ಮೈಸೂರು

2019ಕ್ಕೆ ಗುಡ್ ಬೈ 2020ಕ್ಕೆ ವೆಲ್ ಕಮ್ : ಸಡಗರ ಸಂಭ್ರಮದಿಂದ ನೂತನ ವರ್ಷ ಬರಮಾಡಿಕೊಂಡ ಮೈಸೂರಿನ ಜನತೆ

ಮೈಸೂರು, ಜ.1:- ಸಾಂಸ್ಕೃತಿಕ ನಗರಿ ಮೈಸೂರಿನ ಜನತೆ ಮಧ್ಯರಾತ್ರಿ 12ಗಂಟೆಗೆ ಸರಿಯಾಗಿ 2019ಕ್ಕೆ ಗುಡ್ ಬೈ ಹೇಳಿ 2020 ನ್ನು ವೆಲ್ ಕಮ್ ಮಾಡಿಕೊಂಡರು.

ಹೊಸ ವರ್ಷ ಪ್ರಯುಕ್ತ ನಗರದಲ್ಲಿ ಮಧ್ಯರಾತ್ರಿವರೆಗೆ ಸಡಗರ, ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ನಗರಕ್ಕೆ ಆಗಮಿಸಿ ಈ ಸಂಭ್ರಮದಲ್ಲಿ ಭಾಗಿಯಾದರು.

2019ಕ್ಕೆ ಬೀಳ್ಕೊಟ್ಟು 2020 ಅನ್ನು ಸ್ವಾಗತಿಸಲು ನಗರದ ಹಲವು ಹೋಟೆಲ್, ಕ್ಲಬ್‌ಗಳಲ್ಲಿ ರಾತ್ರಿ ವಿಶೇಷ ಮನರಂಜನಾ ಕಾರ್ಯಕ್ರ ಮಗಳನ್ನು ಹಮ್ಮಿಕೊಳ್ಳಲಾಗಿತ್ತು. ರಾತ್ರಿ 12 ಗಂಟೆ ಆಗುತ್ತಿದ್ದಂತೆಯೇ ಪಟಾಕಿಗಳನ್ನು ಸಿಡಿಸಿ ಪರಸ್ಪರ ಹೊಸ ವರ್ಷದ ಶುಭಾಶಯ ಕೋರಿದರು.

ಹೊಸ ವರ್ಷ ಆಚರಣೆಗೆ ನಗರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ನಗರದ ಅರಮನೆ ಆವರಣ, ಮೃಗಾಲ ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡುಬಂದರು. ನಗರದ ಬಹುತೇಕ ಹೋಟೆಲ್‌ಗಳು ಭರ್ತಿಯಾಗಿತ್ತು. ಹಲವಾರು ಹೋಟೆಲ್‌ಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಪ್ರಯುಕ್ತ ಹೋಟೆಲ್‌ಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತಿತ್ತು. ನಗರದ ವಿವಿಧ ಚರ್ಚ್‌ಗಳಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಪ್ರಾರ್ಥನೆ, ಪೂಜೆ ನಡೆಯಿತು.

ಕೇವಲ ಹೋಟೆಲ್‌ಗಳಲ್ಲಿ ಮಾತ್ರವಲ್ಲದೆ ನಗರದ ವಿವಿಧೆಡೆ ಹೊಸ ವರ್ಷದ ಸಂಭ್ರಮ ಮನೆ ಮಾಡಿತ್ತು. ಸಾಕಷ್ಟು ಜನರು ಮನೆಗಳಲ್ಲಿಯೇ ಹೊಸ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಂಡರೆ ಕೆಲವರು ಬಯಲಿನಲ್ಲಿ, ರಸ್ತೆಗಳಲ್ಲಿ ಹೊಸ ವರ್ಷದ ಸಂಭ್ರಮ ಹಂಚಿಕೊಂಡರು.

ಹೊಸ ವರ್ಷಾಚರಣೆ ಸಂದರ್ಭ ಸಂಭವಿಸಬಹುದಾದ ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಲು ನಗರದಲ್ಲಿರುವ 59 ಸಿಸಿ ಕ್ಯಾಮರಾಗಳ ಜತೆಗೆ ಹೊಸದಾಗಿ 250 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ರಿಂಗ್‌ರೋಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೋಜು ಮಸ್ತಿಯಲ್ಲಿ ತೊಡಗಿದ್ದ ಹಿನ್ನೆಲೆಯಲ್ಲಿ ರಿಂಗ್‌ರೋಡ್‌ನಲ್ಲಿ ಹೈವೇ ಪೆಟ್ರೋಲ್ ವಾಹನ ಮತ್ತು ಇಂಟರ್‌ಸೆಪ್ಟರ್ ವಾಹನಗಳು ಗಸ್ತು ತಿರುಗಿ ಪುಂಡರಿಗೆ ಎಚ್ಚರಿಕೆ ನೀಡುವ ಕಾರ್ಯ ಮಾಡಿದವು.

ನಗರದಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ಶುಭ ಕೋರುವ ನೆಪದಲ್ಲಿ ಯಾರಿಗೂ ಕಿರಿಕಿರಿ ಉಂಟು ಮಾಡದಂತೆ ತಡೆಯಲು 18 ವಿಶೇಷ ಕಾರ್ಯಪಡೆ ತಂಡ, ಮಹಿಳೆಯರ ರಕ್ಷಣೆಗಾಗಿ 3 ವಿಶೇಷ ತಂಡ ಹಾಗೂ 4 ಪಿಂಕ್ ಗರುಡ ತಂಡ ನಿಯೋಜಿಸಲಾಗಿತ್ತು. ಪೊಲೀಸರ ತಂಡ ನಗರದ ವಿವಿಧ ಹೋಟೆಲ್‌ಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹೊಸ ವರ್ಷಾಚರಣೆ ಸಂದರ್ಭ ಕುಡಿದು ವಾಹನ ಚಾಲನೆ ಮಾಡುವವರ ಸಂಖ್ಯೆಯೇ ಹೆಚ್ಚು. ಇಂಥವರನ್ನು ಪತ್ತೆ ಪೊಲೀಸರು ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿದರು. ಸಾಕಷ್ಟು ಜನರು ಕುಡಿದು ವಾಹನ ಚಾಲನೆ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದರು.

ಕೆಲವು ಯುವಕರು ಮೋಜು ಮಸ್ತಿ  ಮದ್ಯದ ಅಮಲಿನಲ್ಲಿ ತೇಲಿದರೆ, ಇನ್ಕೆಲವರು ಫ್ಯಾಷನ್ ಷೋ, ಡ್ಯಾನ್ಸ್, ಡಿಜೆ. ಇತ್ಯಾದಿಗಳ ಮೂಲಕ ಹೊಸ ವರ್ಷ ಬರಮಾಡಿಕೊಂಡರು. ರಸ್ತೆ ತುಂಬೆಲ್ಲ ಶುಭಾಶಯ ತಿಳಿಸಿ ಸಂಭ್ರಮಿಸಿದರು.  ಇದೇ ವೇಳೆ ಕರ್ತವ್ಯದ ವೇಳೆಯಲ್ಲೂ ಪೋಲಿಸ್ ಸಿಬ್ಬಂದಿಯೋರ್ವರು ಜನ್ಮದಿನ ಹಾಗೂ ಹೊಸ ವರ್ಷ ಆಚರಿಸಿದರು. ಮೈಸೂರಿನ ಕಮಾಂಡೋ ಪಡೆಯ ಸಿಬ್ಬಂದಿಯೋರ್ವರು ಕೇಕ್ ಕತ್ತರಿಸುವ ಮೂಲಕ ಜನ್ಮ ದಿನ ಆಚರಿಸಿಕೊಂಡರು.  ಪೋಲಿಸ್ ಬಿಗಿ ಭದ್ರತೆಯಲ್ಲಿಯಲ್ಲಿಯೇ ಮೈಸೂರಿನಲ್ಲಿ   ಹೊಸ ವರ್ಷ ವನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: