ಕರ್ನಾಟಕಪ್ರಮುಖ ಸುದ್ದಿ

ಕಪ್ಪತಗುಡ್ಡ, ಬಂಡೀಪುರ ಅರಣ್ಯ ಬೆಂಕಿಗಾಹುತಿ : ಸಿಐಡಿ ತನಿಖೆಗೆ ಸಿಎಂ ಆದೇಶ

ಬೆಂಗಳೂರು : ರಾಜ್ಯದ ಹಲವು ಕಡೆ ಅರಣ್ಯಗಳಿಗೆ ಬೆಂಕಿ ಬಿದ್ದು ನೂರಾರು ಎಕರೆ ಅರಣ್ಯ ಆಹುತಿಯಾದ ಬಗ್ಗೆ ತನಿಖೆ ನಡೆಸುವಂತೆ ಅಪರಾಧ ತನಿಖಾ ದಳ – ಸಿಐಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ.

ಅರಣ್ಯ ಸಚಿವ ರಮಾನಾಥ ರೈ ಮತ್ತು ಹಿರಿಯ ಅಧಿಕಾರಿಗಳ ಜೊತೆ ಸೋಮವಾರ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕರಣದ ಗಂಭೀರತೆ ಅರಿತು ಸಿಐಡಿ ತನಿಖೆಗೆ ಆದೇಶಿಸಿದರು. ಪ್ರಮುಖವಾಗಿ ಕಪ್ಪತಗುಡ್ಡ, ಬಂಡೀಪುರ ಹುಲಿ ರಕ್ಷಿತಾರಣ್ಯ ಪ್ರದೇಶದ ಕಾಡ್ಗಿಚ್ಚು ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಿದ್ದಾರೆ.

ಅರಣ್ಯ ಅಧಿಕಾರಿಗಳು ಇಂತಹ ಅವಘಡಗಳು ನಡೆಯದಂತೆ ಸದಾ ಜಾಗೃತರಾಗಿರಬೇಕು ಎಂದು ತಾಕೀತು ಮಾಡಿರುವ ಅರಣ್ಯ ಸಚಿವ ರಮಾನಾಥ ರೈ, ಅಧಿಕಾರಿಗಳು ಎಷ್ಟು ಬಾರಿ ಕಾಡಿಗೆ ಹೋಗಿ ಗಸ್ತು ನಡೆಸಿದ್ದಾರೆ ಎಂಬುದನ್ನು ಪರಿಶೀಲಿಸಲು ವರದಿ ನೀಡುವಂತೆ ಸೂಚಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ತಕ್ಷಣ ನಂದಿಸಲು ಅನುಕೂಲವಾಗುವಂತೆ ಕಾಡಂಚಿನಲ್ಲಿ ಆಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸಬೇಕು. ಇದಕ್ಕೆ ಸರ್ಕಾರ ಅಗತ್ಯ ನೆರವು ಒದಗಿಸಲಿದೆ. ಬೆಂಕಿ ಆರಿಸಲು ಸಿಬ್ಬಂದಿಗೆ ಮತ್ತು ಸ್ಥಳೀಯರಿಗೆ ಹೆಚ್ಚಿನ ತರಬೇತಿ ನೀಡಬೇಕು ಎಂದೂ ಸೂಚಿಸಿದರು.

ರಾಷ್ಟ್ರೀಯ ಅಭಯಾರಣ್ಯಗಳಲ್ಲಿ ವನ್ಯಜೀವಿಗಳಿಗೆ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ. ಕೊಳವೆ ಬಾವಿ ಕೊರೆಯಿಸಿ ಅದರಿಂದ ಕೆರೆಗಳನ್ನು ತುಂಬಿಸಬೇಕು ಮತ್ತು ಅಲ್ಲಲ್ಲಿ ಚೆಕ್‌ ಡ್ಯಾಂ ನಿರ್ಮಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಕೆಲವು ಭಾಗಗಳಲ್ಲಿ ವ್ಯಾಪಕವಾಗಿ ಬೆಳೆದಿರುವ ಲಂಟಾನ ಸಸ್ಯ ಪ್ರಬೇಧವು ಸಮಸ್ಯೆ ಉಲ್ಬಣಗೊಳ್ಳುವಂತೆ ಮಾಡಿದೆ. ರಾಷ್ಟ್ರೀಯ ನೀತಿ ಮತ್ತು ಕೋರ್ಟ್‌ ಆದೇಶ ಪ್ರಕಾರ ಕಾಡಿನಲ್ಲಿ ಬಿದ್ದ ಮರಗಳನ್ನು ತೆರವು ಮಾಡುವಂತಿಲ್ಲ. ಇದರಿಂದಲೂ ಬೆಂಕಿ ವ್ಯಾಪಕವಾಗಿ ಹಬ್ಬುತ್ತದೆ ಎಂದು ಅಧಿಕಾರಿಗಳು ವಿವರಿಸಿದರು. ಕಳೆದ ಮೂರು ವರ್ಷಗಳಲ್ಲಿ ಮಳೆ ಪ್ರಮಾಣ ಕುಸಿದಿದೆ. ಅರಣ್ಯ ಪ್ರದೇಶದಲ್ಲಿ ತೇವಾಂಶ ಕೊರತೆಯಿಂದ ಹುಲ್ಲು ಮತ್ತು ಗಿಡಗಂಟಿಗಳು ಒಣಗಿವೆ. ಈ ಹಿಂದಿನ ಬೇಸಿಗೆಗೆ ಹೋಲಿಸಿದರೆ, ಈ ಬಾರಿ ಅರಣ್ಯವನ್ನು ಬೆಂಕಿಯಿಂದ ರಕ್ಷಿಸುವುದು ಸವಾಲಿನ ಕೆಲಸ ಎಂದು ಅಧಿಕಾರಿಗಳು ವಿವರಿಸಿದರು.

Leave a Reply

comments

Related Articles

error: