,ಡಿ.27:-  ಕೇಂದ್ರ ಸರ್ಕಾರ ಜಾರಿಮಾಡಿರುವ ಸಿಎಎ/ಎನ್ ಆರ್ ಸಿಯನ್ನು  ಬೆಂಬಲಿಸುವುದಾಗಿ ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಗಿರಿಧರ್ ವಿ.ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು   1947 ರ ವಿಭಜನೆಯಾದಾಗ ಡಾ. ಬಿ.ಆರ್. ಅಂಬೇಡ್ಕರ್‌ ಭಾರತದ ವಿಭಜನೆಯನ್ನು ವಿರೋಧಿಸಿದರು. ಕಾರಣ ಧರ್ಮದ ಆಧಾರದ ಮೇಲೆ ವಿಭಜನೆ ಮಾಡಲು ಹೊರಟಾಗ, ಪಾಕಿಸ್ತಾನ ಮತ್ತು ಭಾರತದಲ್ಲಿ ಹಿಂದೂಗಳು ಮತ್ತು ಮುಸಲ್ಮಾನರು ಪರಸ್ಪರ ಜನಗಳ ವಿನಿಮಯ ಮತ್ತು ಸ್ಥಿರಾಸ್ತಿ, ಚರಾಸ್ತಿಗಳನ್ನು ವಿನಿಮಯ ಮಾಡುವುದು ಕಷ್ಟದ ಕೆಲಸ ಮತ್ತು ಅತ್ಯಂತ ಸೂಕ್ಷ್ಮ ವಿಚಾರ ಎಂದು ಎಚ್ಚರಿಸಿದರು. ಆದರೆ ನೆಹರು ಮತ್ತು ಜಿನ್ನಾರವರಿಂದ ಧರ್ಮದ ಆಧಾರದ ಮೇಲೆ ವಿಭಜನೆಯಾಗಿ 1947ರಲ್ಲಿ ಮುಸ್ಲಿಂ ರಿಪಬ್ಲಿಕ್ ಆಫ್ ಪಾಕಿಸ್ತಾನ್ ಎಂಬ ಹೆಸರಿನಲ್ಲಿ ಪ್ರತ್ಯೇಕ ಮುಸ್ಲಿಂ ರಾಷ್ಟ್ರ ಬೇಕೆಂದು ಜಿನ್ನಾರವರ ಒತ್ತಡದ ಮೇರೆಗೆ ವಿಭಜಿಸಲಾಯಿತು.

ಅಂದಿನ ಕಾಂಗ್ರೆಸ್, ನೆಹರು ಸರ್ಕಾರ ಇವತ್ತು ಜಾರಿ ಮಾಡುತ್ತಿರುವ ಸಿಎಎ/ಎನ್ ಆರ್ ಸಿ ಕಾಯ್ದೆಯನ್ನು ಅಂದೇ ಮಾಡಿದ್ದರೆ ಜನರಲ್ಲಿ ಇಷ್ಟು ಗೊಂದಲವಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು. ವಿಭಜನೆಗೆ ಅವಕಾಶವನ್ನು ಕೊಟ್ಟು ನೆಹರೂರವರ ಕೈತೊಳೆದು ಸಿಎಎ ಕಾಯ್ದೆಯನ್ನು ಮಾಡದೇ ಇದ್ದಿದ್ದರ ಪರಿಣಾಮ ಮತ್ತು ನೆಹರೂರವರ ಮುಂದಾಲೋಚನೆಯ ಕೊರತೆ ಹಾಗೂ ದೇಶದ ಮೇಲಿಲ್ಲದ ಇಚ್ಛಾಶಕ್ತಿ ಎಂದರು.

ದೇಶದಲ್ಲಿರುವ ಮುಸಲ್ಮಾನರಲ್ಲಿ ಸಿಎಎ ಬಗ್ಗೆ ಇರುವ ತಪ್ಪು ಸಂದೇಶಗಳನ್ನು ಹರಡಿ, ಅವರನ್ನು ಪ್ರಚೋದಿಸಿ ನೆಮ್ಮದಿ ಹಾಳುಮಾಡುತ್ತಿರುವ ಸಂಘಟನೆಗಳಲ್ಲಿ ಮತ್ತು ದಲಿತ ನಾಯಕರುಗಳಲ್ಲಿ, ದಲಿತ ಸಾಹಿತಿಗಳಲ್ಲಿ, ಪ್ರಗತಿಪರ ಚಿಂತಕರಲ್ಲಿ ನನ್ನದೊಂದು ಪ್ರಶ್ನೆ ಪಾಕಿಸ್ತಾನ, ಬಂಗ್ಲಾದೇಶದಲ್ಲಿರುವ ದಲಿತರು ಭಾರತಕ್ಕೆ ಬರಬಾರದೇ ? ಅಂಬೇಡ್ಕರ್ ರವರು ಅನುಷ್ಠಾನಗೊಳಿಸಿದ ಮೀಸಲಾತಿ ಮತ್ತು ಅನುಕೂಲಗಳನ್ನು ಪಡೆಯುವುದು ಬೇಡವೇ ? ಪಾಕಿಸ್ತಾನದಿಂದ ಭಾರತ ಪೌರತ್ವ ಪಡೆದರೆ ನಮ್ಮ ಕಳೆದುಹೋದ ಸಹೋದರರು ಮರಳೀ ಭಾರತಕ್ಕೆ ಬರಬಾರದೇ ? ಅಲಸಂಖ್ಯಾತರಲ್ಲಿ ಇರುವ ಕಾಳಜಿ ನಮ್ಮ ದಲಿತ ಸಮುದಾಯಕ್ಕೆ ಏಕಿಲ್ಲ ? ಅನಾವಶ್ಯಕವಾಗಿ ಸಿಎಎ ಕಾಯ್ದೆಯನ್ನು ವಿರೋಧಿಸುವುದು, ಅನಾವಶ್ಯಕ ಹೇಳಿಕೆಗಳನ್ನು ನೀಡಿ ಸಮಾಜದ ದಾರಿ ತಪ್ಪಿಸುವುದು ಸರಿಯಲ್ಲ, ಇದಕ್ಕೂ ದಲಿತ ಸಮುದಾಯಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಎ ಯಿಂದ ದಲಿತರಿಗೆ ನ್ಯಾಯ ಸಿಕ್ಕಿದೆ. ಸಾವಿರಾರು ದಲಿತರು ಭಾರತ ಬಾಂಗ್ಲಾದೇಶಗಳಲ್ಲಿ ದೌರ್ಜನ್ಯಕ್ಕೆ ತುತ್ತಾಗಿ ನರಳುತ್ತಿದ್ದಾರೆ. ಅಂತಹ ಶೋಷಿತ ದಲಿತರು ಭಾರತಕ್ಕೆ ನಿರಾಶ್ರಿತರಾಗಿ ಬರುತ್ತಿದ್ದಾರೆ. ಆ ದಲಿತರಿಗೆ ಭಾರತ ಪೌರತ್ವ ನೀಡಿ, ಹಕ್ಕುಗಳನ್ನು ಕೊಟ್ಟಂತಾಗುತ್ತಿದೆ. ಸಿಎಎ ಕಾಯ್ದೆಯಿಂದ ನಿರಾಶ್ರಿತರಾಗಿ ಬಂದ ದಲಿತರಿಗೆ ಮೀಸಲಾತಿ ಪಡೆಯಲು ಕಾರಣರಾದ ಮೋದಿ ಸರ್ಕಾರವನ್ನು ಶ್ಲಾಘಿಸಬೇಕಾಗಿದೆ ಎಂದರು.

ಅಂಬೇಡ್ಕರ್ ಬರೆದಂತಹ ಸಂವಿಧಾನಕ್ಕೆ ಮೋದಿಯವರ ಸರ್ಕಾರ 370ನೇ ವಿಧಿ ರದ್ದತಿಯಿಂದಾಗಿ ಅಂಬೇಡ್ಕರ್‌ರವರಿಗೆ ಗೌರವವನ್ನು ತಂದುಕೊಟ್ಟಿದೆ. ಒಂದೇ ದೇಶದಲ್ಲಿ ಎರಡು ಸಂವಿಧಾನ, ಎರಡು ಧ್ವಜ, ಎರಡು ಪ್ರಧಾನಿಯನ್ನು ಅಂಬೇಡ್ಕರ್ ಅಂದೇ ವಿರೋಧಿಸಿದ್ದರು.  ಕೆಲವು ಸಾಹಿತಿಗಳು, ಬುದ್ದಿಜೀವಿಗಳು ಮರೆತು ಬಿಟ್ಟಿದ್ದಾರೆ. ಕಾಶ್ಮೀರದಲ್ಲಿದ್ದಂತಹ ದಲಿತರಿಗೆ 370ನೇ ವಿಧಿ ರದ್ಧತಿಯಿಂದ ಜಮ್ಮು-ಕಾಶ್ಮೀರದಲ್ಲಿ ದಲಿತರಿಗೆ ಮೀಸಲಾತಿ ಸಿಗುವಂತೆ ಮಾಡಿರುವುದು ಪ್ರಧಾನಿ ಮೋದಿ. ಹಿಂದೂ ಅಲ್ಪಸಂಖ್ಯಾತ ಪ್ರದೇಶಗಳು ದಲಿತರು ಅಸುರಕ್ಷಿತ, ಪಾಕಿಸ್ತಾನ, ಬಾಂಗ್ಲಾದಲ್ಲಿರುವ ದಲಿತರಿಗೆ ಗೊತ್ತು “ಹಿಂದುತ್ವದ ಮಹತ್ವ” ಭಾರತದಲ್ಲಿರುವ ಮುಸಲ್ಮಾನರು ಸುರಕ್ಷಿತ. CAA ಕಾಯ್ದೆಯಿಂದ ಯಾವುದೇ ತೊಂದರೆಯಿಲ್ಲ. ನಾವು ಹಿಂದೂ, ಮುಸಲ್ಮಾನರು ಭಾರತದಲ್ಲೇ ಹುಟ್ಟಿದ್ದೇವೆ. ಇಲ್ಲೇ ಬದುಕುತ್ತಿದ್ದೇವೆ. ಸ್ಥಳೀಯ ಮುಸಲ್ಮಾನರಿಗೆ ಕೆಲವು ರಾಜಕೀಯ ಸ್ವಾರ್ಥ ನಾಯಕರುಗಳು ಹೆದರಿಸುತ್ತಿದ್ದಾರೆ ಅವರು ಧೃತಿಗೆಡದಿರಲಿ ಎಂದು ಮುಸಲ್ಮಾನ್ ಸಹೋದರರಲ್ಲಿ ಪ್ರಾರ್ಥಿಸಿದರು.

ಅಮೇರಿಕಾ, ಲಂಡನ್, ಆಸ್ಟ್ರೇಲಿಯಾ ಮುಂತಾದ ರಾಷ್ಟ್ರಗಳಲ್ಲಿ ಮುಸಲ್ಮಾನರು ಬಾಳುತ್ತಿದ್ದಾರೆ. ಪೌರತ್ವವನ್ನು ಪಡೆದಿದ್ದಾರೆ. ಅವರನ್ನು ಯಾರೂ ವಾಪಸ್ ಕಳಿಸಿಲ್ಲ. ಅದೇ ರೀತಿ ಭಾರತದಲ್ಲಿಯೂ ಮುಸಲ್ಮಾನರ ಪೌರತ್ವವನ್ನು ಪಡೆದಿದ್ದಾರೆ. ದೇಶಬಿಟ್ಟು ಕಳಿಸಲು ಸಾಧ್ಯವಿಲ್ಲದ ವಿಚಾರಕ್ಕೆ ತಪ್ಪು ಸಂದೇಶಗಳನ್ನು ನೀಡುತ್ತಿರುವವರನ್ನು ಬಂಧಿಸಬೇಕೆಂದು  ಆಗ್ರಹಿಸಿದರು.

ತುಳಿತಕ್ಕೆ ಒಳಗಾಗಿರುವ ಹಿಂದೂ, ಕ್ರೈಸ್ತರು, ಪಾರ್ಸಿ, ಸಿಖ್ಖರು, ಬೌದ್ಧರಿಗೆ ಆಶ್ರಯ ಮತ್ತು ಪೌರತ್ವ ಕೊಟ್ಟು ಅವರನ್ನು ಮರಳಿ ದೇಶಕ್ಕೆ ಕರೆತರಲು ಕಾನೂನು ಬೇಕು. ಈ ಕಾನೂನು ಜಾರಿಗೊಳಿಸುವ ಹಿಂದೆ ಯಾವುದೇ ಷಡ್ಯಂತ್ರವಿಲ್ಲ, ಬಹುಸಂಖ್ಯಾತ ಹಿಂದೂಗಳಿರುವ ನಮ್ಮ ಭಾರತದಲ್ಲೇ ನಮಗೆ ರಕ್ಷಣೆ ಇಲ್ಲದೇ ಇರುವುದು ವಿಪರ್ಯಾಸ. ಅದಕ್ಕೆ ನಾನೇ ಉದಾಹರಣೆ. ಮುಸ್ಲಿಂ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತರ ಹಿಂದೂಗಳ ಪಾಡು ಹೇಗಿರಬಹುದೆಂದು ಕಲ್ಪಿಸಿಕೊಂಡು ಯೋಚಿಸಿ ನೋಡಿ. ಅಕ್ರಮವಾಗಿ ಒಳನುಸುಳಿ ಕಾನೂನು ಬಾಹಿರವಾಗಿ, ದುಷ್ಟ ಚಟುವಟಿಕೆಗಳನ್ನು ನಡೆಸಿ, ದೇಶದ ಕಾನೂನು ಸುವ್ಯವಸ್ಥೆಯನ್ನು ಭಂಗಗೊಳಿಸುತ್ತ, ಸಮಾಜಘಾತುಕ ಉಗ್ರಶಕ್ತಿಗಳನ್ನು ನಿಗ್ರಹಿಸಲು, ಕಡಿವಾಣ ಹಾಕಲು ಈ ಕಾನೂನು ಸಹಕಾರಿಯಾಗಲಿದೆ ಎಂಬುದನ್ನು  ಅರ್ಥೈಸಿಕೊಳ್ಳಬೇಕು. ಎಲ್ಲರನ್ನು ಎಲ್ಲವನ್ನು ತನ್ನ ವಿಶಾಲ ಹೃದಯದಲ್ಲಿ ಗೂಡು ಕಟ್ಟಿಕೊಳ್ಳಲು ಸ್ವಾತಂತ್ರ್ಯ ನೀಡುವ ದೇಶ ನಮ್ಮ ಭಾರತ ದೇಶ, ಶಾಂತಿ ಪ್ರಿಯ, ವಿವಿಧತೆಯಲ್ಲಿ ಏಕತೆಯನ್ನು ಪ್ರತಿನಿಧಿಸುವ ಏಕೈಕ ರಾಷ್ಟ್ರ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: