ಮೈಸೂರು

ಹೂಲಾಕ್ ಗಿಬ್ಬನ್‍  ವೀಕ್ಷಕರ ವೀಕ್ಷಣೆಗೆ ಬಿಡುವ ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಸಿ.ಸಿ.ಪಾಟೀಲ್

ಮೈಸೂರು,ಜ.1:-  ಮೈಸೂರು ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿಂದು ಒಂದು ಜೊತೆ ಹೂಲಾಕ್ ಗಿಬ್ಬನ್‍ಗಳನ್ನು ವೀಕ್ಷಕರ ವೀಕ್ಷಣೆಗೆ ಬಿಡುವ ಕಾರ್ಯಕ್ರಮವನ್ನು  ಅರಣ್ಯ ಸಚಿವ ಸಿ.ಸಿ. ಪಾಟೀಲ್  ಉದ್ಘಾಟಿಸಿದರು.

ಈ ಸಂದರ್ಭ ಶಾಸಕ ಎಸ್.ಎ.ರಾಮದಾಸ್, ಬಿಜೆಪಿ ಮುಖಂಡ ಹೆಚ್.ವಿ.ರಾಜೀವ್, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.

ಮೈಸೂರು ಮೃಗಾಲಯ ಹಾಗೂ ಗೌಹಾತಿಯ ಅಸ್ಸಾಂ ಮೃಗಾಲಯದ ನಡುವಿನ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಅಸ್ಸಾಂ ಮೃಗಾಲಯದಿಂದ  13/12/2019ರಂದು ಮೈಸೂರು ಮೃಗಾಲಯಕ್ಕೆ ಆಗಮಿಸಿದ್ದ ಒಂದು ಜೊತೆ ಹೂಲಾಕ್ ಗಿಬ್ಬನ್‍ಗಳನ್ನು ದಿಗ್ಬಂಧನದ ಆವರಣದಲ್ಲಿ ಇರಿಸಲಾಗಿತ್ತು. ಇಡೀ ಮಧ್ಯ, ಪಶ್ಚಿಮ ಮತ್ತು ದಕ್ಷಿಣ ಭಾರತ ಮೃಗಾಲಯಗಳಲ್ಲಿ ಹೂಲಾಕ್ ಗಿಬ್ಬನ್‍ಗಳ ತನ್ನ ಸಂಗ್ರಹದಲ್ಲಿ ಹೊಂದಿರುವ ಏಕೈಕ ಮೃಗಾಲಯವು ಮೈಸೂರು ಮೃಗಾಲಯವಾಗಿದೆ ಎಂಬುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಹೂಲಾಕ್ ಗಿಬ್ಬನ್‍ಗಳು ವಿನಾಶದ ಅಂಚಿನಲ್ಲಿರುವ ಪ್ರಾಣಿಗಳಲ್ಲಿ ಒಂದಾಗಿದ್ದು, ಇಡೀ ವಿಶ್ವದಲ್ಲೇ ಇವುಗಳು 10,000 ಗಳಿಂದ 20,000 ಸಂಖ್ಯೆಯಲ್ಲಿರಬಹುದೆಂದು ಅಂದಾಜಿಸಲಾಗಿದೆ. ಭಾರತದಲ್ಲಿ ಇವುಗಳು

ಸುಮಾರು 12,000 ಸಂಖ್ಯೆಯಲ್ಲಿದ್ದು,  ಈಶಾನ್ಯ ಭಾರತದಲ್ಲಿ ಇವುಗಳನ್ನು ಹೆಚ್ಚಾಗಿ ಕಾಣಬಹುದು. ಇಂತಹ ಅಪರೂಪದ ಜಾತಿಯ ಹಾಗೂ ವಿನಾಶದ ಅಂಚಿನಲ್ಲಿರುವ ಹೂಲಾಕ್ ಗಿಬ್ಬನ್‍ಗಳನ್ನು   ಪ್ರಾಣಿಪ್ರಿಯರು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.  ಹೂಲಾಕ್ ಗಿಬ್ಬನ್‍ಗಳನ್ನು ಮೃಗಾಲಯದ ಪ್ರಾಣಿಸಂಗ್ರಹಣೆಗೆ ಸೇರ್ಪಡೆ ಮಾಡಲು ಸಹಕಾರವನ್ನು ನೀಡಿದ ಅಸ್ಸಾಂ ಮೃಗಾಲಯ, ಕೇಂದ್ರ ಮೃಗಾಲಯ ಪ್ರಾಧಿಕಾರ, ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ, ಕರ್ನಾಟಕ ಮೃಗಾಲಯ ಪ್ರಾಧಿಕಾರ ಹಾಗೂ ಮೃಗಾಲಯದ ಪ್ರಾಣಿಪಾಲಕರು/ಸಿಬ್ಬಂದಿಗಳು ಎಲ್ಲರಿಗೂ ಈ ಸಂದರ್ಭದಲ್ಲಿ ಮೃಗಾಲಯ ಆಡಳಿತವು ವಂದಿಸಿದೆ. (ಎಸ್.ಎಚ್)

Leave a Reply

comments

Related Articles

error: