ದೇಶಪ್ರಮುಖ ಸುದ್ದಿ

ಅಯೋಧ್ಯೆ: ಮಸೀದಿ ನಿರ್ಮಾಣಕ್ಕೆ ಸ್ಥಳ ಗುರುತಿಸಿದ ಯುಪಿ ಸರ್ಕಾರ

ಲಖನೌ,ಡಿ.31-ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಐದು ಸ್ಥಳಗಳನ್ನು ಉತ್ತರಪ್ರದೇಶ ಸರ್ಕಾರ ಗುರುತು ಮಾಡಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಮಸೀದಿ ನಿರ್ಮಾಣಕ್ಕೆ ಉತ್ತರಪ್ರದೇಶ ಸರ್ಕಾರ ಮಿರ್ಜಾಪುರ್, ಶಂಶುದ್ದೀನ್ ಪುರ್ ಮತ್ತು ಚಾಂದ್ ಪುರ್ ನಲ್ಲಿ ಐದು ಸೂಕ್ತ ನಿವೇಶನಗಳನ್ನು ಗುರುತಿಸಿದ್ದು, ಈ ಪ್ರದೇಶ ಪವಿತ್ರ ಸ್ಥಳ ಎಂದು ಗುರುತಿಸಿರುವ ಪಂಚ್ ಕೋಶಿ ಪರಿಕ್ರಮದಿಂದ ಸುಮಾರು 15 ಕಿಲೋ ಮೀಟರ್ ದೂರದಲ್ಲಿದೆ ಎಂದು ತಿಳಿಸಿದೆ.

ಸುಪ್ರೀಂಕೋರ್ಟ್ ಆದೇಶದಂತೆ ಸುನ್ನಿ ವಕ್ಫ್ ಬೋರ್ಡ್ ಟ್ರಸ್ಟಿಗಳು ಈ ಸ್ಥಳವನ್ನು ಪರಿಶೀಲಿಸಿ ಮಸೀದಿ ನಿರ್ಮಾಣಕ್ಕೆ ಯಾವ ಸ್ಥಳ ಸೂಕ್ತ ಎಂಬುದನ್ನು ತಿಳಿಸಲಿ ಎಂದು ಉತ್ತರಪ್ರದೇಶ ಸರ್ಕಾರ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.

ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನವೆಂಬರ್ 9 ರಂದು ತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್‌ನ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್ ನೇತೃತ್ವದ ಪೀಠ, ಅಯೋಧ್ಯಾ ವಿವಾದದ ಅಂತಿಮ ತೀರ್ಪು ನೀಡಿತ್ತು.

ಅಯೋಧ್ಯೆಯ ವಿವಾದಿತ ಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂದು ತೀರ್ಪು ನೀಡಿತ್ತು. ಬಾಬ್ರಿ ಮಸೀದಿ ನಿರ್ಮಾಣಕ್ಕೆ ಅಯೋಧ್ಯೆಯಲ್ಲೇ 5 ಎಕರೆ ಭೂಮಿ ನೀಡಬೇಕೆಂದೂ ಪೀಠ ಹೇಳಿತ್ತು. ಅಷ್ಟೇ ಅಲ್ಲ, ಮತ್ತೊಬ್ಬ ಪ್ರತಿವಾದಿ ನಿರ್ಮೋಹಿ ಅಖಾಡಕ್ಕೆ ಅಯೋಧ್ಯಾ ರಾಮಮಂದಿರ ನಿರ್ಮಾಣ ಟ್ರಸ್ಟ್‌ನಲ್ಲಿ ಪ್ರಮುಖ ಸ್ಥಾನ ನೀಡಬೇಕೆಂದು ತೀರ್ಪು ನೀಡಿತ್ತು.

ಸುಪ್ರೀಂ ತೀರ್ಪನ್ನು ಮರುಪರಿಶೀಲಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ 18 ಅರ್ಜಿಗಳನ್ನು ಕಳೆದ ಡಿಸೆಂಬರ್ 12 ರಂದು ನ್ಯಾಯಾಲಯ ವಜಾ ಮಾಡಿತ್ತು. (ಎಂ.ಎನ್)

Leave a Reply

comments

Related Articles

error: