ಕ್ರೀಡೆ

ಕ್ರಿಕೆಟಿಗ ತಿಸಾರ ಪೆರೆರಾಗೆ ಶ್ರೀಲಂಕಾ ಸೇನೆಯಲ್ಲಿ ಮೇಜರ್ ಹುದ್ದೆ

ಕೊಲಂಬೊ,ಜ.1-ಶ್ರೀಲಂಕಾ ತಂಡದ ಸ್ಟಾರ್ ಆಲ್‌ರೌಂಡರ್‌ ತಿಸಾರ ಪೆರೆರಾ ಲಂಕಾದ ಸೇನೆಯಲ್ಲಿ ಮೇಜರ್‌ ಹುದ್ದೆ ಅಲಂಕರಿಸಿದ್ದಾರೆ.

ಶ್ರೀಲಂಕಾ ಸೇನೆಯ ಆರ್ಮಿ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ಶವೇಂದ್ರ ಸಿಲ್ವಾ ಅವರ ಆಹ್ವಾನವನ್ನು ಸ್ವೀಕರಿಸಿರುವ ಪೆರೆರಾ, ಸೇನೆಗೆ ಭರ್ತಿಯಾಗಿದ್ದಾರೆ.

ಶ್ರೀಲಂಕಾದ ಸ್ಥಳೀಯ ಪತ್ರಿಕೆಯ ವರದಿ ಪ್ರಕಾರ, ಲಂಕಾದ ಗಜಬಾ ರೆಜಿಮೆಂಟ್‌ನಲ್ಲಿ ಮೇಜರ್‌ ಹುದ್ದೆಯನ್ನು ಪೆರೆರಾ ಪಡೆದಿದ್ದಾರೆ. ಶ್ರೀಲಂಕಾ ತಂಡದ ಮಾಜಿ ನಾಯಕ ದಿನೇಶ್‌ ಚಾಂದಿಮಾಲ್‌ ಕೂಡ ಆರ್ಮಿ ಕ್ರಿಕೆಟ್‌ ತಂಡದ ಪರ ಆಡುವ ಸಲುವಾಗಿ ಇದೇ ವರ್ಷ ಸೇನೆಗೆ ಭರ್ತಿಯಾಗಿದ್ದರು.

ತಾವು ಸೇನೆಗೆ ಭರ್ತಿಯಾಗಿರುವ ಸಂಗತಿಯನ್ನು ಟ್ವಿಟರ್‌ ಮೂಲಕ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ. ಆರ್ಮಿ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ಶವೇಂದ್ರ ಸಿಲ್ವಾ ಅವರ ಆಹ್ವಾನವನ್ನು ಸ್ವೀಕರಿಸಿ ಸೇನೆಗೆ ಸೇರಿದ್ದೇನೆ. ಅವರಿಂದ ಆಹ್ವಾನ ಪಡೆದಿರುವುದು ನನ್ನ ಜೀವನದ ಅತ್ಯಂತ ದೊಡ್ಡ ಸಾಧನೆಯಾಗಿದೆ. ಥ್ಯಾಂಕ್ಯು ಸರ್‌! ಆರ್ಮಿ ಕ್ರಿಕೆಟ್‌ಗೆ ನನ್ನಿಂದ ಸಾಧ್ಯವಾದಷ್ಟು ಉತ್ತಮ ಕೊಡುಗೆ ನೀಡುವುದನ್ನು ಎದುರು ನೋಡುತ್ತಿದ್ದೇನೆ ಎಂದು ಪೆರೆರಾ ಟ್ವೀಟ್‌ ಮಾಡಿದ್ದಾರೆ.

ತಿಸಾರ ಪೆರೆರಾ, ಶ್ರೀಲಂಕಾ ಪರ 6 ಟೆಸ್ಟ್‌, 161 ಒಡಿಐ ಮತ್ತು 79 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ ಕ್ರಮವಾಗಿ 203, 2210 ಮತ್ತು 1169 ರನ್‌ಗಳನ್ನು ಗಳಿಸಿರುವ ಅವರು 11, 171 ಮತ್ತು 51 ವಿಕೆಟ್‌ಗಳನ್ನೂ ಪಡೆದು ಮಿಂಚಿದ್ದಾರೆ.

ಶ್ರೀಲಂಕಾ ತಂಡ ಜನವರಿಯಲ್ಲಿ ಭಾರತ ವಿರುದ್ಧ 3 ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಲ್ಲಿ ಪೈಪೋಟಿ ನಡೆಸಲಿದ್ದು, ಗುವಾಹಟಿಯಲ್ಲಿ ಜ.5ರಂದು ಮೊದಲ ಪಂದ್ಯ ನಡೆಯಲಿದೆ. (ಎಂ.ಎನ್)

Leave a Reply

comments

Related Articles

error: