
ಪ್ರಮುಖ ಸುದ್ದಿ
ಆಯುರ್ವೇದ ವೈದ್ಯ ಪದ್ಧತಿ ಕುರಿತು ಜಾಗೃತಿ ಮೂಡಿಸಿ : ಎಡಿಸಿ ಡಾ.ಸ್ನೇಹಾ ಸಲಹೆ
ರಾಜ್ಯ(ಮಡಿಕೇರಿ)ಜ.1:- ಇತ್ತೀಚಿನ ದಿನಗಳಲ್ಲಿ ಆಯುರ್ವೇದ ವೈದ್ಯ ಪದ್ಧತಿಗೆ ಹೆಚ್ಚಿನ ಮಹತ್ವ ಇದ್ದು, ಈ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ದೊರೆಯುವಂತಾಗಬೇಕು. ಆರ್ಯುವೇದ ವೈದ್ಯ ಪದ್ಧತಿಯಿಂದ ಸಾಕಷ್ಟು ಪ್ರಯೋಜನಗಳಿದ್ದು, ಇವುಗಳ ಬಗ್ಗೆ ಜನ ಸಾಮಾನ್ಯರಿಗೆ ಮಾಹಿತಿ ನೀಡುವಂತಾಗಬೇಕು ಎಂದು ಎಂದು ಡಾ.ಸ್ನೇಹ ಅವರು ಸಲಹೆ ನೀಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ವತಿಯಿಂದ 2019-20ನೇ ಸಾಲಿನ ಐಇಸಿ ಯೋಜನೆಯಡಿ ನಗರದ ಜಿಲ್ಲಾ ಆಯುಷ್ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಆಯುಷ್ ವಿಚಾರ ಸಂಕಿರಣ(ಟಿಎಸ್ಪಿ) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ರಾಮಚಂದ್ರ ಅವರು ಮಾತನಾಡಿ ಆಯುಷ್ ವೈದ್ಯ ಪದ್ಧತಿ ಮೂಲಕ ನಾನಾ ರೀತಿಯ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದಾಗಿದೆ. ಈ ಸಂಬಂಧ ಆಯುಷ್ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಜೀರ್ಣ ಶಕ್ತಿಗೆ ತಕ್ಕಂತೆ ಆಹಾರ ಉಪಯೋಗಿಸಬೇಕು. ಪ್ರತಿನಿತ್ಯದ ದಿನಚರಿಯನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಆಯುರ್ವೇದ ಪದ್ಧತಿಯಿಂದ ತಿಳಿಯಬಹುದು. ಇದರಿಂದ ಉತ್ತಮ ಆರೋಗ್ಯ ಪಡೆಯಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.
ವೈದ್ಯರಾದ ಡಾ.ಶ್ರೀನಿವಾಸ್ ಅವರು ಮಾತನಾಡಿ ಆಯುರ್ವೇಧ ವೈದ್ಯ ಪದ್ಧತಿಯಿಂದ ಸಾಕಷ್ಟು ಪ್ರಯೋಜನಗಳಿದ್ದು, ಅದನ್ನು ನಿಯಮಿತವಾಗಿ ಅನುಸರಿಸಬೇಕು ಎಂದು ಅವರು ಸಲಹೆ ಮಾಡಿದರು. ಡಾ.ಶೈಲಜಾ, ಡಾ.ಈಶ್ವರಿ, ಡಾ.ಶುಭ ಇತರರು ಹಾಜರಿದ್ದರು. (ಕೆಸಿಐ,ಎಸ್ಎಚ್)