ಮೈಸೂರು

ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು: ಬಿ.ಎಸ್.ಪಾಟೀಲ್

ಮೈಸೂರು,ಡಿ.28-ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಬೇಕು ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹೇಳಿದರು.

ನಗರದ ಸರಸ್ವತಿಪುರಂನಲ್ಲಿರುವ ಜೆಎಸ್ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 12ನೇ ಪದವೀಧರ ದಿನಾಚರಣೆಯಲ್ಲಿ ಮಾತನಾಡಿದ ಅವರು, ನಾನು ಬಡವ, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದೆ. ಹೀಗಾಗಿ ನನಗೆ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂಬ ಭ್ರಮೆಯಿಂದ ಹೊರ ಬರಬೇಕು. ಸಾಧಿಸುವ ಛಲ ಇದ್ದರೆ ನಿಶ್ಚಿತವಾಗಿಯೂ ಸಾಧನೆ ಮಾಡಬಹುದು. ಆ ನಿಟ್ಟಿನಲ್ಲಿ ನೀವು ಮನಸ್ಸು ಮಾಡಬೇಕು. ವಿದ್ಯಾರ್ಥಿಗಳು ತಮ್ಮ ಮೇಲಿನ ನಂಬಿಕೆಗಳನ್ನು ಸೀಮಿತಗೊಳಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದರು.

ಜೀವನದಲ್ಲಿ ಉತ್ತಮ ಮೌಲ್ಯ, ನೈತಿಕತೆ ಅಳವಡಿಸಿಕೊಂಡರೆ ನಿಮ್ಮ ಕಡೆಗೆ ಯಾರು ಬೊಟ್ಟು ಮಾಡುವುದಿಲ್ಲ. ಇದು ಇಲ್ಲದೆ ಹೋದರೆ ನೀವು ಎಷ್ಟೇ ಎತ್ತರಕ್ಕೆ ಏರಿದರೂ ವ್ಯರ್ಥ ಎಂದ ಅವರು, ನಾವು ಯಾವುದೇ ರಂಗದಲ್ಲಿ ತೊಡಗಿಸಿಕೊಂಡರೂ ಅದರಲ್ಲಿ ಶ್ರೇಷ್ಠತೆ ಸಾಧಿಸಬೇಕು. ಶ್ರೇಷ್ಠತೆ ಸಾಧಿಸಲು ಕಠಿಣ ಪರಿಶ್ರಮ, ಬದ್ಧತೆ, ಹಾಗೂ ಶ್ರದ್ಧೆ ಮುಖ್ಯ. ದೇಶದ ಪ್ರತಿಯೊಬ್ಬ ವ್ಯಕ್ತಿ ವೈಯಕ್ತಿವಾಗಿ ಸಾಧಿಸಿ ತೋರಿಸಬೇಕು. ಆಗ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಪ್ರತಿಯೊಬ್ಬರಲ್ಲೂ ಸಾಮರ್ಥ್ಯವಿರುತ್ತದೆ. ಆ ಸಾಮರ್ಥ್ಯವನ್ನು ಅರಿತು ಸಾಧನೆಯತ್ತ ಮುಖ ಮಾಡಬೇಕು. ಅದರಿಂದ ದೇಶಕ್ಕೂ ಒಳಿತಾಗುತ್ತದೆ ಎಂದರು.

ಪದಕ ವಿಜೇತರು: ಎಂ.ಆಶಾರಾಣಿ (ಬಿ.ಎ), ವಿ.ಎನ್. ಸ್ಪೂರ್ತಿ (ಬಿಎಸ್ಸಿ), ಬಿ.ಆರ್. ನಾಗರತ್ನ (ಬಿ.ಕಾಂ), ನಿಧಾ ಫಾತಿಮಾ ಭಾವನಗರಿ (ಬಿಬಿಎ), ಯು.ಸುಮಾ (ಬಿಸಿಎ), ಎಸ್. ಗಗನಾ (ಎಂಎ ಅರ್ಥಶಾಸ್ತ್ರ), ಕೆ.ಕೆ.ಅಕ್ಷತಾ (ಎಂ.ಕಾಂ), ಬಿ.ಎಸ್.ಅನುಷಾ (ಎಂಎಸ್ಸಿ ರಸಾಯನಶಾಸ್ತ್ರ) ಪ್ರಥಮ ಸ್ಥಾನದೊಂದಿಗೆ ಪದಕ ಪಡೆದರು.

ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ ಮಠ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಶೋಭಾ ಪಾಟೀಲ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಬಿ.ಆರ್.ಶಿವಮೂರ್ತಿ, ಅಕಾಡೆಮಿಕ್ ಡೀನ್ ಡಾ.ಎಚ್.ಬಿ.ಸುರೇಶ್, ಪ್ರಾಂಶುಪಾಲ ಕೆ.ವಿ.ಸುರೇಶ್ ಇತರರು ಉಪಸ್ಥಿತರಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: