ಮೈಸೂರು

ಕಥೆಯ ಹಂಗಿಲ್ಲದೆ ಕಾವ್ಯ ರಚಿಸುವುದು ಸವಾಲಿನ ಕೆಲಸ, ಆದರೆ ಅದನ್ನು ಯಶಸ್ವಿಯಾಗಿ ನಿರ್ವಹಿಸಿದವರು ಡಿ.ವಿ.ಜಿ : ಪ್ರೊ. ಎನ್.ಎಂ. ನೀಲಗಿರಿ ತಳವಾರ ಬಣ್ಣನೆ

ಮೈಸೂರು,ಡಿ.28:- ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಮೈಸೂರು, ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ, ಮೈಸೂರು ಹಾಗೂ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು, ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ  “ಡಿ.ವಿ.ಜಿ. ವಿರಚಿತ ಮಂಕುತಿಮ್ಮನ ಕಗ್ಗ-75 ಅವಲೋಕನ” ಎಂಬ ಕಾರ್ಯಕ್ರಮವನ್ನು ನಿನ್ನೆ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು  ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕರಾದ  ಪ್ರೊ. ಎನ್.ಎಂ. ನೀಲಗಿರಿ ತಳವಾರ ಮಾತನಾಡಿ  ಡಿ.ವಿ.ಜಿ ಯರವರು ಕನ್ನಡ ಸಾರಸ್ವತ ಲೋಕದಲ್ಲಿ ಅಗ್ರಮಾನ್ಯ ವ್ಯಕ್ತಿತ್ವವನ್ನು ಹೊಂದಿದವರು. ದೇವನಹಳ್ಳಿಯ ಈ ಪ್ರತಿಭೆ 19ನೇ ವಯಸ್ಸಿಗೆ ಪತ್ರಿಕಾ ಮಾಧ್ಯಮಕ್ಕೆ ಪಾದಾರ್ಪಣೆ ಮಾಡಿ ಹಲವಾರು ಪತ್ರಿಕೆಗಳಲ್ಲಿ ಕರ್ತವ್ಯ ನಿರ್ವಹಿಸಿ ತದನಂತರ ತಮ್ಮದೇ ಪತ್ರಿಕೆಗಳನ್ನು ಹೊರತಂದರು. ಡಿ.ವಿ.ಜಿ ಯವರು ಪತ್ರಿಕೋದ್ಯಮದ ಜೊತೆಗೆ ಸಾಹಿತ್ಯ ಲೋಕದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ ಎಂದರು.

ಮಂಕುತಿಮ್ಮನ ಕಗ್ಗ ಕನ್ನಡದಲ್ಲಿ ಅಭಿಜಾತ ಸಾಹಿತ್ಯ ಕೃತಿಯಾಗಿದೆ. ಇದು ಲೌಕಿಕ ಮತ್ತು ಅಲೌಕಿಕ ವಿಷಯಗಳ ಸಂಗಮವಾಗಿದೆ. 945 ಚೌಪದಿಗಳ ಕಗ್ಗವು ಎಲ್ಲಾ ಬಗೆಯ ತತ್ವ, ಚಿಂತನೆಗಳನ್ನು ಒಳಗೊಂಡಿದ, ಕಥೆಯ ಹಂಗಿಲ್ಲದೆ ಕಾವ್ಯ ರಚಿಸುವುದು ಸವಾಲಿನ ಕೆಲಸ, ಆದರೆ ಅದನ್ನು ಯಶಸ್ವಿಯಾಗಿ ನಿರ್ವಹಿಸಿದವರು ಡಿ.ವಿ.ಜಿ ಯವರು. ಅವ್ಯಕ್ತ ಲೋಕದಿಂದ ವ್ಯಕ್ತಲೋಕಕ್ಕೆ ಬದುಕಿನ  ಆಯಾಮವನ್ನು ಜಿಜ್ಞಾಸೆಯ ನೆಲೆಯಲ್ಲಿ ತಮ್ಮ ಚಿಂತನೆಗಳನ್ನು ಕಗ್ಗದಲ್ಲಿ ವ್ಯಕ್ತಪಡಿಸಿದ್ದಾರೆ. ಪರಂಪರೆಯನ್ನು ಪ್ರತಿಪಾದಿಸುವುದರ ಜೊತೆಗೆ ಆಧುನಿಕ ಮೌಲ್ಯಗಳನ್ನು ಒತ್ತಿ ಹೇಳಿದ್ದಾರೆ. ವಸ್ತುವಿನ ಒಂದೇ ಮಗ್ಗಲನ್ನು ನೋಡದೆ ಹಲವಾರು ಆಯಾಮಗಳಲ್ಲಿ ಕಟ್ಟಿಕೊಟ್ಟಿದ್ದಾರೆ.  ಮುಕ್ತಿ ಎಂಬುದು ಬದುಕಿನಿಂದ ಬದುಕಿರುವಾಗಲೇ ಬಿಡುಗಡೆಯನ್ನು ಹೊಂದುವುದಾಗಿದೆ ಎಂದಿದ್ದಾರೆ.  ಬದುಕು ಪರಿಪೂರ್ಣವಾಗುವುದೇ ಮುಕ್ತಿ ಎನ್ನುತ್ತಾರೆ. ಮಂಕುತಿಮ್ಮನ ಕಗ್ಗವನ್ನು ಓದದ ಕನ್ನಡಿಗರ ಜೀವನವು ವ್ಯರ್ಥ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಗಮಕ ವಿದ್ವಾಂಸರಾದ ವಿದ್ವಾನ್ ಕೃ. ರಾಮಚಂದ್ರರವರು ಮಂಕುತಿಮ್ಮನ ಕಗ್ಗ ಕುರಿತು ಗಮಕ ವಾಚನ ಮಾಡಿ ವಿವರಣೆಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ     ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ  ಅಧ್ಯಕ್ಷ ಎಸ್. ರಾಮಪ್ರಸಾದ್  ಮಾತನಾಡಿ  ಮುಕ್ತಕ ಸಾಹಿತ್ಯ ಮತ್ತು ಮಂಕುತಿಮ್ಮನ ಕಗ್ಗದ ಪ್ರಾಮುಖ್ಯತೆಯನ್ನು  ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಚಂದ್ರಶೇಖರ್  ಕಾರ್ಯಕ್ರಮದ ಉದ್ದೇಶ ಮತ್ತು ಆಶಯ ಕುರಿತು ಪ್ರಾಸ್ತಾವಿಕ ನುಡಿಯನ್ನಾಡಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು  ಹೊಸಮಠದ  ಶ್ರೀ ಚಿದಾನಂದಮಹಾಸ್ವಾಮಿಗಳು ವಹಿಸಿದ್ದರು.  ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಶಾರದ, ಉಪ ಪ್ರಾಂಶುಪಾಲರಾದ ಡಾ.ಜಿ.ಪ್ರಸಾದಮೂರ್ತಿ ಉಪಸ್ಥಿತರಿದ್ದರು.

ಶಯನ ಪ್ರಾರ್ಥಿಸಿದರೆ,   ಬಸಪ್ಪ ಹೆಚ್.ಬಿ. ವಂದಿಸಿದರು. ಸಂಧ್ಯಾರಾಣಿ ನಿರೂಪಿಸಿದರು. (ಎಸ್.ಎಚ್)

Leave a Reply

comments

Related Articles

error: