ಕ್ರೀಡೆ

ಕೃಷ್ಣಮಾಚಾರಿ ಶ್ರೀಕಾಂತ್, ಅಂಜುಮ್ ಚೋಪ್ರಾಗೆ ಸಿಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ

ನವದೆಹಲಿ,ಡಿ.28-ಭಾರತೀಯ ಕ್ರಿಕೆಟ್‌ಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ 1983ರಲ್ಲಿ ಭಾರತದ ಚೊಚ್ಚಲ ವಿಶ್ವಕಪ್ ವಿಜೇತ ತಂಡದ ಸದಸ್ಯ ಕೃಷ್ಣಮಾಚಾರಿ ಶ್ರೀಕಾಂತ್, ಮಾಜಿ ನಾಯಕಿ ಅಂಜುಮ್ ಚೋಪ್ರಾ ಅವರು ಸಿಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2019ನೇ ಸಾಲಿನ ಸಿಕೆ ನಾಯ್ಡು ಪ್ರಶಸ್ತಿ ಸಾಧಕರನ್ನು ಹೆಸರಿಸಿದೆ. ಜನವರಿ 12 ರಂದು ಮುಂಬೈನಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಭಾರತ ತಂಡದ ಮಾಜಿ ಆಕ್ರಮಣಕಾರಿ ಆರಂಭಿಕ ಆಟಗಾರನಾಗಿರುವ ಶ್ರೀಕಾಂತ್, 1981ರಿಂದ 1992ರ ವರೆಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 60ರ ಹರೆಯದ ಶ್ರೀಕಾಂತ್, 43 ಟೆಸ್ಟ್‌ಗಳಲ್ಲಿ 2062 ರನ್ ಗಳಿಸಿದ್ದರು. ಇದರಲ್ಲಿ ಎರಡು ಶತಕ ಹಾಗೂ 12 ಅರ್ಧಶತಕಗಳು ಸೇರಿವೆ.

ಶ್ರೀಕಾಂತ್ ಹೆಲ್ಮೆಟ್ ಧರಿಸದೆಯೇ ವಿಶ್ವ ದಿಗ್ಗಜ ವೇಗದ ಬೌಲರ್‌ಗಳನ್ನು ಹುಕ್ ಶಾಟ್‌ಗಳ ಮೂಲಕ ಬೆರಗಾಗಿಸಿದ್ದರು. 1983 ವಿಶ್ವಕಪ್ ಫೈನಲ್‌ನಲ್ಲಿ 38 ರನ್ ಗಳಿಸುವ ಮೂಲಕ ಟಾಪ್ ಸ್ಕೋರರ್ ಎನಿಸಿದ್ದರು. 1985ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಹೆಡ್ಜಸ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲೂ ಅರ್ಧಶತಕ ಸಾಧನೆ ಮಾಡಿದ್ದರು.

1989ನೇ ಇಸವಿಯಲ್ಲಿ ಪಾಕಿಸ್ತಾನ ಪ್ರವಾಸದಲ್ಲಿ ಶ್ರಿಕಾಂತ್‌ರನ್ನು ನಾಯಕರನ್ನಾಗಿ ಘೋಷಿಸಲಾಗಿತ್ತು. ಇಲ್ಲಿ ಗಮನಾರ್ಹ ಸಂಗತಿಯೆಂದರೆ ಅದೇ ಪ್ರವಾಸದಲ್ಲಿ ಸಿಡಿಲಮರಿ ಸಚಿನ್ ತೆಂಡೂಲ್ಕರ್ ಡೆಬ್ಯು ಮಾಡಿದ್ದರು. 1992ರಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿ ನಡೆದ ವಿಶ್ವಕಪ್ ಬಳಿಕ ಶ್ರೀಕಾಂತ್ ನಿವೃತ್ತಿ ಘೋಷಿಸಿದರು.

2009-12ರ ಅವಧಿಯಲ್ಲಿ ರಾಷ್ಟ್ರೀಯ ಆಯ್ಕೆ ಸಮಿತಿಯ ಮುಖ್ಯಸ್ಥ ಸ್ಥಾನವನ್ನು ವಹಿಸಿದರು. ಶ್ರೀಕಾಂತ್ ಆಯ್ಕೆ ಮಾಡಿದ ತಂಡವೇ 2011ರ ವಿಶ್ವಕಪ್ ಜಯಿಸಿತ್ತು ಎಂಬುದು ಗಮನಾರ್ಹವೆನಿಸುತ್ತದೆ. ಇಂಡಿಯನ್ ಪ್ರೀಪಿಯರ್ ಲೀಗ್‌ ಆರಂಭಿಕ ಕೆಲವು ವರ್ಷಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜತೆ ಸಹಯೋಗ ಹೊಂದಿರುವ ಶ್ರೀಕಾಂತ್, ವೀಕ್ಷಕ ವಿವರಣೆಗಾರನ ಜವಾಬ್ದಾರಿಯನ್ನು ವಹಿಸಿದ್ದಾರೆ.

ಇನ್ನು 42ರ ಹರೆಯದ ಅಂಜುಮ್ ಚೋಪ್ರಾ, 12 ಟೆಸ್ಟ್ ಪಂದ್ಯಗಳಲ್ಲಿ 548 ರನ್ ಗಳಿಸಿದ್ದಾರೆ. ಮಿಥಾಲಿ ರಾಜ್ ಆಗಮನಕ್ಕಿಂತಲೂ ಮೊದಲು ಅಂಜುಮ್, ಭಾರತದ ಮಹಿಳಾ ಕ್ರಿಕೆಟ್‌ನ ಕೈಗನ್ನಡಿಯಾಗಿದ್ದರು. ಹಾಗೆಯೇ 127 ಏಕದಿನ ಪಂದ್ಯಗಳನ್ನು ಆಡಿದ್ದು, ಶತಕ ಹಾಗೂ 18 ಅರ್ಧಶತಕಗಳನ್ನು ಬಾರಿಸಿದ್ದಾರೆ. 2015 ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ತಂಡದ ಅಂಗವಾಗಿದ್ದರು. (ಎಂ.ಎನ್)

Leave a Reply

comments

Related Articles

error: