ಪ್ರಮುಖ ಸುದ್ದಿ

ಸರ್ಕಾರಿ ಫಾರ್ಮಸಿಸ್ಟ್ ಸಂಘದ ಜಿಲ್ಲಾ ಶಾಖೆಯಿಂದ 5 ಹಂತಗಳಲ್ಲಿ ಪ್ರತಿಭಟನೆ

ರಾಜ್ಯ( ಮಡಿಕೇರಿ) ಜ.3 :- ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ಫಾರ್ಮಸಿಸ್ಟ್ ಸಂಘದ ಜಿಲ್ಲಾ ಶಾಖೆ ಐದು ಹಂತಗಳಲ್ಲಿ ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಿದೆ. ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಜ.2 ರಿಂದಲೇ ರಾಜ್ಯಾದ್ಯಂತ ಮುಷ್ಕರ ಆರಂಭಗೊಂಡಿದೆಯೆಂದು ಸಂಘದ ಪ್ರಮುಖರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷರಾದ ಕೆ.ಅಮೀನ, ಸಾರ್ವಜನಿಕರ ಹಿತದೃಷ್ಟಿಯಿಂದ ಕರ್ತವ್ಯವನ್ನು ಸಂಪೂರ್ಣ ಸ್ಥಗಿತಗೊಳಿಸದೆ, ‘ಕಪ್ಪು ಪಟ್ಟಿ’ ಧರಿಸಿ ಮುಷ್ಕರ ಆರಂಭಿಸಿದ್ದೇವೆ ಎಂದರು. ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಮೊದಲ ಹಂತದಲ್ಲಿ ಜ.12ರವರೆಗೆ ಈ ರೀತಿಯ ಸಾಂಕೇತಿಕ ಮುಷ್ಕರ ಮುಂದುವರೆಯಲಿದೆ. ಜ.30 ರಂದು 2ನೇ ಹಂತದ ಹೋರಾಟ ನಡೆಯಲಿದ್ದು, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಿಂದ ಆರೋಗ್ಯ ಇಲಾಖೆಯವರೆಗೆ ಬೃಹತ್ ಶಾಂತಿಯುತ ರ್ಯಾಲಿ ನಡೆಸಿ ರಾಜ್ಯ ಆಯುಕ್ತರಿಗೆ ಮನವಿ ಸಲ್ಲಿಸುವುದರ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದೆಂದರು.
ಮೂರನೇ ಹಂತದಲ್ಲಿ ಫೆ.10 ರಿಂದ 17ರವರೆಗೆ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಲಾಗುವುದು. 4ನೇ ಹಂತದ ಹೋರಾಟವಾಗಿ ಮಾ.10 ರಿಂದ 17ರವರೆಗೆ ರಾಜ್ಯಾದ್ಯಂತ ಎಲ್ಲಾ ಆಸ್ಪತ್ರೆಗಳ ಹೊರ ರೋಗಿಗಳ ಸೇವಾ ವಿಭಾಗದಲ್ಲಿ ಫಾರ್ಮಸಿಸ್ಟ್ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು. ಕೊನೆಯ ಮತ್ತು 5ನೇ ಹಂತದ ಹೋರಾಟವಾಗಿ ಏ.10 ರಿಂದ ವಿವಿಧ ಬೇಡಿಕೆಗಳು ಈಡೇರುವವರೆಗೆ ಇಲಾಖೆಯ ಇನ್ನಿತರ ಸಂಘಗಳೊಂದಿಗೆ ಒಗ್ಗೂಡಿ ರಾಜ್ಯಾದ್ಯಂತ ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಅಮೀನ ತಿಳಿಸಿದರು.
ಇತರ ಪದಾಧಿಕಾರಿಗಳು ಮಾತನಾಡಿ, ಫಾರ್ಮಸಿಸ್ಟ್‍ಗಳಾಗಿ ಕಾರ್ಯನಿರ್ವಹಿಸುವ ನಮಗೆ ಸಾಕಷ್ಟು ಒತ್ತಡಗಳಿವೆ. ಎರಡು ಮೂರು ವಿಭಾಗಗಳ ಹೆಚ್ಚುವರಿ ಕರ್ತವ್ಯ ನಿರ್ವಹಣೆಯ ಜವಾಬ್ದಾರಿಯನ್ನು ಕೂಡ ವಹಿಸಲಾಗುತ್ತಿದ್ದು, ದುಡಿಮೆ ಹೆಚ್ಚು ವೇತನ ಕಡಿಮೆ ಎನ್ನುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ಕೆ.ಗೀತಾ, ಉಪಾಧ್ಯಕ್ಷ ಕೆ.ಪಿ. ಬಸವರಾಜು, ನಿರ್ರ್ದೇಶಕ ಬಿ. ನಟರಾಜು, ಪದಾಧಿಕಾರಿಗಳಾದ ಪಿ.ಕೆ. ಶಶಿಧರ್ ಹಾಗೂ ಎನ್.ಇ.ಸುಧಾಕರ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: