ಪ್ರಮುಖ ಸುದ್ದಿ

ಸಿಎಎ ಮತ್ತು ಎನ್‍ಆರ್‍ಸಿ ಕಾಯ್ದೆಗೆ ವಿರೋಧ : ಜ.11 ರಂದು ಮಡಿಕೇರಿಯಲ್ಲಿ ಬೃಹತ್ ಜನಾಂದೋಲನ

ರಾಜ್ಯ( ಮಡಿಕೇರಿ) ಜ.3 :- ಕೇಂದ್ರ ಸರ್ಕಾರದ ಸಿಎಎ ಮತ್ತು ಎನ್‍ಆರ್‍ಸಿ ಕಾಯ್ದೆ ವಿರುದ್ಧ ಜಾತ್ಯತೀತ, ಪಕ್ಷಾತೀತ ಮತ್ತು ಬಿಜೆಪಿಯೇತರ ಶಕ್ತಿಗಳ ಪ್ರಗತಿಪರ ಜನಾಂದೋಲನ ವೇದಿಕೆ ವತಿಯಿಂದ ಜ.11 ರಂದು ಮಡಿಕೇರಿಯಲ್ಲಿ ಬೃಹತ್ ಜನಾಂದೋಲನ ಪ್ರತಿಭಟನಾ ಸಮಾವೇಶವನ್ನು ಆಯೋಜಿಸಿರುವುದಾಗಿ ವೇದಿಕೆಯ ಪ್ರಮುಖ ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರ ವಿ.ಪಿ.ಶಶಿಧರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ದೇಶದಲ್ಲಿರುವ ಐಕ್ಯತೆಯನ್ನು ಹಾಳು ಮಾಡುತ್ತಿದ್ದು, ಮುಸಲ್ಮಾನರನ್ನು ಗುರಿಯಾಗಿಸಿಕೊಂಡು ಕೆಲವು ಕಾಯ್ದೆಗಳನ್ನು ಜಾರಿಗೆ ತಂದಿದೆಯೆಂದು ಆರೋಪಿಸಿದರು. ಜನ ವಿರೋಧಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸಲು ಬಿಜೆಪಿಯೇತರ, ಜಾತ್ಯತೀತ ಮತ್ತು ಪಕ್ಷಾತೀತ ಸಂಘಟನೆಗಳು ಒಗ್ಗೂಡಿದ್ದು, ಜಿಲ್ಲೆಯ ವಿವಿಧೆಡೆ ಈಗಾಗಲೆ ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಸಮಾನ ಮನಸ್ಕ ಮುಖಂಡರ ಜೊತೆಯಲ್ಲಿ ಮಡಿಕೇರಿ, ನಾಪೋಕ್ಲು, ಸಿದ್ದಾಪುರ, ವೀರಾಜಪೇಟೆ, ನೆಲ್ಲಿಹುದಿಕೇರಿ ಸೇರಿದಂತೆ ವಿವಿಧೆಡೆ ಸಿಎಎ ಮತ್ತು ಎನ್‍ಆರ್‍ಸಿ ವಿರುದ್ಧ ಆಂದೋಲನ ನಡೆಯುತ್ತಿದೆ. ಜ.11 ರಂದು ಜಿಲ್ಲಾ ಮಟ್ಟದ ಬೃಹತ್ ಸಮಾವೇಶ ಗಾಂಧಿ ಮೈದಾನದಲ್ಲಿ ನಡೆಯಲಿದೆ. ನಗರದ ಫೀ. ಮಾ.ಕಾರ್ಯಪ್ಪ ಸರ್ಕಲ್‍ನಿಂದ ಗಾಂಧಿ ಮಂಟಪದವರೆಗೆ ಜಾಗೃತಿ ಜಾಥಾ ನಡೆಯಲಿದೆಯೆಂದು ವಿ.ಪಿ.ಶಶಿಧರ್ ಹೇಳಿದರು.
ಇದಕ್ಕೆ ಪೂರ್ವಭಾವಿಯಾಗಿ ಜ.5 ರಂದು ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಸಮಾನ ಮನಸ್ಕರ ಸಭೆ ನಡೆಯಲಿದೆ ಎಂದರು.
ಉಪವಾಸ ಸತ್ಯಾಗ್ರಹ
ಕೇಂದ್ರ್ರ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಗಣರಾಜ್ಯ ದಿನವಾದ ಜ.26 ರಿಂದ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ಹುತಾತ್ಮರಾದ ಮಹಾತ್ಮಾ ಗಾಂಧಿಯವರ ಪುಣ್ಯತಿಥಿ ದಿನವಾದ ಜ.30ರವರೆಗೆ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದೆಂದು ಶಶಿಧರ್ ತಿಳಿಸಿದರು.
ಕೇಂದ್ರ್ರದ ವಿರುದ್ಧದ ಜನಾಂದೋಲನಕ್ಕೆ ಕಾಂಗ್ರೆಸ್, ಜೆಡಿಎಸ್, ಎಡಪಕ್ಷಗಳಾದ ಸಿಪಿಐ(ಎಂ), ಸಿಪಿಐ(ಎಂಎಲ್), ಸಿಪಿಐ ಹಾಗೂ ಎಸ್‍ಡಿಪಿಐ, ಬಿಎಸ್‍ಪಿ ಸೇರಿದಂತೆ ದಲಿತ ಸಂಘರ್ಷ ಸಮಿತಿ ಮತ್ತು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಹೋರಾಟ ನಡೆಯಲಿದೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಮಾತನಾಡಿ, ಕೇಂದ್ರ್ರದ ವಿರುದ್ಧ ಜಾತ್ಯತೀತ ಶಕ್ತಿಗಳು ಒಗ್ಗೂಡುವ ಅನಿವಾರ್ಯತೆ ಎದುರಾಗಿದ್ದು, ಜ.11ರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ಸಿಪಿಐ(ಎಂಎಲ್) ಜಿಲ್ಲಾಧ್ಯಕ್ಷ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಗಳಿಂದಾಗಿ ದೇಶದ ಜನ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ತನ್ನ ವೈಫಲ್ಯಗಳನ್ನು ಮರೆಮಾಚುವುದಕ್ಕಾಗಿ ಕೇಂದ್ರ ಸರ್ಕಾರ ಸಿಎಎ ಮತ್ತು ಎನ್‍ಆರ್‍ಸಿಯಂತಹ ಕಾಯ್ದೆಗಳನ್ನು ಜಾರಿಗೆ ತಂದಿದೆಯೆಂದು ಆರೋಪಿಸಿದರು.
ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಟಿ.ಹೆಚ್. ಅಬೂಬಕ್ಕರ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸರ್ವಾಧಿಕಾರದ ಮೂಲಕ ಜನರ ಹೋರಾಟಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲವೆಂದರು. ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿ ಹಣವನ್ನು ನೀಡದೆ ಇರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿಯವರೂ ಬರಬಹುದು
ಸಿಪಿಐ(ಎಂ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಇ.ರ. ದುರ್ಗಾಪ್ರಸಾದ್ ಮಾತನಾಡಿ, ಸಿಎಎ ಮತ್ತು ಎನ್‍ಆರ್‍ಸಿ ಕಾಯ್ದೆಯನ್ನು ವಿರೋಧಿಸುವ ಬಿಜೆಪಿ ಮಂದಿ ಕೂಡ ಪ್ರಗತಿ ಪರ ಜನಾಂದೋಲನ ವೇದಿಕೆಯ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬಹುದೆಂದು ಕರೆ ನೀಡಿದರು.
ಬಿಜೆಪಿಯನ್ನು ಬೆಂಬಲಿಸುತ್ತಿದ್ದ ಕೆಲವು ಮಾಧ್ಯಮಗಳೇ ಇಂದು ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ತೆರೆದಿಡುತ್ತಿವೆ. ಜನ ವಿರೋಧಿ ಮತ್ತು ರೈತ ವಿರೋಧಿ ನೀತಿಗಳ ಮೂಲಕ ಹಳಿ ತಪ್ಪಿರುವ ಸರ್ಕಾರ, ಜನರ ಹಾದಿ ತಪ್ಪಿಸುವ ಯತ್ನ ಮಾಡುತ್ತಿದೆ ಎಂದು ಟೀಕಿಸಿದರು. ಸುದ್ದಿಗೋಷ್ಠೀಯಲ್ಲಿ ಸಿಪಿಐನ ಸುನಿಲ್ ಉಪಸ್ಥಿತರಿದ್ದು, ಜನಾಂದೋಲನಕ್ಕೆ ಬೆಂಬಲ ಸೂಚಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: