ಪ್ರಮುಖ ಸುದ್ದಿ

ಸರಕಾರಿ ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿಗಳ ಬೇಡಿಕೆ ಈಡೇರಿಕೆಗೆ ಆಗ್ರಹ

ರಾಜ್ಯ( ಮಡಿಕೇರಿ) ಜ.3 :- ಸರಕಾರಿ ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ಮತ್ತು ಇನ್ನಿತರ ವಿಭಾಗದ ಸಿಬ್ಬಂದಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸುವುದರೊಂದಿಗೆ ಸರಕಾರಕ್ಕೆ 10 ದಿನಗಳ ಗಡುವು ನೀಡಲಾಗುವುದು. ಅದರೊಳಗಾಗಿ ಬೇಡಿಕೆ ಈಡೇರದಿದ್ದರೆ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಕೊಡಗು ಜಿಲ್ಲಾ ಸರಕಾರಿ ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ಮತ್ತು ಇನ್ನಿತರ ವಿಭಾಗದ ಸಿಬ್ಬಂದಿಗಳ ಸಂಘದ ಅಧ್ಯಕ್ಷ ಪಿ.ಆರ್.ಭರತ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸರಕಾರ ಆಸ್ಪತ್ರೆಗಳ ಸ್ವಚ್ಛತೆಗೆ ಇತರ ವಿಭಾಗಗಳಿಗೆ ಖಾಯಂ ಸಿಬ್ಬಂದಿಗಳನ್ನು ನೇಮಕ ಮಾಡುವ ಬದಲು ಗುತ್ತಿಗೆ, ಹೊರಗುತ್ತಿಗೆ ಮೂಲಕ ನೌಕರರನ್ನು ನೇಮಿಸಿಕೊಳ್ಳುತ್ತಿದೆ. ಆದರೆ ಇಂತಹ ಕಾರ್ಮಿಕರ ಗುತ್ತಿಗೆದಾರರಿಗೂ ಕಾರ್ಮಿಕರಿಗೂ ಮುಖ ಪರಿಚಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳುವ ಸರಕಾರಿ ಅಧಿಕಾರಿಗಳು ಕೂಡಾ ಕಾರ್ಮಿಕರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕೂಡಲೇ ಕಾರ್ಮಿಕರ ಗುತ್ತಿಗೆದಾರರು ಹಾಗೂ ಕಾರ್ಮಿಕ ಮುಖಂಡ ಸಭೆ ಕರೆದು ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಸರಕಾರಿ ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ಮತ್ತು ಇನ್ನಿತರ ವಿಭಾಗದ ಸಿಬ್ಬಂದಿಗಳಿಗೆ ಮಾಸಿಕ ಕನಿಷ್ಟ 21ಸಾವಿರ ರೂ.ಗಳ ವೇತನ ನಿಗದಿ ಮಾಡಬೇಕು. ಇಂತಹ ಸಿಬ್ಬಂದಿಗಳನ್ನು ಸರಕಾರ ಗುತ್ತಿಗೆ, ಹೊರಗುತ್ತಿಗೆ ಮತ್ತು ಕಾಂಟ್ರಾಕ್ಟ್ ಪದ್ಧತಿಯಿಂದ ಬಿಡುಗಡೆಗೊಳಿಸಿ ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದೂ ಭರತ್ ಆಗ್ರಹಿಸಿದರು.
ಸರಕಾರಿ ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ಮತ್ತು ಇನ್ನಿತರ ವಿಭಾಗದ ಸಿಬ್ಬಂದಿಗಳಿಗೆ ಸರಕಾರ ನಿಗದಿಪಡಿಸಿದ ವೇತನವನ್ನು ಸಮರ್ಪಕವಾಗಿ ನೀಡದೆ ಗುತ್ತಿಗೆದಾರರು ವಂಚಿಸುತ್ತಿದ್ದು, ಪ್ರತೀತಿಂಗಳ 5ನೇ ತಾರಿಕಿನಂದು ವೇತನ ಪಾವತಿಸುವಂತಾಗಬೇಕು. ಅಲ್ಲದೆ ಸಿಬ್ಬಂದಿಗಳ ಪಿಎಫ್ ಹಣವನ್ನು ನೌಕರರ ಖಾತೆಗೆ ಜಮಾ ಮಾಡದೆ ವಂಚಿಸಲಾಗುತ್ತಿದ್ದು, ಇದನ್ನು ಕೂಡಾ ಕಡ್ಡಾಯವಾಗಿ ಜಮಾ ಮಾಡುವಂತಾಗಬೇಕು. ಅಲ್ಲದೆ ಇಎಸ್‍ಐ ಸೌಲಭ್ಯಕ್ಕಾಗಿ ನೌಕರರ ವೇತನದಿಂದ ಹಣ ಕಡಿತ ಮಾಡಲಾಗುತ್ತಿದ್ದರೂ, ನೌಕರರಿಗೆ ಅದರ ಸವಲತ್ತನ್ನು ನೀಡದೆ ಅನ್ಯಾಯ ಮಾಡಲಾಗುತ್ತಿದ್ದು, ಈ ಬಗ್ಗೆಯೂ ಸೂಕ್ತ ಕ್ರಮಕೈಗೊಳ್ಳುವಂತಾಗಬೇಕು ಎಂದು ಅವರು ಒತ್ತಾಯಿಸಿದರು.
ಎಲ್ಲಾ ನೌಕರರಿಗೂ ವರ್ಷಕ್ಕೆ ಎರಡು ಜೊತೆ ಸಮವಸ್ತ್ರ ನೀಡಬೇಕಲ್ಲದೆ, ಈಗಾಗಲೇ ಕಾರ್ಮಿಕರಿಗೆ ನೀಡಲು ಬಾಕಿ ಇರುವ ವೇತನವನ್ನು ಕೂಡಲೇ ಪಾವತಿ ಮಾಡುವಂತಾಗಬೇಕು ಎಂದು ಒತ್ತಾಯಿಸಿದ ಅವರು, ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ, ಗುತ್ತಿಗೆದಾರರಾಗಲಿ ಅವರ ಅಹವಾಲು ಆಲಿಸಲು ಮುಂದಾಗುತ್ತಿಲ್ಲ. ಇದನ್ನು ಗಮನಿಸಿದರೆ ಗುತ್ತಿಗೆ ನೌಕರರ ಹೆಸರಿನಲ್ಲಿ ಇವರುಗಳು ಕೋಟ್ಯಂತರ ರೂ. ಅವ್ಯವಹಾರ ನಡೆಸುತ್ತಿರುವ ಬಗ್ಗೆ ಸಂಶಯ ಮೂಡುತ್ತಿದೆ ಎಂದರು.
ಗುತ್ತಿಗೆ ಕಾರ್ಮಿಕರು ಯಾವುದೇ ಭದ್ತೆ ಇಲ್ಲದೆ ಕರ್ತವ್ಯ ನಿರ್ವಹಿಸುವಂತಾಗಿದ್ದು, ವೀರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ನಡೆದು ಅವರು ಆಸ್ಪತ್ರೆಗೆ ದಾಖಲಾಗಿದ್ದರೂ, ಇದುವರೆಗೆ ಗುತ್ತಿಗೆದಾರರಾಗಲಿ, ಅಧಿಕಾರಿಗಳಾಗಲಿ ಅವರ ಬಗ್ಗೆ ಯಾವುದೇ ಕಾಳಜಿ ವಹಿಸಿಲ್ಲ ಎಂದು ಆರೋಪಿಸಿದರು.
ಮುಷ್ಕರಕ್ಕೆ ಬೆಂಬಲ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಜ.8ರಂದು ನಡೆಸಲಿರುವ ರಾಷ್ಟ್ರ ವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ತಮ್ಮ ಸಂಘಟನೆ ಸಂಪೂರ್ಣ ಬೆಂಬಲ ನೀಡಲಿದೆ ಎಂದೂ ಪಿ.ಆರ್. ಭರತ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಹೆಚ್.ಜಾನಕಿ, ಪದಾಧಿಕಾರಿ ಟಿ.ಜೆ. ಶೀಲಾ ಉಪಸ್ಥಿತರಿದ್ದರು.
(ಕೆಸಿಐ,ಎಸ್.ಎಚ್)

Leave a Reply

comments

Related Articles

error: