ಪ್ರಮುಖ ಸುದ್ದಿ

ಅಟ್ರಾಸಿಟಿ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲು ಆಗ್ರಹ

ರಾಜ್ಯ( ಮಡಿಕೇರಿ) ಜ.1:- ದಲಿತನೆಂಬ ಕಾರಣಕ್ಕೆ ಲೋಕೋಪಯೋಗಿ ಇಲಾಖೆಯ ಕೆಲವು ಸಿಬ್ಬಂದಿಗಳು ಸಿದ್ದೇಶ್ವರನ್ ಅವರ ಮೇಲೆ ದೌರ್ಜನ್ಯ ಎಸಗಿದ್ದು, ಆರೋಪಿಗಳ ವಿರುದ್ದ ಅಟ್ರಾಸಿಟಿ ಕಾಯ್ದೆಯಡಿ ಕಠಿಣ ಕ್ರಮ ಜರುಗಿಸಬೇಕು ಎಂದು ದಲಿತ ಮುಖಂಡ ಟಿ.ಈ.ಸುರೇಶ್ ಅವರು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗುತ್ತಿಗೆದಾರರೊಬ್ಬರನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿರುವರೆನ್ನಲಾದ ಲೋಕೋಪಯೋಗಿ ಇಲಾಖೆಯ ಐದು ಮಂದಿ ಸಿಬ್ಬಂದಿಗಳ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಪರಿಶಿಷ್ಟ ಜಾತಿ-ಪಂಗಡ ದೌರ್ಜನ್ಯ (ಅಟ್ರಾಸಿಟಿ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದರು.
ನಗರದ ಸುದರ್ಶನ ವಸತಿಗೃಹದ ಹಿಂಭಾಗದ ನಿವಾಸಿ ಸಿ.ಪಿ.ಸಿದ್ದೇಶ್ವರನ್ ಅವರು ನೀಡಿದ ದೂರಿನ ಅನ್ವಯ ನಗರ ಠಾಣೆ ಪೊಲೀಸರು ಐವರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಗುತ್ತಿಗೆದಾರರಾಗಿರುವ ಸಿದ್ದೇಶ್ವರನ್ ಅವರು ತಾವು ನಿರ್ವಹಿಸಿದ ಕಾಮಗಾರಿಯ ಬಿಲ್ ಪಾವತಿಸುವಂತೆ ಕೇಳಲು ನ.30ರಂದು ಲೋಕೋಪಯೋಗಿ ಇಲಾಖೆಯ ಕಚೇರಿಗೆ ತೆರಳಿದ ಸಂದರ್ಭ ಕೆಲವು ಸಿಬ್ಬಂದಿಗಳು ಜಾತಿಯ ಬಗ್ಗೆ ಪ್ರಸ್ತಾಪಿಸಿ ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲದೆ ಏಕಾಏಕಿ ಕುತ್ತಿಗೆಗೆ ಕೈಹಾಕಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಅದಾದ ಬಳಿಕ ಡಿ.23ರಂದು ಮತ್ತೆ ಬಿಲ್ ಬಗ್ಗೆ ವಿಚಾರಿಸಲು ತೆರಳಿದಾಗಲೂ ಮತ್ತೆ ಅದೇ ರೀತಿಯಾಗಿ ವರ್ತಿಸಿದ್ದಲ್ಲದೆ, ಕೆಲವು ಪತ್ರಗಳಿಗೆ ಒತ್ತಾಯಪೂರ್ವಕವಾಗಿ ಸಹಿ ಪಡೆದಿದ್ದಾರೆ ಎಂದು ಸುರೇಶ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮುದ್ದುರಾಜ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: